Homeಕರ್ನಾಟಕಕಾಲ್ತುಳಿತ | ನೈತಿಕತೆ ಇದ್ದರೆ ಸಿಎಂ, ಡಿಸಿಎಂ, ಗೃಹ ಸಚಿವರು ರಾಜೀನಾಮೆ ಕೊಡಲಿ: ಕುಮಾರಸ್ವಾಮಿ

ಕಾಲ್ತುಳಿತ | ನೈತಿಕತೆ ಇದ್ದರೆ ಸಿಎಂ, ಡಿಸಿಎಂ, ಗೃಹ ಸಚಿವರು ರಾಜೀನಾಮೆ ಕೊಡಲಿ: ಕುಮಾರಸ್ವಾಮಿ

ಫೈನಲ್ ಪಂದ್ಯ ಆರಂಭವಾಗುವುದಕ್ಕೆ ಮೊದಲೇ ಆರ್ ಸಿಬಿ ಆಡಳಿತ ಮಂಡಳಿ ಕಡೆಯವರು ವಿಜಯೋತ್ಸವ ಮಾಡುತ್ತೇವೆ ಎಂದು ನಗರ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಗೆಲ್ಲುತ್ತೇವೆ ಎಂದು ಆರ್‌ಸಿಬಿ ತಂಡಕ್ಕೆ ಕನಸು ಬಿದ್ದಿತ್ತಾ ಎಂದು ಪ್ರಶ್ನಿಸಿದ್ದಾರೆ.

ಕಾಲ್ತುಳಿತ ಪ್ರಕರಣದ ಹಿನ್ನೆಲೆಯಲ್ಲಿ ಶನಿವಾರ ಬೆಂಗಳೂರಿನಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಅಹಮದಾಬಾದ್ ನಲ್ಲಿ ಫೈನಲ್ಸ್ ಪಂದ್ಯ ಆರಂಭವಾಗಿದ್ದು ಏಳೂವರೆ ಗಂಟೆಗೆ. ಇಲ್ಲಿ ನೋಡಿದರೆ ಆರು ಗಂಟೆಗೆಲ್ಲ ವಿಜಯೋತ್ಸವ ಮಾಡುತ್ತೇವೆ, ನಮಗೆ ಅನುಮತಿ ಕೊಡಿ ಪೊಲೀಸರಿಗೆ ಆರ್ ಸಿಬಿ ಅವರು ಅರ್ಜಿ ಕೊಡುತ್ತಾರೆ! ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಮಾಡುತ್ತೇವೆ ಎಂದು ಅರ್ಜಿ ಹಾಕಿದ್ದಾರೆ. ಇದು ಹೇಗೆ ಸಾಧ್ಯ? ಪದ್ಯ ಆರಂಭಕ್ಕೆ ಮೊದಲೇ ಆರ್ ಸಿಬಿ ಆಡಳಿತ ಮಂಡಳಿಗೆ ತಮ್ಮ ತಂಡ ಗೆಲುತ್ತದೆ ಎಂದು ಹೇಗೆ ಗೊತ್ತು? ಎಂದು ಪ್ರಶೈಸಿದರು.

“ಈ ಎಲ್ಲಾ ಪತ್ರಗಳನ್ನು ಯಾರು ಬರೆದಿದ್ದರು? ಪಂದ್ಯ ಮುಗಿದ ಮರುದಿನ ಬೆಳಗ್ಗೆ 7.30ಕ್ಕೆ ಪೊಲೀಸ್ ಕಮೀಷನರ್ ಮೇಲೆ ಒತ್ತಡ ಹಾಕಿದ್ದು ಯಾರು? ಎನ್ನುವುದು ಗೊತ್ತಿದೆ. ಅದನ್ನೇ ಹೇಳಿದ್ದೇನೆ. ನಾನು ವಾಸ್ತವಾಂಶ ತಿಳಿದು ಮಾತಾಡಿದ್ದೇನೆ. ಅಸೂಯೆಯಿಂದ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ನಾನು ಮಾತನಾಡಿಲ್ಲ” ಎಂದು ಕೇಂದ್ರ ಸಚಿವರು ಹೇಳಿದರು.

ಅಸೂಕ್ಷ್ಮ ಸರ್ಕಾರಕ್ಕೆ ಕೊನೆಗೂ ಜ್ಞಾನೋದಯವಾಗಿದೆ

“ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಗೋವಿಂದ ರಾಜು ಅವರನ್ನು ಕಿತ್ತು ಹಾಕಿರುವುದು ಒಳ್ಳೆಯ ಕ್ರಮ. ಈ ಅಸೂಕ್ಷ್ಮ ಸರ್ಕಾರಕ್ಕೆ ಜ್ಞಾನೋದಯವಾಗಿರೋದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ, ಐವರು ಪೊಲೀಸ್ ಅಧಿಕಾರಿಗಳು ಅಮಾನತು ಮಾಡಿದ್ದು ಸರಿಯಲ್ಲ. ಈ ಅಮಾನತು ಅವಶ್ಯಕತೆ ಇರಲಿಲ್ಲ. ಈ ರೀತಿ ಸರ್ಕಾರ ನಡೆದುಕೊಂಡರೆ ಅಧಿಕಾರಿಗಳು ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲ. ಅವರ ತಪ್ಪುಗಳನ್ನು ಮುಚ್ಚಿಕೊಳ್ಳೋಕೆ ಅಧಿಕಾರಿಗಳ ತಲೆದಂಡ ಮಾಡಿರುವುದು ಸರಿಯಲ್ಲ. ಸರ್ಕಾರ ಸೂಕ್ಷ್ಮವಾಗಿ ಯೋಚನೆ ಮಾಡಬೇಕಿತ್ತು. ಈ ಘಟನೆಯ ಮೂಲ ಕಾರಣಗಳೇ ಬೇರೆ. ಆ ಕಾರಣಗಳನ್ನು ಸರ್ಕಾರ ಮರೆಮಾಚುತ್ತದೆ” ಎಂದು ಆರೋಪಿಸಿದರು.

ಹೆಣದ ಮೇಲೆ ಬಿಜೆಪಿ-ಜೆಡಿಎಸ್ ರಾಜಕೀಯ ಮಾಡುತ್ತಿವೆ ಎಂದು ಸಿಎಂ, ಡಿಸಿಎಂ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿ, “ಹೆಣದ ಮೇಲೆ ರಾಜಕೀಯ ಮಾಡುವ ಅವಶ್ಯಕತೆ ನಮಗೆ ಇಲ್ಲ. ಇದ್ದ ವಿಷಯವನ್ನೇ ನಾನು ಹೇಳಿದ್ದೇನೆ. ನನ್ನ ಮಿತ್ರ ಪಕ್ಷವೂ ಹೇಳಿದೆ. ನಡೆದಿರುವುದನ್ನು ಹೇಳಿದ್ದೇವೆ. ಇದರಲ್ಲಿ ರಾಜಕೀಯ ಏನಿದೆ? ಕ್ರೀಡಾಂಗಣದ ಮುಂದೆ ಮೃತದೇಹಗಳು ಬಿದ್ದ ಮೇಲೆಯೂ ಕ್ರೀಡಾಂಗಣಕ್ಕೆ ಹೋಗಿ ಕಪ್ ಗೆ ಮುತ್ತಿಕ್ಕಿ ಶೋ ಮಾಡಿದ್ದು ಯಾರು? ಜನರೇ ಎಲ್ಲವನ್ನೂ ನೋಡಿದ್ದಾರೆ. ಮಾಧ್ಯಮಗಳು ಎಲ್ಲವನ್ನೂ ಪ್ರಸಾರ ಮಾಡಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ, ಡಿಸಿಎಂ, ಗೃಹ ಸಚಿವರೇ ಹೊಣೆ ಹೊರಬೇಕು

“ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಪ್ರಕರಣದ ಸಂಪೂರ್ಣ ಹೊಣೆಯನ್ನು ಸಿಎಂ, ಡಿಸಿಎಂ, ಗೃಹ ಸಚಿವರೇ ತೆಗೆದುಕೊಳ್ಳಬೇಕು. ಈ ಮೂವರದು ಕೂಡ ತಪ್ಪಿದೆ. ಪಂದ್ಯ ಗೆದ್ದ 24 ಗಂಟೆ ಒಳಗೆ ಆತುರಾತುರವಾಗಿ ಸನ್ಮಾನ ಮಾಡೋದು ಏನಿತ್ತು? ಹೋಗಲಿ, ಸನ್ಮಾನವನ್ನಾದರೂ ಸರಿಯಾಗಿ ‌ಮಾಡಿದ್ರಾ? ಕಾಟಾಚಾರಕ್ಕೆ ಮಾಡಿದರು. ಆಟಗಾರರನ್ನು ಕೂಡ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಇವರು ಕೊಟ್ಟ ಶಾಲು, ಟೋಪಿ ಎಲ್ಲವನ್ನು ಅವರು ತಗೊಂಡು ಹೋದರೋ ಬಿಸಾಡಿ ಹೋದರೋ ಗೊತ್ತಿಲ್ಲ” ಎಂದರು.

“ನೈತಿಕತೆ ಇದ್ದರೆ ಸಿಎಂ, ಡಿಸಿಎಂ, ಗೃಹ ಸಚಿವರು ರಾಜೀನಾಮೆ ಕೊಡಬೇಕು. ಈಗಿನ ಕಾಲದಲ್ಲಿ ನಾವು ರಾಜಕಾರಣಿಗಳು ಭಂಡರು ಅಂತ ತೋರಿಸಿಕೊಂಡಿದ್ದೇವೆ. ಅವರಿಂದ ರಾಜೀನಾಮೆ ನಿರೀಕ್ಷೆ ಮಾಡೋಕೆ ಆಗುವುದಿಲ್ಲ. ವಿರೋಧ ಪಕ್ಷವಾಗಿ ನಾವು ಒತ್ತಾಯ ಮಾಡಿದ್ದೇವೆ. ಹೆಣದ ಮೇಲೆ ರಾಜಕೀಯ ಮಾಡೋ ದುರ್ಗತಿ ನಮಗೆ ಬಂದಿಲ್ಲ. ಅದು ಬರೋದು ಇಲ್ಲ” ಎಂದು ಹೇಳಿದರು.

ಡಾ. ರಾಜ್ ಅವರ ನಿಧನದ ದಿನಕ್ಕೆ ಹೋಲಿಸುವುದು ಸರಿಯಲ್ಲ

“ವರನಟ ಡಾ. ರಾಜ್ ಕುಮಾರ್ ಅವರ ನಿಧನದ ಸಂದರ್ಭದಲ್ಲಿ ಏನೇನು ನಡೆಯಿತೋ ಎನ್ನುವುದು ಈಗಾಗಲೇ ಹೇಳಿದ್ದೇನೆ. ಈ ಸರ್ಕಾರ ಅಣ್ಣಾವ್ರ ನಿಧನದ ವಿಷಯ ಇಟ್ಟುಕೊಂಡು ಕಾಲ್ತುಳಿತ ಪ್ರಕರಣದಲ್ಲಿ ರಕ್ಷಣೆ ಪಡೆಯೋದು ಬೇಡ. ರಾಜ್ ಕುಮಾರ್ ಅವರು ನಿಧನರಾದ ಸಂದರ್ಭದಲ್ಲಿ ಅಶಾಂತಿ ಉಂಟು ಮಾಡಲು ನಿರ್ದಿಷ್ಟವಾಗಿ ಕೆಲವರು ಪ್ರಯತ್ನಪಟ್ಟರು. ಸೀಮೆಎಣ್ಣೆ, ಪೆಟ್ರೋಲ್ ತಂದು ಬೆಂಗಳೂರು ನಗರದಲ್ಲಿ ಶಾಂತಿಯುತವಾಗಿ ನಡೆಯಬೇಕಿದ್ದ ವರನಟರ ಅಂತಿಮಯಾತ್ರೆ, ಅಂತ್ಯ ಸಂಸ್ಕಾರದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸವನ್ನು ಕೆಲವರು ವ್ಯವಸ್ಥಿತವಾಗಿ ಮಾಡಿದರು. ಆಗ ಗೋಲಿಬಾರ್ ಆಯಿತು. ಇಬ್ಬರು ಸಾವನ್ನಪ್ಪಿದರು. ಅದನ್ನು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಆ ಘಟನೆಗೂ ಕಾಲ್ತುಳಿತಕ್ಕೆ ಹೋಲಿಕೆ ಮಾಡಬಾರದು” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments