ಸಿಲಿಕಾನ್ ಸಿಟಿ ಬೆಂಗಳೂರು ಇದೀಗ ಆಕ್ಸಿಡೆಂಟ್ ಸಿಟಿಯಾಗಿ ಪರಿಣಮಿಸಿದೆ. ನಗರದಲ್ಲಿ ಪ್ರಸಕ್ತ ವರ್ಷ ದಾಖಲೆ ಪ್ರಮಾಣದ ರಸ್ತೆ ಅಪಘಾತಗಳು ಸಂಭವಿಸಿರುವುದು ಸಂಚಾರ ಪೊಲೀಸ್ ಅಂಕಿ-ಅಂಶಗಳಿಂದ ಪತ್ತೆಯಾಗಿದೆ.
ಅದರಲ್ಲಿಯೂ ದ್ವಿಚಕ್ರ ವಾಹನ ಸವಾರರೇ ಸಂಚಾರ ನಿಯಮಗಳನ್ನು ಅತಿಹೆಚ್ಚು ಉಲ್ಲಂಘಿಸುತ್ತಿದ್ದು, ಈ ವರ್ಷ ಮೇ ತಿಂಗಳ ವೇಳೆಗೆ 2000ಕ್ಕೂ ಹೆಚ್ಚಿನ ರಸ್ತೆ ಅಪಘಾತಗಳು ನಗರದಲ್ಲಿ ಸಂಭವಿಸಿವೆ.
ಈ ಘಟನೆಗಳಲ್ಲಿ 368 ಮಾರಣಾಂತಿಕ ಮತ್ತು 1,672 ಮಾರಣಾಂತಿಕ ಅಲ್ಲದವುಗಳಾಗಿದ್ದು, 376 ಸಾವುಗಳು ಸಂಭವಿಸಿವೆ. 1,736 ಮಂದಿ ಗಾಯಗೊಂಡಿದ್ದಾರೆ.
ಅಂಕಿ ಅಂಶ ಪ್ರಕಾರ, 2024ರಲ್ಲಿ 39,10,980 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಅಜಾಗರೂಕ ಚಾಲನೆ ಮತ್ತು ಅತಿ ವೇಗವು ಪ್ರಮುಖವಾಗಿವೆ. ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳೇ 5,433 ದಾಖಲಾಗಿವೆ. ಇದು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರ ವಿರುದ್ಧ ಕಟ್ಟು ನಿಟ್ಟಾದ ಜಾರಿ ಮತ್ತು ಜಾಗೃತಿ ಅಭಿಯಾನಗಳ ಶುರ್ತು ಅಗತ್ಯವನ್ನು ಒತ್ತಿಹೇಳುತ್ತದೆ ಎಂದು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.
ಉಳಿದಂತೆ ಪರವಾನಗಿ ಇಲ್ಲದೆ ಚಾಲನೆ (2,710 ಪ್ರಕರಣಗಳು), ದೋಷಯುಕ್ತ ನಂಬರ್ ಪ್ಲೇಟ್ (87,277 ಪ್ರಕರಣಗಳು), ಮತ್ತು ಟ್ರಾಫಿಕ್ ಸಿಗ್ನಲ್ ಜಂಪ್ (2,46,284 ಪ್ರಕರಣಗಳು) ಕೂಡ ಸೇರಿವೆ.
ಹೆಲ್ಮಟ್ ರಹಿತ ಚಾಲನೆ ಬಹುದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ. 16 ಲಕ್ಷಕ್ಕೂ ಹೆಚ್ಚು ಸವಾರರು ಮತ್ತು 10 ಲಕ್ಷ ಹಿಂಬದಿ ಸವಾರರು ಹೆಲೈಟ್ ಇಲ್ಲದ ಸಿಕ್ಕಿ ಬಿದ್ದಿದ್ದಾರೆ.
ಸೀಟು ಬೆಲ್ಟ್ ಧರಿಸದೇ ಸಂಚಾರ ಮಾಡಿದ 1,83, 321 ಪ್ರಕರಣಗಳು ಮತ್ತು ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸಿದ 48,947 ಪ್ರಕರಣಗಳು ವರದಿಯಾಗಿವೆ. ದ್ವಿಚಕ್ರ ವಾಹನಗಳು ನಿಯಮ ಉಲ್ಲಂಘನೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, 33 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಟೆಂಪೋಗಳು, ಲಘು ಮೋಟಾರು ವಾಹನಗಳು, ಆಟೋರಿಕ್ಷಾಗಳು, ಸರಕು ವಾಹನಗಳು ಮತ್ತು ಬಸ್‌ಗಳು ನಿಯಮ ಉಲ್ಲಂಘನೆಯಲ್ಲಿ ನಂತರದ ಸ್ಥಾನದಲ್ಲಿವೆ.