Homeಕರ್ನಾಟಕಎಸ್‌ಪಿ, ಡಿಎಸ್‌ಪಿ, ಐಜಿಗಳು ಪ್ರತಿ ಠಾಣೆಗಳಿಗೆ ಭೇಟಿ ನೀಡುವುದು ಕಡ್ಡಾಯ: ಸಿಎಂ ಸಿದ್ದರಾಮಯ್ಯ ಸೂಚನೆ

ಎಸ್‌ಪಿ, ಡಿಎಸ್‌ಪಿ, ಐಜಿಗಳು ಪ್ರತಿ ಠಾಣೆಗಳಿಗೆ ಭೇಟಿ ನೀಡುವುದು ಕಡ್ಡಾಯ: ಸಿಎಂ ಸಿದ್ದರಾಮಯ್ಯ ಸೂಚನೆ

ಎಲ್ಲ ಎಸ್‌ಪಿ, ಡಿಎಸ್‌ಪಿ ಹಾಗೂ ಐಜಿಗಳು ಪೊಲೀಸ್ ಮ್ಯಾನ್ಯುಯಲ್ ತಮ್ಮ ವ್ಯಾಪ್ತಿಯ ಪ್ರಕಾರ ಪ್ರತಿ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಕಡ್ಡಾಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.

ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ 2024ರ ಹಿರಿಯ ಪೊಲೀಸ್ ಅಧಿಕಾರಿಗಳ ಸಮಾವೇಷ ಉದ್ಘಾಟಿಸಿ, ನೂತನ ತಂತ್ರಾಂಶಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

“ನಿಮ್ಮ ವ್ಯಾಪ್ತಿಯಲ್ಲಿ ಕ್ಲಬ್‌ಗಳು, ಇಸ್ಪೀಟ್, ಬೆಟ್ಟಿಂಗ್, ಡ್ರಗ್ಸ್ ಗಳನ್ನು ನಿಲ್ಲಿಸದಿದ್ದರೆ ಎಸ್‌ಪಿ ಮತ್ತು‌ ಐಜಿ ಮಟ್ಟದ ಅಧಿಕಾರಿಗಳನ್ನೂ ನೇರ ಹೊಣೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು. ಎಸ್‌ಪಿ-ಐಜಿಗಳು ಪ್ರತಿ ಠಾಣೆಗಳಿಗೆ ಹೋಗಿ ಪರಿಶೀಲನೆ ನಡೆಸಿದರೆ ಇವನ್ನೆಲ್ಲಾ ತಪ್ಪಿಸಬಹುದು” ಎಂದರು.

“ನಾಳೆಯಿಂದಲೇ ಎಸ್‌ಪಿ, ಐಜಿಗಳು ಠಾಣೆಗಳಿಗೆ ಭೇಟಿ ನೀಡಬೇಕು. ಭೇಟಿ ನೀಡಿ ಅರ್ಧಗಂಟೆಯಲ್ಲಿ ಶಾಸ್ತ್ರ ಮುಗಿಸಬಾರದು. ಕೂಲಂಕುಶ ಪರಿಶೀಲನೆ ನಡೆಸಬೇಕು” ಎಂದು ಎಚ್ಚರಿಸಿದರು.

ಫೇಕ್ ನ್ಯೂಸ್ ಪ್ರಸಾರ ತಡೆಗಟ್ಟಿ

“ಫೇಕ್ ನ್ಯೂಸ್‌ಗಳು ಸಮಾಜದ ನೆಮ್ಮದಿಗೆ ಕಂಟಕವಾಗಿವೆ. ಇವು ವಿಪರೀತ ಹೆಚ್ಚಾಗುತ್ತಿವೆ. ಇವುಗಳ ತಡೆಗೆ ಫ್ಯಾಕ್ಟ್‌ ಚೆಕ್‌ ಘಟಕಗಳನ್ನು ಮಾಡಿದ್ದೇವೆ. ಆದರೂ ಫೇಕ್ ನ್ಯೂಸ್ ಗಳು ಹೆಚ್ಚಾಗುತ್ತಿವೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಸದ್ಯ ಫೇಕ್ ನ್ಯೂಸ್ ತಡೆಯಲು ಆಗುತ್ತಿರುವ ಕೆಲಸ ಸಾಲುತ್ತಿಲ್ಲ” ಎಂದರು.

ಡ್ರಗ್ಸ್ ಪೂರ್ತಿ ನಿಂತಿಲ್ಲ ಏಕೆ?

“ಡ್ರಗ್ಸ್ ಮಾರೋರು ಯಾರು? ರೌಡಿಗಳು ಯಾರು?/ರಿಯಲ್ ಎಸ್ಟೇಟ್ ಮಾಡೋರು ಯಾರು ಎನ್ನುವುದು ಆಯಾ ಠಾಣಾಧಿಕಾರಿಗಳಿಗೆ ಗೊತ್ತಿರತ್ತೆ. ಆದರೂ ಯಾಕೆ ನಿಲ್ಲುತ್ತಿಲ್ಲ‌? ನಿಮಗೆ ಗನ್ ಗಳನ್ನು ಕೊಟ್ಟಿರುವುದು ಏಕೆ ? ಈ ಬಗ್ಗೆ ರೌಡಿಗಳಿಗೆ ಏಕೆ ಭಯವಿಲ್ಲ. ರೌಡಿಗಳಿಗೆ ಪೊಲೀಸ್ ಭಯ ಇರಬೇಕು” ಎಂದು ಹೇಳಿದರು.

“ಕೆಲವು ಪೊಲೀಸರಿಗೆ ಇ-ಬೀಟ್ ವ್ಯವಸ್ಥೆ ಜಾರಿಯಲ್ಲಿರುವುದೇ ಗೊತ್ತಿಲ್ಲ ಎಂದರೆ ನಾಚಿಕೆಗೇಡು. ಇದನ್ನು ಸರಿಪಡಿಸಿಕೊಳ್ಳಿ” ಎಂದು ಸಲಹೆ ನೀಡಿದರು.

ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಕೋಮುಗಲಭೆ ಇಲ್ಲದಂತೆ ಕಾನೂನು ಸುವ್ಯವಸ್ಥೆ ಕಾಪಾಡಿದಕ್ಕೆ ಗೃಹ ಸಚಿವರಿಗೆ, ಕರ್ನಾಟಕ ಪೊಲೀಸ್ ಗೆ ಮುಖ್ಯಮಂತ್ರಿಗಳು ಅಭಿನಂಧಿಸಿದರು.‌

“ಕಾನೂನು ಸುವ್ಯವಸ್ಥೆ ಸುರಕ್ಷಿತವಾಗಿದ್ದರೆ ಅಭಿವೃದ್ಧಿ, ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿ ಸಾಧ್ಯ. ಇವೆಲ್ಲದರಿಂದ ತಲಾ ಆದಾಯ, ಜಿಡಿಪಿ ಬೆಳವಣಿಗೆ ಆಗ್ತದೆ. ನಮ್ಮ ಸಮಾಜ ಜಾತಿ ವ್ಯವಸ್ಥೆಯಿಂದಾಗಿ ಅಸಮಾನತೆಯಿಂದ ಕೂಡಿದೆ” ಎಂದು ಹೇಳಿದರು.

“ಹುಬ್ಬಳ್ಳಿಯಲ್ಲಿ ಒಂದರ ಹಿಂದೆ ಮತ್ತೊಂದು ಕೊಲೆಗಳು ನಡೆದವು. ಇಂಟೆಲಿಜೆಂಟ್ ಪೊಲೀಸರು ಎಚ್ಚರ ಇದ್ದಿದ್ದರೆ ಎರಡನೇ ಕೊಲೆ ತಪ್ಪಿಸಬಹುದಿತ್ತು. ಅದಕ್ಕೇ ಹಿರಿಯ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕಾಯಿತು.‌ ಇವರ ನಿರ್ಲಕ್ಷ್ಯದಿಂದ ಕೊಲೆ ಆಗಿದೆ. ಈ ಕೊಲೆ ತಪ್ಪಿಸಬಹುದಿತ್ತು. ಜನರಿಗೆ ಪೊಲೀಸ್ ಬಳಿ ಹೋದರೆ ನ್ಯಾಯ ಸಿಗುತ್ತದೆ ಎನ್ನುವ ಆತ್ಮ ವಿಶ್ವಾಸ ಹೆಚ್ಚಾಗಬೇಕು. ಶಾಂತಿ ಸಭೆಗಳನ್ನು ಚಾಚೂ ತಪ್ಪದೆ ಕಡ್ಡಾಯವಾಗಿ ನಿಯಮಿತವಾಗಿ ನಡೆಸಲೇಬೇಕು” ಎಂದು ತಿಳಿಸಿದರು.

“ವರ್ಗಾವಣೆಗೆ ಪ್ರಭಾವ ಬೀರುವವರ ವಿರುದ್ಧ, ಹಣ ಕೊಟ್ಟು ಟ್ರಾನ್ಸ್ ಫರ್ ಗೆ ಪ್ರಯತ್ನಿಸುವ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ನಿಮಗೆ ಸಮಸ್ಯೆಗಳಿದ್ದರೆ ಗೃಹ ಸಚಿವರಿಗೆ, ಪೊಲೀಸ್ ಮಹಾ ನಿರ್ದೇಶಕರಿಗೆ ತಿಳಿಸಿ ಸರಿಪಡಿಸಿಕೊಳ್ಳಿ. ಕಾನೂನು ಮೀರಿ ಕೆಲಸ ಮಾಡಿ ಎಂದು ಸರ್ಕಾರ ಯಾವತ್ತೂ ಬಯಸಲ್ಲ. ಕಾನೂನು ಪ್ರಕಾರ ಕೆಲಸ ಮಾಡದಿದ್ದರೆ ಸರ್ಕಾರ ಸಹಿಸಲ್ಲ” ಎಂದು ಎಚ್ಚರಿಸಿದರು.

ಗೃಹ ಸಚಿವ ಜಿ.ಪರಮೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಡಿಜಿ-ಐಜಿ ಡಾ.ಅಲೋಕ್ ಮೋಹನ್, ಸರ್ಕಾರದ ಕಾರ್ಯದರ್ಶಿ ಕೆ.ವಿ.ತ್ರಿಲೋಕ್ ಚಂದ್ರ ಅವರುಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments