ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ತಮ್ಮ 17ನೇ ದಾಖಲೆ ಬಜೆಟ್ ಮಂಡಿಸಿದ್ದಾರೆ. ಡಿ ದೇವರಾಜ ಅರಸು ಅವರ ದಾಖಲೆಯನ್ನು ಹಿಂದಿಕ್ಕಿ ಕರ್ನಾಟಕದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿರುವ ಸಿದ್ದರಾಮಯ್ಯ ಅವರು ಈ ಮೂಲಕ ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ.
2025-26ರ ಬಜೆಟ್ ಅಂದಾಜಿನ ಪ್ರಕಾರ, ಮಾರ್ಚ್ 2026ರ ಅಂತ್ಯದ ವೇಳೆಗೆ ರಾಜ್ಯದ ಒಟ್ಟು ಹೊಣೆಗಾರಿಕೆಗಳು 7,64,655 ಕೋಟಿ ರೂ.ಗಳಾಗಲಿವೆ ಎಂದು ಸರ್ಕಾರ ತಿಳಿಸಿದೆ. ಇದು ಒಟ್ಟು ರಾಜ್ಯ ದೇಶೀಯ ಉತ್ಪನ್ನದ (GSDP) ಶೇಕಡಾ 24.91 ರಷ್ಟಿದೆ ಎಂದು ಸರ್ಕಾರ ಹೇಳಿದೆ.
ಸಿದ್ದರಾಮಯ್ಯ ಅವರು 4.48 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದು, 1.32 ಲಕ್ಷ ಕೋಟಿ ಸಾಲ ಮಾಡಲಾಗಿದೆ. ಈ ಬಾರಿ ಬಜೆಟ್ ನಲ್ಲಿ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಇಂಧನ ಇಲಾಖೆಗೆ ಬಂಪರ್ ಅನುದಾನವನ್ನು ಘೋಷಣೆ ಮಾಡಿದ್ದಾರೆ. ಎಲ್ಲ ವರ್ಗದ ಜನರನ್ನು ತಲುಪುವ ನಿಟ್ಟಿನಲ್ಲಿ ಹಲವು ವಿನೂತನ ಯೋಜನೆಗಳನ್ನು ಘೋಷಿಸಲಾಗಿದೆ
ಶಿಕ್ಷಣ ಕ್ಷೇತ್ರಕ್ಕೆ 47,224 ಕೋಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 34,929 ಕೋಟಿ, ಇಂಧನ ಕ್ಷೇತ್ರಕ್ಕೆ 29,947 ಕೋಟಿ, ಲೋಕೋಪಯೋಗಿ ಮತ್ತು ಸಾರಿಗೆ ಇಲಾಖೆಗೆ 23,100 ಕೋಟಿ, ನೀರಾವರಿಗೆ 22,436 ಕೋಟಿ, ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಗೆ 22,203 ಕೋಟಿ, ಕಂದಾಯ: 19,843 ಕೋಟಿ, ಸಮಾಜ ಕಲ್ಯಾಣ ಇಲಾಖೆಗೆ 18,612 ಕೋಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 17,817 ಕೋಟಿ ಅನುದಾನ ಘೋಷಿಸಿದ್ದಾರೆ.

ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ 7,000 ಕೋಟಿ ರೂ.
ಸಿಲಿಕಾನ್ ಸಿಟಿ ಬೆಂಗಳೂರಿನ ಕುರಿತು ಸಾಕಷ್ಟು ಅಂಶಗಳಿದ್ದು, ಬೆಂಗಳೂರಿನ ಮೂಲಸೌಕರ್ಯವನ್ನು ಹೆಚ್ಚಳಕ್ಕೆ ಬಜೆಟ್ ನಲ್ಲಿ ಮಹತ್ವದ ಘೋಷಣೆಗಳನ್ನು ಮಾಡಲಾಗಿದೆ. ಆರ್ಥಿಕ ನಗರಿ ಬೆಂಗಳೂರನ್ನು ಗಮನದಲ್ಲಿಟ್ಟುಕೊಂಡು ನಿಧಿ ಹಂಚಿಕೆ ಮಾಡಿದೆ. ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ 7,000 ಕೋಟಿ ರೂಪಾಯಿ ಹಂಚಿಕೆ ಮಾಡುವುದಾಗಿ ಘೋಷಿಸಿದರು. ವೈಟ್ ಟಾಪಿಂಗ್‌ಗೆ 3,500 ಕೋಟಿ ರೂ. ಮತ್ತು ಬೆಂಗಳೂರು ಪ್ರವಾಹ ನಿಯಂತ್ರಣಕ್ಕೆ 5,000 ಕೋಟಿ ರೂ.ಗಳನ್ನು ಸಿದ್ದರಾಮಯ್ಯ ಘೋಷಿಸಿದ್ದಾರೆ. ಹೆಬ್ಬಾಳ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗೆ ಸುರಂಗ ರಸ್ತೆ ಮತ್ತು ಎತ್ತರದ ಕಾರಿಡಾರ್ ನಿರ್ಮಾಣಕ್ಕೆ 2,250 ಕೋಟಿ ರೂಪಾಯಿ ಘೋಷಿಸಲಾಗಿದೆ. ಬೆಂಗಳೂರಿಗರಿಗೆ ನೀರನ್ನು ಪೂರೈಸಲು ಜೈಕಾ ನೆರವಿನೊಂದಿಗೆ ಕಾವೇರಿ 6ನೇ ಹಂತದ ಯೋಜನೆಗೆ 6,939 ಕೋಟಿ ರೂಪಾಯಿ ಘೋಷಿಸಲಾಗಿದೆ.
16 ವರ್ಷದ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಗೆ ನಿಷೇಧ
ಹೆಚ್ಚುತ್ತಿರುವ ಮೊಬೈಲ್ ಬಳಕೆ ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 16 ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧ ಮಾಡಿದೆ. ವಿಧಾನಸಭೆಯಲ್ಲಿ ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ ಸಿದ್ದರಾಮಯ್ಯ, ಇದು ಮಕ್ಕಳ ಆರೋಗ್ಯ, ವಿದ್ಯಾಭ್ಯಾಸ ಹಾಗೂ ಏಳಿಗೆಯ ದೃಷ್ಟಿಯಿಂದ ಒಳ್ಳೆಯ ತೀರ್ಮಾನವಾಗಿದ್ದು, ಕೇಂದ್ರ ಸರ್ಕಾರದ ಆರ್ಥೀಕ ಸಮೀಕ್ಷಾ ವರದಿಯಲ್ಲೂ ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧಿಸುವ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು ಎಂದರು. 2026-27ನೇ ಸಾಲಿನ ಬಜೆಟ್‌ನಲ್ಲಿ ಒಟ್ಟಾರೆ 3,900 ಕೋಟಿ ವೆಚ್ಚದಲ್ಲಿ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಹೊಸ ಯೋಜನೆಗಳು
ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ
ಉತ್ಪಾದನೋತ್ತರ ಕೃಷಿ ಚಟುವಟಿಕೆಗಳ (ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ ಸಂಪರ್ಕ) ಅಭಿವೃದ್ಧಿಗಾಗಿ ಮುಂದಿನ ಮೂರು ವರ್ಷಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಹೊಸ ಯೋಜನೆ.
ವಸುಧಾಮೃತ ಕಾರ್ಯಕ್ರಮ: ಮಣ್ಣಿನ ಸಾವಯವ ಇಂಗಾಲ ಹಾಗೂ ಗುಣಮಟ್ಟವನ್ನು ಹೆಚ್ಚಿಸಲು ಪರಿಸರ ಸ್ನೇಹಿ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸುವ ಹೊಸ ಕಾರ್ಯಕ್ರಮ.
ಸಸ್ಯ ಸಂಜೀವಿನಿ ಯೋಜನೆ
ಬೆಳೆಗಳಲ್ಲಿ ಕೀಟ ಹಾಗೂ ರೋಗಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ, ಜೈವಿಕ ಕೀಟನಾಶಕಗಳ ಮೂಲಕ ನಿರ್ವಹಣಾ ಕ್ರಮಗಳನ್ನು ಒದಗಿಸುವ ಯೋಜನೆ.
ರೈತ ಮಾಲ್‌ಗಳ ಸ್ಥಾಪನೆ
ಕೋಲಾರ ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಎಂಎಸ್‌ಐಎಲ್ (MSIL) ವತಿಯಿಂದ ಬಿತ್ತನೆ ಬೀಜ, ಕೀಟನಾಶಕ, ರಸಗೊಬ್ಬರ ಮತ್ತು ಯಂತ್ರೋಪಕರಣಗಳನ್ನು ಒಂದೇ ಸೂರಿನಡಿ ಒದಗಿಸಲು ಹೊಸ ರೈತ ಮಾಲ್‌ಗಳ ಸ್ಥಾಪನೆ.
ಶ್ವಾನ ಸಂತಾನ ನಿಯಂತ್ರಣ ತರಬೇತಿ ಕೇಂದ್ರ
ಬೆಂಗಳೂರು ಹಾಗೂ ಬೀದರ್‌ನಲ್ಲಿ ಪಶುವೈದ್ಯರು ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಹೊಸ ಕೇಂದ್ರ ಸ್ಥಾಪನೆ.
ಜಾನುವಾರುಗಳ ಸಿ.ಟಿ. ಸ್ಕ್ಯಾನಿಂಗ್ ಕೇಂದ್ರಗಳು
ರಾಜ್ಯದಲ್ಲಿ ಪ್ರಪ್ರಥಮವಾಗಿ ಬೆಂಗಳೂರು ಮತ್ತು ಬೀದರ್‌ನ ಪಶು ಆಸ್ಪತ್ರೆಗಳಲ್ಲಿ ಹೊಸ ಸಿ.ಟಿ. ಸ್ಕ್ಯಾನ್ ಕೇಂದ್ರಗಳ ಸ್ಥಾಪನೆ.
ಫಲಧಾರೆ ಶಿಬಿರಗಳು
ಜಾನುವಾರುಗಳ ಸಂತಾನೋತ್ಪತ್ತಿ ಸಮಸ್ಯೆ ನಿವಾರಿಸಲು ‘ವರ್ಷಕ್ಕೊಂದು ಕರು’ ಎಂಬ ಘೋಷವಾಕ್ಯದೊಂದಿಗೆ 1,000 ಗ್ರಾಮ ಪಂಚಾಯಿತಿಗಳಲ್ಲಿ 5 ಕೋಟಿ ರೂ. ವೆಚ್ಚದ ಹೊಸ ಶಿಬಿರಗಳು.
ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ
ಹೊಸ ಶಿಶುಪಾಲನಾ ಕೇಂದ್ರಗಳು: 2026-27ನೇ ಸಾಲಿನಲ್ಲಿ ಜಿಲ್ಲಾ ಮಟ್ಟದಲ್ಲಿ ಹೆಚ್ಚುವರಿಯಾಗಿ 20 ಹೊಸ ಶಿಶುಪಾಲನಾ ಕೇಂದ್ರಗಳ ಸ್ಥಾಪನೆ.
ವಸತಿ ಶಾಲೆಗಳು: ಅಲ್ಪಸಂಖ್ಯಾತರಿಗಾಗಿ 10 ಹೊಸ ವಸತಿ ಶಾಲೆಗಳನ್ನು ಸಿಬಿಎಸ್‌ಇ (CBSE) ಪಠ್ಯಕ್ರಮದಡಿ 10 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗುವುದು. 2026-27ನೇ ಸಾಲಿನಲ್ಲಿ ಇಂಥದ್ದೇ 25 ಹೊಸ ಶಾಲೆಗಳ ಆರಂಭ.
ಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರ: 18 ವರ್ಷದೊಳಗಿನ ಮಕ್ಕಳಿಗಾಗಿ ನಿಮ್ಹಾನ್ಸ್ ಹಾಗೂ ಡಿಮ್ಹಾನ್ಸ್ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ಹೊಸ ಪುನರ್ವಸತಿ ಕೇಂದ್ರಗಳ ಪ್ರಾರಂಭ.
ಮೂಲಸೌಕರ್ಯ ಮತ್ತು ಇತರೆ ಕ್ಷೇತ್ರಗಳು
ಹೊಸ ಪೊಲೀಸ್ ಠಾಣೆಗಳು (ಅನುಬಂಧದ ಆಧಾರದಲ್ಲಿ): ರಾಜ್ಯಾದ್ಯಂತ ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಸೇರಿದಂತೆ 12 ಹೊಸ ಪೊಲೀಸ್ ಠಾಣೆಗಳ (ಸಂಚಾರ ಮತ್ತು ಕಾನೂನು-ಸುವ್ಯವಸ್ಥೆ) ಸ್ಥಾಪನೆಗೆ ಗ್ರೀನ್ ಸಿಗ್ನಲ್.
ಡಿಸಿಸಿ ಬ್ಯಾಂಕ್ ಸ್ಥಾಪನೆಗೆ ಪ್ರಸ್ತಾವನೆ: ಪ್ರತಿ ಜಿಲ್ಲೆಯಲ್ಲೂ ಹೊಸ ‘ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್’ (DCC Bank) ಸ್ಥಾಪಿಸಲು ನಬಾರ್ಡ್ ಸಲಹೆಯಂತೆ ಆರ್‌ಬಿಐಗೆ ಹೊಸ ಪ್ರಸ್ತಾವನೆ ಸಲ್ಲಿಕೆ.
ಕೆ.ಹೆಚ್.ಬಿ ಸೂರ್ಯ ಕ್ರೀಡಾ ಗ್ರಾಮ: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನಲ್ಲಿ 80,000 ಆಸನ ಸಾಮರ್ಥ್ಯದ ಹೊಸ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ.
ಇಂದಿರಾ ಆಹಾರ ಕಿಟ್: ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ನೀಡಲಾಗುತ್ತಿರುವ 5 ಕೆ.ಜಿ ಹೆಚ್ಚುವರಿ ಅಕ್ಕಿಯ ಬದಲಾಗಿ, ಹೊಸದಾಗಿ ತೊಗರಿಬೇಳೆ, ಸಕ್ಕರೆ, ಉಪ್ಪು ಮತ್ತು ಅಡುಗೆ ಎಣ್ಣೆ ಒಳಗೊಂಡ ಕಿಟ್ ವಿತರಣೆ (6,200 ಕೋಟಿ ರೂ. ಮೀಸಲು).
ಹೊಸ ಮತ್ಸ್ಯದರ್ಶಿನಿಗಳು ಮತ್ತು ಮೀನು ಮಾರುಕಟ್ಟೆಗಳು: ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ ಮತ್ತು ಚಿಕ್ಕಮಗಳೂರಿನಲ್ಲಿ ಹೊಸ ಮತ್ಸ್ಯದರ್ಶಿನಿ ಕೇಂದ್ರಗಳ ಸ್ಥಾಪನೆ.

ಅಲ್ಪಸಂಖ್ಯಾತರ ಬಜೆಟ್: ಬಿಜೆಪಿ ಟೀಕೆ, ಪ್ರಜಾಪ್ರಭುತ್ವಕ್ಕೆ ಎಸಗುವ ಅಪಚಾರ
2026-27ನೇ ಸಾಲಿನ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಗೆ ಖಾಲಿ ಪಾತ್ರೆ ಕೊಟ್ಟಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ಕಿಡಿಕಾರಿದೆ. ವಿಧಾನಸಭೆಯಲ್ಲಿ ಸಿದ್ದರಾಮಯ್ಯ 17ನೇ ಬಾರಿಗೆ ದಾಖಲೆಯ ಬಜೆಟ್ ಮಂಡಿಸಿದರೇ ಅತ್ತ ಪ್ರತಿಪಕ್ಷ ಬಿಜೆಪಿ ಈ ಬಜೆಟ್ ವಿರೋಧಿಸಿ, ಕೈಯಲ್ಲಿ ಖಾಲಿ ಚೊಂಬು ಹಿಡಿದು ಪ್ರತಿಭಟನೆ ನಡೆಸಿತು.
ಕಳೆದ 3 ವರ್ಷಗಳಲ್ಲಿ, ರಾಜ್ಯ ಸರ್ಕಾರವು 4.39 ಲಕ್ಷ ಕೋಟಿ ರೂ. ಸಾಲ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದರು. ಮುಂದೆ ಅಧಿಕಾರಕ್ಕೆ ಬರುವ ಸರ್ಕಾರಗಳು ಬಡ್ಡಿಯನ್ನು ಪಾವತಿಸುವ ಸ್ಥಿತಿಯಲ್ಲಿರುವುದಿಲ್ಲ, ಅಸಲು ಮೊತ್ತವನ್ನು ಬಿಟ್ಟು ಹಣಕಾಸಿನ ಕೊರತೆಯು 97,000 ಕೋಟಿ ರೂ.ಗಳನ್ನು ತಲುಪಿದೆ ಎಂದರು.
ಇದು ‘ಬ್ರದರ್ಸ್ ಬಜೆಟ್.. ಓಲೈಕೆ ರಾಜಕಾರಣವೇ ಕಾಂಗ್ರೆಸ್ ಪಕ್ಷದ ಪರಮ ಗುರಿ’ಯಾಗಿದೆ. ಅತಿಥಿ ಶಿಕ್ಷಕರಿಗೆ ಕಳೆದ 5 ತಿಂಗಳಿಂದ ಗೌರವ ಧನ ನೀಡದ ಈ ಭ್ರಷ್ಟ ಸರ್ಕಾರ, ಅಲ್ಪಸಂಖ್ಯಾತರ ಶಾಲೆಗಳನ್ನು KPS ಮಾದರಿಯಲ್ಲಿ ಉನ್ನತೀಕರಣಕ್ಕೆ 1000 ಕೋಟಿ ಕೊಟ್ಟಿದೆ ಎಂದು ಬಿಜೆಪಿ ಕಿಡಿಕಾರಿದೆ. ಸಿದ್ದರಾಮಯ್ಯ ಅವರು ದಾಖಲೆ ದಿನಗಳವರೆಗೆ ಮುಖ್ಯಮಂತ್ರಿಯಾಗಿ ತಾವು ಪಡೆದ ಅನುಭವವನ್ನು ಸಂಪೂರ್ಣ ನೀರಿನಲ್ಲಿ ಹೋಮ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಬೆಲೆ ಕುಸಿತದಿಂದ ಕಂಗಾಲಾಗಿರುವ ನಮ್ಮ ಅನ್ನದಾತ ರೈತರಿಗೆ ಮಾರುಕಟ್ಟೆ ಮಧ್ಯಪ್ರವೇಶಕ್ಕೆ ಕೇವಲ 100 ಕೋಟಿ ರೂ ನೀಡಿರುವುದು ರೈತರ ಮೂಗಿಗೆ ತುಪ್ಪ ಸವರುವ ಕೆಲಸವಾಗಿದೆ ಎಂದು ವಿಜಯೇಂದ್ರ ಟೀಕಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಟೀಕೆಗಳು ರಾಜಕೀಯ ಕಾರಣದಿಂದ ಕೂಡಿವೆಯೇ ಹೊರು ನೈಜ ವಿಮರ್ಶೆಯಿಂದ ದೂರಾಗಿವೆ. ಹಾಗೇ ನೋಡಿದರೆ ಆರ್ಥಿಕ ತಜ್ಞರ ಅಭಿಪ್ರಾಯದಂತೆ ಬಜೆಟ್ ಉತ್ತಮವಾಗಿಯೇ ಇದೆ.
ಸಮಜಾ ಕಲ್ಯಾಣ ಕಾರ್ಯಗಳಿಗೆ ಕಾಂಗ್ರೆಸ್ ಸರ್ಕಾರ ತನ್ನ ಕಾಳಜಿಯನ್ನು ತೋರಿದೆ. ಬರೀ ಅಲ್ಪಸಂಖ್ಯಾತ ಎಂಬುದನ್ನು ಮುಂದಿಟ್ಟುಕೊಂಡು ಬಿಜೆಪಿ ಮತ್ತು ಜೆಡಿಎಸ್ ಟೀಕೆ ಅಷ್ಟು ಸೂಕ್ತವಲ್ಲ. ಅಲ್ಪಸಂಖ್ಯಾತರೆಂದರೆ ಬರೀ ಮುಸ್ಲಿಂರಲ್ಲ ಎಂಬುದನ್ನು ಪ್ರತಿಪಕ್ಷಗಳು ಅರ್ಥ ಮಾಡಿಕೋಲ್ಳಬೇಕು. ಬರೀ ಮುಸ್ಲಿಂ ದ್ವೇಷವನ್ನೇ ಮುಂದು ಮಾಡಿ ಟೀಕಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಎಸಗುವ ಅಪಚಾರ.


