ಮುಡಾ ಹಗರಣ ಸಂಬಂಧ ತಮ್ಮ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತನಿಖೆಗೆ
ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ಅಂತಿಮ ಹಂತದ ವಿಚಾರಣೆ ಗುರುವಾರ (ಸೆ.12)ರಂದು ಹೈಕೋರ್ಟ್ನಲ್ಲಿ ನಡೆಯಿತು. ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು.
ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ರಾಜ್ಯಪಾಲರು ತನಿಖೆಗೆ ಆದೇಶ ನೀಡಿರುವುದನ್ನು ವಜಾ ಮಾಡುವಂತೆ ಕೋರಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಕಾಯ್ದಿರಿಸಿದರು. ಅರ್ಜಿ ವಿಲೇವಾರಿಯಾಗುವವರೆಗೆ ಮಧ್ಯಂತರ ಆದೇಶ ಮುಂದುವರಿಯಲಿದೆ ಎಂದು ಹೈಕೋರ್ಟ್ ಹೇಳಿದೆ.
ಅಭಿಷೇಕ್ ಮನುಸಿಂಘ್ಟಿ ವಾದ
“ಜನಪ್ರತಿನಿಧಿಗಳ ವಿರುದ್ಧ ಪ್ರಾಸಿಕ್ಯೂಷನ್ ಕೊಡುವಾಗ ವಾಕ್ ಆ್ಯಂಡ್ ಗೋ ರೀತಿಯಲ್ಲಿ ನಿರ್ಧಾರಗಳು ಆಗಬಾರದು. ರಾಜ್ಯಪಾಲರ ವಿವೇಚನಾ ಅಧಿಕಾರಕ್ಕೆ ಮಾತ್ರ ಸಿಮೀತವಾಗಿದೆ” ಎಂದು ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ ವಾದ ಆರಂಭಿಸಿದರು.
“ರಾಜ್ಯಪಾಲರ ಆದೇಶದಲ್ಲಿ ಒಂದೆ ಅಂಶ ಮುಖ್ಯವಾಗಿದೆ. ನಾನು ವಿವೇಚನಾಧಿಕಾರವನ್ನು ಬಳಸುತ್ತಿದ್ದೇನೆ. ಸಚಿವ ಸಂಪುಟದ ಯಾವುದೇ ನಿರ್ಧಾರವನ್ನು ಪರಿಗಣಿಸಿಲ್ಲ ಎಂದಿದೆ. ಆದರೆ ರಾಜ್ಯಪಾಲರಿಗೆ ಸಿಎಂ ಹಗರಣದಲ್ಲಿ ಭಾಗಿಯಾಗಿರುವುದಕ್ಕೆ ಮೇಲ್ನೊಟಕ್ಕೆ ಯಾವುದೇ ಸಾಕ್ಷಿ ಇದೆ ಎಂದು ಉಲ್ಲೇಖಿಸಿಲ್ಲ” ಎಂದರು.
ಸಂವಿಧಾನಕ್ಕೆ ರಾಜ್ಯಪಾಲರಿಂದ ಅಪಚಾರ
“ರಾಜ್ಯಪಾಲರು ವಿವೇಚನೆಯನ್ನು ಹೇಗೆ ಬಳಸಿದೆ ಎಂಬುದನ್ನು ತಿಳಿಸಬೇಕಿತ್ತು. ತಾರತಮ್ಯ ಮಾಡಿಲ್ಲವೆಂಬುದನ್ನು ರಾಜ್ಯಪಾಲರು ವಾದಿಸಬೇಕಿತ್ತು. ಇನ್ನೊಂದು ಪ್ರಮುಖ ಅಂಶವೆಂದರೆ ರಾಜ್ಯಪಾಲರ ಐದಾರು ಪುಟದ ಆದೇಶದಲ್ಲಿ ಬೇರೇನೂ ಹೇಳಿಲ್ಲ. ನಾನು ಸಚಿವ ಸಂಪುಟದ ಆದೇಶ ಪಾಲಿಸಬೇಕಿಲ್ಲವೆಂದು ರಾಜ್ಯಪಾಲರು ಹೇಳಿದ್ದಾರೆ. ಆದರೆ ಸಿಎಂ ಪಾತ್ರ ಇದೆಯೇ ಎಂಬುದನ್ನು ರಾಜ್ಯಪಾಲರು ತಿಳಿಸಿಲ್ಲ. ಯಾವುದಾದರೂ ಕಡತಕ್ಕೆ ಸಿಎಂ ಸಹಿ ಹಾಕಿದ್ದಾರೆಯೇ ಹೇಳಿಲ್ಲ. ಹೀಗಾಗಿ ರಾಜ್ಯಪಾಲರು ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ. ಯಾವ ಸಂಪುಟ ತಾನೆ ತನ್ನ ನಾಯಕ ವಿರುದ್ಧ ಅಭಿಯೋಜನಾ ಮಂಜೂರಾತಿ ನೀಡಿ ಎಂದು ಹೇಳುತ್ತದೆ? ಎಂದಾಗ ಮಧ್ಯಪ್ರವೇಶಿಸಿದ ನ್ಯಾಯಾಧೀಶರು ಅಲ್ಲಿ ಪಕ್ಷಪಾತಿತ ಇರಬಹುದಲ್ಲವೇ ಪ್ರಶ್ನೆ ಮಾಡಿದರು.
“ರಾಜ್ಯಪಾಲರು ಸಚಿವ ಸಂಪುಟದೊಂದಿಗೆ ಸೌಹಾರ್ದಯುತವಾಗಿ ವರ್ತಿಸಬೇಕು. ಸಿಎಂ ವಿಚಾರ ಎಂಬ ಕಾರಣ ಮಾತ್ರಕ್ಕೆ ಸಚಿವ ಸಂಪುಟದ ತೀರ್ಮಾನ ಕಡೆಗಣಿಸಬಾರದು. ಹಾಗೆ ನೋಡಿದರೆ ರಾಷ್ಟ್ರಪತಿಗಳಿಗಿಂತ ರಾಜ್ಯಪಾಲರಿಗೆ ಹೆಚ್ಚಿನ ಅಧಿಕಾರವಿದೆ. ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡುವ ಅಧಿಕಾರ ರಾಜ್ಯಪಾಲರಿಗೆ ಮಾತ್ರವಿದೆ. ಅವರ ವಿವೇಚನಾಧಿಕಾರ ಸಂವಿಧಾನದಲ್ಲಿ ಸ್ಪಷ್ಟವಾಗಿರಬೇಕು” ಎಂದು ಅಭಿಷೇಕ್ ಸಿಂಘ್ವಿ ವಾದಿಸಿದರು.
ವಾದ-ವಿವಾದ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ಗುರುವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿತು. ನಂತರ ವಿಚಾರಣೆಯನ್ನು ಕೈಗೆತ್ತಿಕೊಂಡ ಹೈಕೋರ್ಟ್ ವಾದ-ಪ್ರತಿವಾದ ಆಲಿಸಿ ಸಿದ್ದರಾಮಯ್ಯ ಅವರು ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಕಾಯ್ದಿರಿಸಿತು.
ಸೋಮವಾರದ ವಾದದಲ್ಲಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸಚಿವ ಸಂಪುಟದ ನಿರ್ಣಯವನ್ನು ಸಮರ್ಥಿಸಿಕೊಂಡಿದ್ದರು.