ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಸಿಎಂ, “ಇಂದು ಆ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದಿಂದ ಯಾರು ಕೂಡಾ ಭಾಗಿಯಾಗುತ್ತಿಲ್ಲ. ನಾನೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಫೋನ್ ಮಾಡಿ ಬೇರೆ ದಿನ ನಿಗದಿ ಮಾಡುವಂತೆ ಕೇಳಿಕೊಂಡಿದ್ದೆ. ಬಳಿಕ ಪತ್ರವನ್ನು ಬರೆದಿದ್ದೆ. ಅದಕ್ಕೆ ಗಡ್ಕರಿ ಅವರು ಕಾರ್ಯಕ್ರಮ ಮುಂದಕ್ಕೆ ಹಾಕೋದಾಗಿ ಹೇಳಿದರು. ಆದರೆ ಇಲ್ಲಿನ ಬಿಜೆಪಿ ನಾಯಕರು ಅವರಿಗೆ ಒತ್ತಡ ಹಾಕಿರಬಹುದು ಅನ್ನಿಸುತ್ತೆ. ಅವರು ನನಗೆ ಏನು ಹೇಳದೇ ಮಾಡುತ್ತಿದೆ” ಎಂದು ಕಿಡಿಕಾರಿದ್ದಾರೆ.
“ನಾನು ಮೊದಲೇ ನಿಗದಿಯಾಗಿರುವ ಇಂಡಿ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇನೆ. ಪ್ರತಿಭಟನಾರ್ಥವಾಗಿ ಸಿಗಂದೂರು ಸೇತುವೆ ಉದ್ಘಾಟನೆ ಕಾರ್ಯಕ್ರಮಕ್ಕೆ ಯಾರು ಹೋಗುತ್ತಿಲ್ಲ. ಲೋಕೋಪಯೋಗಿ ಸಚಿವರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಸಾಗರ ಶಾಸಕರು ಹೋಗ್ತಿಲ್ಲ.ಕೇಂದ್ರ ಸರ್ಕಾರದವರು ಕರೆಯಬೇಕಿತ್ತು. ಸರ್ಕಾರಗಳ ನಡುವೆ ಹೀಗೆ ತಿಕ್ಕಾಟವನ್ನು ಪ್ರಾರಂಭಿಸಿರುವುದು ಕೇಂದ್ರ ಸರ್ಕಾರವೇ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಶಿಷ್ಟಾಚಾರ ಪಾಲನೆ ಮಾಡದೇ ಉಲ್ಲಂಘನೆ ಮಾಡಿದ್ದಾರೆ” ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸಿಗಂದೂರು ಸೇತುವೆ ಉದ್ಘಾಟನೆಗೆ ಸಿಎಂ ಗೈರಾದ ಹಿನ್ನೆಲೆ ಎಕ್ಸ್ ಖಾತೆಯಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸ್ಪಷ್ಟನೆ ನೀಡಿದ್ದಾರೆ. ಇಂದಿನ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ ಸಿದ್ಧಾಮಯ್ಯರಿಗೆ ಮೊದಲೇ ಅಧಿಕೃತ ಆಹ್ವಾನ ಕೊಡಲಾಗಿತ್ತು ಎಂದು ಬರೆದಿದ್ದಾರೆ.
ಭೌತಿಕವಾಗಿ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಜೂನ್ 11 ರಂದು ಆಹ್ವಾನ ಕೊಡಲಾಗಿದೆ. ಅಲ್ಲದೇ ಬರಲು ಸಾಧ್ಯವಾಗದಿದ್ರೆ ವರ್ಚುವಲ್ ಮೂಲಕವಾದ್ರೂ ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಜೂನ್ 12 ರಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಹ್ವಾನಿಸಿದ್ದೆವು ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಮುಳುಗಡೆ ಸಂತ್ರಸ್ತರ ಆರು ದಶಕಗಳ ಅವಿರತ ಹೋರಾಟಕ್ಕೆ ಶಾಶ್ವತ ವಿಮುಕ್ತಿ ಸಿಕ್ಕಿದೆ. ಶರಾವತಿ ನದಿಯ ಹಿನ್ನೀರಿಗೆ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯಿಂದ ನಿರ್ಮಿತವಾದ ಕೇಬಲ್ ಆಧಾರಿತ 2.25 ಕಿ.ಮೀ ಉದ್ದದ ಸುಮಾರು 423 ಕೋಟಿ ಅನುದಾನದಲ್ಲಿ ದೇಶದ ಎರಡನೇ ಅತಿ ದೊಡ್ಡ ಸಂಪರ್ಕ ಸೇತುವೆ “ಅಂಬಾರಗೋಡ್ಲು – ಕಳಸವಳ್ಳಿ – ಸಿಗಂಧೂರು – ಕೊಲ್ಲೂರು (ಸ್ಥಳೀಯರ ಹೊಳೆಬಾಗಿಲು ಸೇತುವೆ)” ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಿಸಲಾಗಿದೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಸಂಸದ ಬಿವೈ ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಎಸ್ಎನ್ ಚನ್ನಬಸಪ್ಪ, ಡಿಎಸ್ ಅರುಣ್, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಹರತಾಳು ಹಾಲಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಧಿಕಾರಿಗಳ ಪ್ರಕಾರ, ಸಾಗರ ತಾಲ್ಲೂಕಿನ ಅಂಬರಗೋಡ್ಲು-ಕಳಸವಳ್ಳಿ ನಡುವೆ ಶರಾವತಿ ಹಿನ್ನೀರಿನಲ್ಲಿ ಈ ಸೇತುವೆಯನ್ನು 472 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಸೇತುವೆಯು 2.44 ಕಿಮೀ ಉದ್ದವಿದ್ದು, 16 ಮೀಟರ್ ಅಗಲವಿದೆ. ಈ ಸೇತುವೆಯು ಸಾಗರದಿಂದ ಸಿಗಂದೂರಿನ ಸುತ್ತಮುತ್ತಲಿನ ಹಳ್ಳಿಗಳಿಗೆ ದೂರವನ್ನು ಕಡಿಮೆ ಮಾಡುತ್ತದೆ.