ಆರ್.ಸಿ.ಬಿ. ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ ಸಂಭವಿಸಿದ ಸಾವು- ನೋವಿನ ನೇರ ಹೊಣೆಯನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರೇ ಹೊರಬೇಕಿದೆ. ಅವರು ಅಧಿಕಾರಿಗಳ ಮೂತಿಗೆ ಒರೆಸದೆ, ರಾಜೀನಾಮೆ ಕೊಡಬೇಕು ಎಂದು ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಶನಿವಾರ ಮಾತನಾಡಿದ ಅವರು, “ಪ್ರಕರಣದ ಕುರಿತು ಹೈಕೋರ್ಟಿನ ಪ್ರಸಕ್ತ ನ್ಯಾಯಮೂರ್ತಿಯಿಂದ ತನಿಖೆ ನಡೆಸಬೇಕು. ಯಾರ ತಪ್ಪೆಂಬುದು ಹೊರಬರಲಿ” ಎಂದು ಅಭಿಪ್ರಾಯಪಟ್ಟರು.
“ಪ್ರಕರಣದ ಕುರಿತು ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದೆ. ನೀವು ಯಾವುದೇ ನಿರ್ಧಾರ ಮಾಡಿದರೂ ಅದಕ್ಕೆ ನಾವು ಸಿದ್ಧ ಎಂದು ಸರಕಾರ ತಿಳಿಸಲಿ. ಬೆಂಗಳೂರು ಪೊಲೀಸ್ ಕಮಿಷನರ್ ಸರಕಾರದ ಅಂಗವೇ ಆಗಿದ್ದಾರೆ. ಸರಕಾರದ್ದೇನೂ ತಪ್ಪಿಲ್ಲವೆಂದಾದರೆ ಅವರನ್ನು ಅಮಾನತು ಮಾಡುವುದು ಸರಕಾರಕ್ಕೆ ಕಪ್ಪು ಚುಕ್ಕಿ” ಎಂದರು.
“ಇವತ್ತು ಆರ್‌ಸಿಬಿಯವರು, ಮ್ಯಾನೇಜ್‍ಮೆಂಟ್ ತಂಡದವರನ್ನೂ ಬಂಧಿಸಿದ್ದಾರೆ. ಯಾಕೆ ನಿಮ್ಮನ್ನು ಬಂಧಿಸಬಾರದು? ನಟ ಅಲ್ಲು ಅರ್ಜುನ್ ಕಾರ್ಯಕ್ರಮದಲ್ಲಿ ಒಬ್ಬರು ಸತ್ತಾಗ ಅಲ್ಲು ಅರ್ಜುನ್‍ರನ್ನು ಮನೆಯಿಂದ ಎಳೆದುಕೊಂಡು ಬಂದಿದ್ದರು. ಅಲ್ಲಿಯೂ ಕಾಂಗ್ರೆಸ್ ಸರಕಾರ ಇತ್ತು. ಅವರಂತೆ ಇಲ್ಲಿ ಯಾಕೆ ಆಗುತ್ತಿಲ್ಲ” ಎಂದು ಪ್ರಶ್ನಿಸಿದರು.
ತಪ್ಪಿಸಿಕೊಳ್ಳುವ ಯತ್ನ
“ಸಿದ್ದರಾಮಯ್ಯನವರು ತಪ್ಪಿಸಿಕೊಳ್ಳಲು ನೋಡುತ್ತಿದ್ದಾರೆ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆರ್.ಸಿ.ಬಿ. ತಂಡಕ್ಕೆ ಅಭಿನಂದನೆ ಇರುವ ಕುರಿತು, ಹಬ್ಬದ ವಾತಾವರಣದ ಬಗ್ಗೆ ಹಾಗೂ ಎಲ್ಲರೂ ಬರುವಂತೆ ಸಿದ್ದರಾಮಯ್ಯನವರು ಟ್ವೀಟ್ ಮಾಡಿದ್ದರು” ಎಂದು ವಿವರಿಸಿದರು.
“ರಾಜ್ಯ ಕ್ರಿಕೆಟ್ ಸಂಸ್ಥೆಯು 3ರಂದು ಒಂದು ಪತ್ರ ಬರೆದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯವರು ಕಾರ್ಯಕ್ರಮದಲ್ಲಿ ಭಾಗವಹಿಸುವ ಕುರಿತು ತಿಳಿಸಿದ್ದರು. ಡಿಪಿಆರ್ ಕಾರ್ಯದರ್ಶಿಗೆ ಈ ಪತ್ರ ಬರೆದಿದ್ದರು. ನಿಮ್ಮ ಡಿಪಿಆರ್ ಕಾರ್ಯದರ್ಶಿ, ನಿಮ್ಮ ಮುಖ್ಯ ಕಾರ್ಯದರ್ಶಿ ಏನು ಮಾಡುತ್ತಿದ್ದರು? ಮುಖ್ಯಮಂತ್ರಿಗಳೇ ಇದು ನೀವು ನಡೆದುಕೊಂಡ ರೀತಿ” ಎಂದು ಟೀಕಿಸಿದರು.