Homeಕರ್ನಾಟಕಚನ್ನಪಟ್ಟಣ ಅಭಿವೃದ್ಧಿಗೆ ₹200 ಕೋಟಿ ವಿಶೇಷ ಅನುದಾನ: ಡಿ ಕೆ ಶಿವಕುಮಾರ್

ಚನ್ನಪಟ್ಟಣ ಅಭಿವೃದ್ಧಿಗೆ ₹200 ಕೋಟಿ ವಿಶೇಷ ಅನುದಾನ: ಡಿ ಕೆ ಶಿವಕುಮಾರ್

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸುಮಾರು ₹150 ಕೋಟಿಯಿಂದ ₹200 ಕೋಟಿ ವಿಶೇಷ ಅನುದಾನ ತರುವೆ. ನಿಮಗೆ ಅಭಿವೃದ್ಧಿಯ ಹಸಿವಿನ ಜೊತೆಗೆ ನೋವು ಸಹ ಇದೆ. ಅದನ್ನು ನೀಗಿಸುವ ಕೆಲಸ ಮಾಡುತ್ತೇನೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್‌ ಹೇಳಿದರು.

ಚನ್ನಪಟ್ಟಣ ತಾಲ್ಲೂಕಿನ ಬೇವೂರು ಗ್ರಾಮದಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ಜನಸ್ಪಂದನ ಸಭೆಯಲ್ಲಿ ಮಾತನಾಡಿದ ಅವರು, “ಕ್ಷೇತ್ರದ ಹಿಂದಿನ ಶಾಸಕರು ಏನೋ ಲೆಕ್ಕಾಚಾರದ ಮೇಲೆ ನಿಮ್ಮ ಹೃದಯ ಗೆದ್ದಿದ್ದರು. ಈಗ ನಾನು ನಿಮ್ಮ ಹೃದಯ ಗೆಲ್ಲಲು ಬಂದಿದ್ದೇನೆ. ನಮ್ಮ ಕೈ ಬಲಪಡಿಸಿ” ಎಂದು ಮನವಿ ಮಾಡಿದರು.

“ಈ ಬಾರಿ ಚನ್ನಪಟ್ಟಣದಲ್ಲಿ ನಿಮಗೆ ಬೇಕಾದವರು ಶಾಸಕರಾಗಿ ಆಯ್ಕೆಯಾಗುತ್ತಾರೆ. ಮಾಜಿ ಶಾಸಕರಿಗೆ ನಾವು ಮಾಡುತ್ತಿರುವಂತಹ ಕಾರ್ಯಕ್ರಮಗಳನ್ನು ಮಾಡುವುದರಲ್ಲಿ ಆಸಕ್ತಿ ಇರಲಿಲ್ಲ. ನಾವು ಕನಕಪುರದಲ್ಲೂ ಇದೇ ರೀತಿಯ ಕಾರ್ಯಕ್ರಮ ಮಾಡಿ ಜನರ ಸಮಸ್ಯೆ ಕೇಳಿ ಪರಿಹರಿಸಿದ್ದೆವು. ಅದನ್ನೇ ಇಲ್ಲಿ ಮಾಡುತ್ತಿದ್ದೇವೆ” ಎಂದು ಹೇಳಿದರು.

“ಚನ್ನಪಟ್ಟಣ ಜನತೆ ಜೊತೆ ನನ್ನ ಸಂಬಂಧ ಭಕ್ತನಿಗೂ ಭಗವಂತನಿಗೂ ಇರುವ ಸಂಬಂಧ. ನಿಮ್ಮನ್ನು ಬಿಟ್ಟು ಹೋಗುವ ವ್ಯಕ್ತಿ ನಾನಲ್ಲ. ಬದಲಿಗೆ, ಯಾವಾಗಲೂ ಜೊತೆಗಿರುತ್ತೇನೆ” ಎಂದು ಭರವಸೆ ನೀಡಿದರು.

“ಕುಮಾರಸ್ವಾಮಿ ಅವರು ಅಧಿಕಾರಿಗಳನ್ನು ಗುಲಾಮರು ಎಂದಿದ್ದಾರೆ. ಅಧಿಕಾರಿಗಳು ಯಾರಿಗೂ ಗುಲಾಮರಾಗೋದು ಬೇಡ. ಸರ್ಕಾರದ ಕೆಲಸ ದೇವರ ಕೆಲಸ ಎಂದು ವಿಧಾನಸೌಧದಲ್ಲಿ ಬರೆದಿದೆ. ಅದರಂತೆ, ಅಧಿಕಾರಿಗಳು ಜನರ ಸೇವೆ ಮಾಡಬೇಕು ಎಂದು ಆ ಹುದ್ದೆಗೆ ಬಂದಿದ್ದಾರೆ. ಅವರು ಯಾರಿಗೂ ಗುಲಾಮರಾಗುವುದಿಲ್ಲ” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದನೆ

ಗ್ರಾಮಕ್ಕೆ ಬಸ್‌ ವ್ಯವಸ್ಥೆ ಸರಿಯಾಗಿಲ್ಲ ಎಂದು ಸಭೆಯಲ್ಲಿ ವಿದ್ಯಾರ್ಥಿಗಳ ಗುಂಪೊಂದು ಅಹವಾಲು ಸಲ್ಲಿಸಿತು. ಅದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ಸೋಮವಾರದಿಂದ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸ್ಥಳದಲ್ಲಿದ್ದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಸೂಚನೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments