ಕೇಂದ್ರ ಬಿಜೆಪಿ ಸರ್ಕಾರ ಜನರಿಗೆ ಉಜ್ವಲ ಯೋಜನೆ ಬದಲಾಗಿ ಸೌದೆ ಒಲೆ ಯೋಜನೆ ನೀಡಿದೆ. ಅಚ್ಛೇದಿನ ಏನಾಯ್ತು? ಈಗ ಇರುವುದನ್ನು ಕಚ್ಚಾ ದಿನ ಎಂದು ಹೇಳಬೇಕಾ? ಎಂದು ಬಿಜೆಪಿ ನಾಯಕರನ್ನು ಕೇಳಬಯಸುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.
“ಪಂಚರಾಜ್ಯ ಚುನಾವಣೆ ನಡೆಯುತ್ತಿದೆ. ಜನರು ಪರದಾಡುತ್ತಿದ್ದು, ಹೊಟೇಲ್ ಗಳು ಬಂದ್ ಆಗುತ್ತಿವೆ. ಜನ ವಿದ್ಯುತ್ ಒಲೆ ಬಳಸುವ ಅನಿವಾರ್ಯತೆ ಎದುರಾಗಿದೆ. ಕಳೆದ ಹದಿನೈದು ದಿನಗಳಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ ಪ್ರಮಾಣ 10% ಏರಿಕೆಯಾಗಿದೆ. ಕೇಂದ್ರ ಸರ್ಕಾರ ಜನರಿಗೆ ಸೌದೆ ಭಾಗ್ಯ ನೀಡಿದ್ದು, ಎಲ್ಲಿಂದ ಸೌದೆ ಒದಗಿಸುವುದು?” ಎಂದು ಲೇವಡಿ ಮಾಡಿದರು.
“ಯುದ್ಧಗಳ ನೆಪ, ಕೇಂದ್ರ ಸರ್ಕಾರದ ತಪ್ಪು ನಿರ್ಧಾರ, ನೀತಿಗಳಿಂದಾಗಿ ಇಂದು ದೇಶದ ಜನ ಬೆಲೆ ಏರಿಕೆಯಿಂದ ನರಳುತ್ತಿದ್ದಾರೆ. ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಮಾತ್ರವಲ್ಲ, ಟೋಲ್ ಶುಲ್ಕ, ರೈಲ್ವೇ ಟಿಕೆಟ್ ದರ ಎಲ್ಲವೂ ಹೆಚ್ಚಾಗಿದೆ. ಕೆಲವು ಅನಿವಾರ್ಯ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಬೆಲೆ ಏರಿಕೆ ತೀರ್ಮಾನ ಮಾಡಿದಾಗ ಯಾವ ರೀತಿ ಟೀಕೆ ಟಿಪ್ಪಣಿ ಬಂದಿವೆ ಎಂದು ಎಲ್ಲರಿಗೂ ಗೊತ್ತಿದೆ. ಸಾಮಾನ್ಯ ಜನರ ಮೇಲೆ ಕೇಂದ್ರ ಸರ್ಕಾರ ಬೆಲೆ ಏರಿಕೆ ಯುದ್ಧ ಮಾಡುತ್ತಿದೆ” ಎಂದರು.
“ಜನರನ್ನ ಕೇಂದ್ರ ಸರ್ಕಾರ ಫೂಲ್ ಮಾಡುತ್ತಿದೆ. ನಾವು ಪಾದಯಾತ್ರೆ ಮಾಡಿದಾಗ ಈ ಬೆಲೆ ಏರಿಕೆ ಸಮಸ್ಯೆಯಿಂದ ಜನರು ಕಂಗೆಟ್ಟಿದ್ದು, ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆ ನೀಡಿ ಅವರಿಗೆ ಶಕ್ತಿ ತುಂಬಿದ್ದೇವೆ. ಈಗ ನಮ್ಮ ಗ್ಯಾರಂಟಿ ಯೋಜನೆಗಳು ಜನರಿಗೆ ಆರ್ಥಿಕವಾಗಿ ರಕ್ಷಣೆ ನೀಡಿವೆ” ಎಂದು ಹೇಳಿದರು.
“900 ಔಷಧಗಳ ದರ ಏರಿಕೆ ಮಾಡಲಾಗಿದೆ. 12% ಜಿಎಸ್ ವಿಧಿಸಲಾಗಿದೆ. ಎನ್ ಪಿಪಿಎ ಬೆಲೆ ಏರಿಕೆ ಮಾಡಿ ಇವುಗಳಿಗೆ ಶೇ 10.7 ರಷ್ಟು ಇದ್ದ ತೆರಿಗೆಯನ್ನು ಶೇ 12 ಕ್ಕೆ ಏರಿಕೆ ಮಾಡಲಾಗಿದೆ. ಅಗತ್ಯ ವಸ್ತುಗಳಾದ ಪ್ಲಾಸ್ಟಿಕ್ ಪೈಪ್ ಸೇರಿದಂತೆ ಇತರೇ ವಸ್ತುಗಳ ಬೆಲೆಯನ್ನು ಟನ್ ಗೆ 7 ಸಾವಿರ ಹೆಚ್ಚಳ ಮಾಡಲಾಗಿದೆ. ಈಗಾಗಲೇ ಲೋಕೋಪಯೋಗಿ ಇಲಾಖೆಯಿಂದ ಬಿಟುಮಿನ್ ಹಾಕಲು ಟೆಂಡರ್ ಕರೆಯಲಾಗಿದೆ. ಈಗಾಗಲೇ ಕೆಲಸ ಪ್ರಾರಂಭ ಮಾಡಲಾಗಿದೆ. ಬೆಲೆ ಹೆಚ್ಚಳದಿಂದ ಕೆಲಸ ನಿಲ್ಲಿಸುವುದು ಬೇಡ ಸರ್ಕಾರವೇ ನೇರವಾಗಿ ಬಿಟುಮಿನ್ ಅನ್ನು ಸರಬರಾಜು ಮಾಡಲಿದೆ ಎಂದು ಬೆಂಗಳೂರಿನ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ತಿಳಿಸಿದ್ದೇನೆ” ಎಂದರು.
ಸಿಮೆಂಟ್, ಕಬ್ಬಿಣ ಬೆಲೆ ಹೆಚ್ಚಳ
“ಸಿಮೆಂಟ್ ಬೆಲೆಯೂ ಸಹ 50 ರಿಂದ 100 ರೂಪಾಯಿಗೆ ಹೆಚ್ಚಳವಾಗಿದೆ. ಇದರ ಹಿಂದೆ ದೊಡ್ಡ ಸಿಮೆಂಟ್ ಮಾಫಿಯಾವೇ ಇದೆ. ಇದನ್ನು ಯಾರು ನಿಯಂತ್ರಣ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಬ್ಬಿಣದ ಬೆಲೆ 47 ಸಾವಿರದಿಂದ 59 ಸಾವಿರಕ್ಕೆ ಹೆಚ್ಚಳವಾಗಿದೆ. ಹೀಗಾದರೆ ಜನಸಾಮಾನ್ಯ ಮನೆ ಕಟ್ಟುವುದು ಹೇಗೆ. ಇದಿರಿಂದ ಸರ್ಕಾರದ ಕಾಮಗಾರಿಗಳಿಗೂ ಹಿನ್ನಡೆಯಾಗುತ್ತಿದೆ. ಅಲ್ಲದೇ ಇದ್ದಕ್ಕಿದ್ದಂತೆ ವಿಮಾನ ಪ್ರಯಾಣದರವನ್ನ ಶೇ 18 ರಷ್ಟು ಏರಿಕೆ ಮಾಡಲಾಗಿದೆ” ಎಂದು ಹೇಳಿದರು.
“ಅರಣ್ಯಗಳಿಗೆ ಜನರು ಹೋಗಬಾರದು ಎಂದು ಹೇಳಿರುವ ಕಾರಣಕ್ಕೆ ಸೌದೆ ಅಭಾವ ನಿಜಕ್ಕೂ ಹೆಚ್ಚಾಗಲಿದೆ. ಹಳ್ಳಿಗಳಲ್ಲೂ ಸಹ ಗ್ಯಾಸ್ ಬಳಕೆ ಹೆಚ್ಚಾಗಿ ಜನ ಸೌದೆ ಬಳಸುತ್ತಿಲ್ಲ. ಒಮ್ಮೆಲೆ ಬಳಕೆ ಹೆಚ್ಚಾದರೆ ಅಭಾವ ಉಂಟಾಗಲಿದೆ. ಬ್ಲಾಕ್ ಮಾರ್ಕೆಟ್ ಕೆಲಸ ಮಾಡುತ್ತಿದ್ದು 2 ಸಾವಿರದವರೆಗೆ ಗೃಹಬಳಕೆ ಗ್ಯಾಸ್, 4 ಸಾವಿರದವರೆಗೆ ಕಮರ್ಷಿಯಲ್ ಗ್ಯಾಸ್ ಬೆಲೆ ಹೆಚ್ಚಾಗಿದೆ” ಎಂದರು.
ಗ್ಯಾರಂಟಿ ಯೋಜನೆಗಳಂತೆ ಕೇಂದ್ರ ಪರ್ಯಾಯ ವ್ಯವಸ್ಥೆ ಮಾಡಲಿ
“ಶೇ 34 ರಷ್ಟು ಪೋಸ್ಟಲ್ ಹಾಗೂ ಪಾರ್ಸಲ್ ಚಾರ್ಜ್ ಹೆಚ್ಚಳ ಮಾಡಿದ್ದಾರೆ. ಹೀಗಾದರೆ ಸಾಮಾನ್ಯ ಜನ ಹೇಗೆ ಬದುಕಬೇಕು. ಅಚ್ಚೇದಿನ ಏನಾಯಿತು. ಹೀಗೆ ಮುಂದುವರೆದರೆ ಜನಸಮಾನ್ಯರು ಹೇಗೆ ಬದುಕಬೇಕು. ನಾವು ಗ್ಯಾರಂಟಿ ನೀಡಿದ ಕಾರಣಕ್ಕೆ ಜನ ಸ್ವಲ್ಪ ಉಸಿರಾಡುತ್ತಿದ್ದಾರೆ. ಇದೇ ರೀತಿ ಕೇಂದ್ರ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಬೇಕು. ಜನಸಾಮಾನ್ಯರ ಬವಣೆಯ ಜೊತೆ ಕೇಂದ್ರ ನಿಲ್ಲುತ್ತಿಲ್ಲ. ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರಿಗೆ ಕೇಂದ್ರ ಸರ್ಕಾರ ನೆರವಾಗಬೇಕು” ಎಂದು ಆಗ್ರಹಿಸಿದರು.
“ಮೋದಿ ಸರ್ಕಾರ ಪ್ರತಿನಿತ್ಯ ಜನರ ಜೋಬಿನಿಂದ ಪಿಕ್ ಪಾಕೆಟ್ ಮಾಡುತ್ತಿದೆ. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಕೇಂದ್ರ ಸರ್ಕಾರ 900 ಕೋಟಿ ವಸೂಲಿ ಮಾಡಿದೆ. ಕೇಂದ್ರ ಸರ್ಕಾರ ಅದೇ ಹಣ ನಮಗೆ ಕೊಟ್ಟರೆ ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿ ಮಾಡಬಹುದು” ಎಂದರು.


