2023–24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಎಂದಿನಂತೆ ಈ ಬಾರಿಯೂ ಬಾಲಕಿಯರು ಹಾಗೂ ಗ್ರಾಮೀಣ ಭಾಗದ ಮಕ್ಕಳೇ ಹೆಚ್ಚಿನ ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ.
ಶೇ 81.11 ಬಾಲಕಿಯರು ಹಾಗೂ ಶೇ 65.90 ಬಾಲಕರು ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಶೇ 74.17 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, 72.83 ಮಕ್ಕಳು ಪಾಸ್ ಆಗಿದ್ದಾರೆ.
ಅಂಕಿತಾ ಬಸಪ್ಪ ಕೊನ್ನೂರು ರಾಜ್ಯಕ್ಕೆ ಪ್ರಥಮ
ಬಾಗಲಕೋಟೆ ಜಿಲ್ಲೆಯ ಮುಧೋಳದ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊನ್ನೂರು 625/625ಕ್ಕೆ ಅಂಕ ಪಡೆದುಕೊಳ್ಳುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಒಟ್ಟು 7 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಅತಿ ಹೆಚ್ಚು ಅಂಕ ಪಡೆದ ಉಳಿದ ವಿದ್ಯಾರ್ಥಿಗಳ ವಿವರ
ಮೇದಾ ಪಿ ಶೆಟ್ಟಿ (ಬೆಂಗಳೂರು) 625ಕ್ಕೆ 624 ಅಂಕ
ಹರ್ಷಿತಾ ಡಿಎಂ (ಮಧುಗಿರಿ) 625ಕ್ಕೆ 624 ಅಂಕ
ಚಿನ್ಮಯ್ (ದಕ್ಷಿಣ ಕನ್ನಡ) 625ಕ್ಕೆ 624 ಅಂಕ
ಸಿದ್ದಾಂತ್ (ಚಿಕ್ಕೊಡಿ) 625ಕ್ಕೆ 624 ಅಂಕ
ದರ್ಶನ್ (ಶಿರಸಿ) 625ಕ್ಕೆ 624 ಅಂಕ
ಚಿನ್ಮಯ್ (ಶಿರಸಿ) 625ಕ್ಕೆ 624 ಅಂಕ
ಶ್ರೀರಾಮ್ (ಶಿರಸಿ) 625ಕ್ಕೆ 624 ಅಂಕ
ಫಲಿತಾಂಶ ವೀಕ್ಷಣೆ ಹೇಗೆ? ಫಲಿತಾಂಶವನ್ನು ಮಂಡಳಿಯ ಜಾಲತಾಣ https://karresults.nic.in ನಲ್ಲಿ ವೀಕ್ಷಿಸಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಹೇಳಿದೆ.
4.41 ಲಕ್ಷ ಬಾಲಕರು, 4.28 ಲಕ್ಷ ಬಾಲಕಿಯರೂ ಸೇರಿದಂತೆ ಒಟ್ಟು 8.69 ಲಕ್ಷ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಇದೇ ಮೊದಲ ಬಾರಿ ಮೂರು ಪರೀಕ್ಷೆಗಳನ್ನು ಪರಿಚಯಿಸಲಾಗಿದ್ದು, ಮೇ ಮೂರನೇ ವಾರದಲ್ಲೇ ಎರಡನೇ ಪರೀಕ್ಷೆ ಆರಂಭವಾಗಲಿದೆ.
ಉತ್ತೀರ್ಣರಾದ ವಿದ್ಯಾರ್ಥಿಗಳು ಸಹ ಉಳಿದ ಎರಡು ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ಯಾವ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳು ಬರುತ್ತವೆಯೋ ಅದರ ಅಂಕಪಟ್ಟಿ ಪಡೆಯಬಹುದು.