ಮುಡಾಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದ್ದು, ಲೋಕಾಯುಕ್ತ ವಿಚಾರಣೆಯಲ್ಲಿ ಸತ್ಯವನ್ನು ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಮೈಸೂರಿನಲ್ಲಿ ಮುಡಾ ಪ್ರಕರಣ ಸಂಬಂಧ ಲೋಕಾಯುಕ್ತ ವಿಚಾರಣೆಯನ್ನು ಎದುರಿಸಿದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, “ಲೋಕಾಯುಕ್ತ ವಿಚಾರಣೆಗೆ ಇಂದು ಹಾಜರಾಗಿದ್ದು, ಅವರ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು ನೀಡಿದ್ದೇನೆ. ಬಿಜೆಪಿಯವರು ಗೋಬ್ಯಾಕ್ ಸಿಎಂ ಎಂಬ ಪ್ರತಿಭಟನೆ ನಡೆಸಿದ್ದಾರೆ. ಸ್ನೇಹಮಯಿ ಕೃಷ್ಣ ಅವರು ಕೋರಿದಂತೆ, ರಾಜ್ಯಪಾಲರು ಆದೇಶದಂತೆ ಲೋಕಾಯುಕ್ತ ವಿಚಾರಣೆಯನ್ನು ನಡೆಸಲಾಗಿದೆ. ಬಿಜೆಪಿಯವರು ವಿಚಾರಣೆಯ ವಿರುದ್ಧವಾಗಿದ್ದಾರೆ ಎಂಬ ಅರ್ಥವಲ್ಲವೇ? ಇದರಿಂದ ಈ ಆರೋಪ ಸುಳ್ಳು ಎಂದು ಸ್ಪಷ್ಟವಾಗುತ್ತದೆ” ಎಂದರು.
“ವಿಚಾರಣೆ ನಡೆಸುವ ಲೋಕಾಯುಕ್ತ ನಂಬಿಕೆಯಿಲ್ಲ, ತನಿಖೆಯನ್ನು ಸಿಬಿಐ ನವರು ನಡೆಸಬೇಕೆಂಬ ಬಿಜೆಪಿಯವರ ಬೇಡಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿ, ಕೇಂದ್ರ ಸರ್ಕಾರದಲ್ಲಿ ಸಿಬಿಐ ಇದೆ. ಬಿಜೆಪಿಯವರು ಇದುವರೆಗೆ ಯಾವುದಾದರೂ ಹಗರಣವನ್ನು ಸಿಬಿಐಗೆ ವಹಿಸಿದ್ದಾರೆಯೇ” ಎಂದು ಪ್ರಶ್ನಿಸಿದರು.
ಬಿಜೆಪಿಯವರಿಗೆ ಕಾನೂನಿನ ಬಗ್ಗೆ ಗೌರವವಿಲ್ಲ
ಲೋಕಾಯುಕ್ತ ವಿಚಾರಣೆ ಪೂರ್ವನಿಯೋಜಿತವಾಗಿ, ನಿಷ್ಪಕ್ಷವಾಗುತ್ತದೆ ಎಂಬ ಬಿಜೆಪಿಯವರ ಆರೋಪ ಮಾಡುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, “ಸಿಬಿಐದಂತೆ, ಲೋಕಾಯುಕ್ತ ಒಂದು ಸ್ವತಂತ್ರ ತನಿಖಾ ಸಂಸ್ಥೆ. ಲೋಕಾಯುಕ್ತದ ನಂಬಿಕೆಯಿಲ್ಲದ ಬಿಜೆಪಿಯವರಿಗೆ ಕಾನೂನಿನ ಬಗ್ಗೆ ಗೌರವವಿಲ್ಲ. ಬಿಜೆಪಿಯವರು ಯಾವುದೇ ಪ್ರಕರಣವನ್ನು ಇದುವರೆಗೆ ಸಿಬಿಐ ಗೆ ನೀಡಿಲ್ಲ. ರಾಜ್ಯಪಾಲರು ಕೂಡ ಲೋಕಾಯುಕ್ತದಲ್ಲಿಯೇ ತನಿಖೆಯಾಗಬೇಕೆಂದು ಸೂಚಿಸಿದ್ದು, ಅದರಂತೆ ವಿಚಾರಣೆ ನಡೆಯುತ್ತಿದೆ” ಎಂದರು.
ಸುಳ್ಳು ಆರೋಪಗಳಿಗೆ ನ್ಯಾಯಾಲಯದಲ್ಲಿ ತಕ್ಕ ಉತ್ತರ
ಮುಡಾದಿಂದ ಹಂಚಿಕೆಯಾದ 14 ನಿವೇಶನಗಳು ಕಾನೂನುಬದ್ಧವಾಗಿತ್ತೇ, ಅವುಗಳನ್ನು ವಾಪಸ್ಸು ನೀಡಲಾಯಿತೇಕೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, “ನಿವೇಶನ ಹಂಚಿಕೆ ಕಾನೂನೂ ಬದ್ಧವಾಗಿಯೇ ಆಗಿದೆ. ಬಿಜೆಪಿ ಜೆಡಿಎಸ್ ನವರು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಈ ಸಂಬಂಧ ಲೋಕಾಯುಕ್ತ ವಿಚಾರಣೆಯಲ್ಲಿ ಇಂದು ಉತ್ತರವನ್ನು ನೀಡಿದ್ದು, ತನಿಖೆಯನ್ನು ಕಾನೂನುರೀತ್ಯ ಮುಂದುವರೆಸಲಿದ್ದಾರೆ. ನನ್ನ ಮೇಲೆ ಬಂದ ಸುಳ್ಳು ಆರೋಪಗಳ ಮಾಡಲಾಗಿದ್ದರಿಂದ ನನ್ನ ಪತ್ನಿ ನಿವೇಶನಗಳನ್ನು ವಾಪಸ್ಸು ನೀಡಿದರೆ ಹೊರತು, ತಪ್ಪು ಮಾಡಿದ್ದಕ್ಕಾಗಿ ನಿವೇಶನಗಳನ್ನು ವಾಪಸ್ಸು ನೀಡಲಾಗಿಲ್ಲ” ಎಂದರು.