ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರು ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಸದ್ಯ ಐಸಿಯುನಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ವೈದ್ಯರು, “ವೈದ್ಯಕೀಯ ಬೆಂಬಲದೊಂದಿಗೆ ಎಸ್ ಎಂ ಕೃಷ್ಣಾ ಅವರ ಆರೋಗ್ಯ ಸ್ಥಿರವಾಗಿದೆ. ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಸುನಿಲ್ ನೇತೃತ್ವದ ತೀವ್ರ ನಿಗಾ ಘಟಕದ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ” ಎಂದು ತಿಳಿಸಿದ್ದಾರೆ.
15 ದಿನಗಳಿಂದ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ
ಎಸ್ ಎಂ ಕೃಷ್ಣ ಅವರಿಗೆ ಈಗ 91 ವರ್ಷ ವಯಸ್ಸಾಗಿದೆ. ವಯೋಸಹಜ ಆರೋಗ್ಯ ಸಮಸ್ಯೆಗಳ ಜತೆ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಏಪ್ರಿಲ್ 28 ರಂದು ಅಸ್ವಸ್ಥರಾದ ಕೃಷ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸತತ 15 ದಿನಗಳಿಂದಲೂ ಆಸ್ಪತ್ರೆಯಲ್ಲಿಯೇ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಅವರ ಪತ್ನಿ, ಮಕ್ಕಳು, ಮೊಮ್ಮಕ್ಕಳು ಎಸ್.ಎಂ.ಕೃಷ್ಣ ಅವರ ಆರೈಕೆಯಲ್ಲಿ ತೊಡಗಿದ್ದಾರೆ.
ವದಂತಿಗಳಿಗೆ ತೆರೆ
ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ, ಕೆಲ ಮಾಧ್ಯಮಗಳಲ್ಲಿ ಎಸ್ ಎಂ ಕೃಷ್ಣ ಅವರ ಸಾವಿನ ಬಗ್ಗೆ ಸುಳ್ಳು ಸುದ್ದಿ ಹರಿದಾಡಿತು. ಈ ಹಿನ್ನೆಲೆ ಆಸ್ಪತ್ರೆ ವೈದ್ಯರು ನಿತ್ಯ ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಿ, ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಗಣ್ಯರ ಭೇಟಿ
ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಅವರ ಆರೋಗ್ಯ ವಿಚಾರಿಸಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಖರ್ಗೆ, ‘‘ಎಸ್.ಎಂ. ಕೃಷ್ಣ ಅವರದ್ದು ಅತ್ಯಂತ ಶಿಸ್ತುಬದ್ಧ ಜೀವನ. ಅವರ ಸಂಪುಟದಲ್ಲಿಸಚಿವನಾಗಿ ಕಾರ್ಯನಿರ್ವಹಿಸಿದ್ದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದು ವೈದ್ಯರು ತಿಳಿಸಿದ್ದು , ಶೀಘ್ರ ಗುಣಮುಖರಾಗಲಿದ್ದಾರೆ’’ ಎಂದು ಹೇಳಿದರು.
‘‘ಅನಾರೋಗ್ಯದ ಹಿನ್ನೆಲೆಯಲ್ಲಿಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬುದು ಗಮನಕ್ಕೆ ಬಂದಿತ್ತು. ಹಾಗಾಗಿ, ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದೇನೆ. ಆದಷ್ಟು ಬೇಗ ಗುಣಮುಖರಾಗಲಿದ್ದಾರೆ’’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಣಿಪಾಲ್ ಆಸ್ಪತ್ರೆಗೆ ಸಂಜೆ ತೆರಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಎಸ್ ಎಂ ಕೃಷ್ಣ ಅವರ ಆರೋಗ್ಯ ವಿಚಾರಿಸಿ, ಶೀಘ್ರವಾಗಿ ಗುಣಮುಖರಾಗುವಂತೆ ಆಶಿಸಿದರು.