Homeಕರ್ನಾಟಕ40% ಕಮಿಷನ್‌ ಆರೋಪ ಬಗ್ಗೆ ಎಸ್‌ಐಟಿಯಿಂದ ತನಿಖೆ: ಹೆಚ್‌ ಕೆ ಪಾಟೀಲ್

40% ಕಮಿಷನ್‌ ಆರೋಪ ಬಗ್ಗೆ ಎಸ್‌ಐಟಿಯಿಂದ ತನಿಖೆ: ಹೆಚ್‌ ಕೆ ಪಾಟೀಲ್

ರಾಜ್ಯ ಗುತ್ತಿಗೆದಾರರ ಸಂಘದ 40% ಕಮಿಷನ್ ಆರೋಪಗಳ ಬಗ್ಗೆ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ದಾಸ್ ಅವರ ನೇತೃತ್ವದ ವಿಚಾರಣಾ ಆಯೋಗದ ವರದಿಯನ್ನು ಆಧರಿಸಿ ಹೆಚ್ಚಿನ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಲು ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ.

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ಎಸ್.ತಂಗಡಗಿ ಅವರೊಂದಿಗೆ ಮಾಧ್ಯಮಗೋಷ್ಟಿ ನಡೆಸಿ ಸಚಿವ ಸಂಪುಟ ನಿರ್ಣಯಗಳ ಬಗ್ಗೆ ಕಾನೂನು ಸಚಿವ ಹೆಚ್‌ ಕೆ ಪಾಟೀಲ್ ಮಾಹಿತಿ ನೀಡಿ‌, “ಎರಡು ತಿಂಗಳೊಳಗಾಗಿ ಎಸ್‌ಐಟಿ ತನ್ನ ವರದಿಯನ್ನು ನೀಡಲು ಸೂಚಿಸಿದ್ದೇವೆ’ ಎಂದರು.

“ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಆರೋಪಗಳ ಬಗ್ಗೆ ನ್ಯಾ.ಹೆಚ್.ಎನ್.ನಾಗಮೋಹನ್‌ದಾಸ್ ಅವರ ನೇತೃತ್ವದಲ್ಲಿ ವಿಚಾರಣಾ ಆಯೋಗ ತನ್ನ ವರದಿಯನ್ನು ಸಲ್ಲಿಸಿದ್ದು, ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ವಿಚಾರಣಾ ಆಯೋಗ ದೂರುಗಳ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. 3 ಲಕ್ಷ ಕಾಮಗಾರಿಗಳಲ್ಲಿ ಪೈಕಿ ಆಯೋಗವು 1729 ಕಾಮಗಾರಿಗಳ ಬಗ್ಗೆ ವಿಸ್ತೃತವಾಗಿ ಪರಿಶೀಲನೆ ನಡೆಸಲಾಗಿದೆ” ಎಂದು ಹೇಳಿದರು.

“ಕೆಲವುಗಳಲ್ಲಿ ಕಾಮಗಾರಿಗಳಲ್ಲಿ ಅನುದಾನಕ್ಕಿಂತ ಹೆಚ್ಚು ಕಾಮಗಾರಿಯನ್ನು ನೀಡಲಾಗಿದೆ. ಕೆಲವುಗಳಲ್ಲಿ ಅಲ್ಪ ಅನುದಾನ ಬಿಡುಗಡೆಯಾಗಿದ್ದರೂ, ಅದಕ್ಕೂ ಮೀರಿದ ಪಾವತಿಯಾಗಿದೆ. ಕೆಲವುಗಳಲ್ಲಿ ಕಾಮಗಾರಿ ನಿರ್ವಹಿಸಿರುವುದರ ಬಗ್ಗೆ ಸಂಶಯವಿದೆ. ಕೆಲವುಗಳಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಬೇರೆಯವರಿಂದ ಹಸ್ತಕ್ಷೇಪವಾಗಿರುವುದನ್ನು ಆಯೋಗವು ಮಾಹಿತಿ ತಿಳಿಸಿದೆ. ಸಚಿವ ಸಂಪುಟ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ವಿಚಾರಣಾ ಆಯೋಗದ ವರದಿಯ ಮೇಲೆ ಎಸ್ ಐ ಟಿಯನ್ನು ರಚಿಸಲು ನಿರ್ಧರಿಸಲಾಗಿದೆ” ಎಂದು ತಿಳಿಸಿದರು.

“ಅಗತ್ಯವಿರುವ ಪರಿಣಿತರನ್ನು ನಿಯೋಜಿಸಿ, ಎರಡು ತಿಂಗಳಲ್ಲಿ ವರದಿಯನ್ನು ಸಲ್ಲಿಸಲು ಎಸ್ ಐ ಟಿಗೆ ಸೂಚನೆ ನೀಡಲು ಸಚಿವಸಂಪುಟ ತೀರ್ಮಾನ ಕೈಗೊಂಡಿದ್ದು ಹಾಗೂ ಸಂಬಂಧಪಟ್ಟ ಇಲಾಖೆಯಿಂದ ಅಪೂರ್ಣ ಮಾಹಿತಿಗಳಿರುವ ಬಗ್ಗೆ ವಿಚಾರಣಾ ಆಯೋಗ ತಿಳಿಸಿರುವುದರಿಂದ, ಸಂಬಂಧಪಟ್ಟ ಇಲಾಖೆಯವರೂ ಎಸ್ ಐ ಟಿ ಯವರು ಈ ಬಗ್ಗೆ ಕೇಳುವ ಮಾಹಿತಿಗಳನ್ನು ಒದಗಿಸಲು ಸೂಚನೆಯನ್ನು ನೀಡಲಾಗಿದೆ” ಎಂದರು.

“40% ಕಮೀಷನ್‌ನ ವಿಚಾರ ವರದಿಯಲ್ಲಿ ಉಲ್ಲೇಖಿಸಲಾಗಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಕಾಮಗಾರಿ ಗುತ್ತಿಗೆ ನೀಡುವ ವಿಚಾರದಲ್ಲಿ ಲಂಚ ವ್ಯವಹಾರ ನಡೆದಿರುವ ಬಗ್ಗೆ ಆಯೋಗದ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ದೂರು ಬಂದಿರುವ ಇಲಾಖೆಗಳ ಕಾಮಗಾರಿಗಳ ಬಗ್ಗೆ ಆಯೋಗವು ಪರಿಶೀಲನೆ ನಡೆಸಿದೆ. ಆಯೋಗವು ಗುತ್ತಿಗೆದಾರ ದೂರುಗಳನ್ನು ಪರಿಗಣಿಸಿ, ವಿಚಾರಣೆ ನಡೆಸಿದೆ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments