ಮೈಸೂರಿನಲ್ಲಿ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಮನೆಗೆ ಸಿಎಂ ಸಿದ್ದರಾಮಯ್ಯ ಶನಿವಾರ ಭೇಟಿ ನೀಡಿದ್ದು, ಕಾಂಗ್ರೆಸ್ಗೆ ಬಿಜೆಪಿಯ ಪ್ರಭಾವಿ ದಲಿತ ನಾಯಕನ ಬೆಂಬಲ ಪಡೆಯುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ.
ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಶ್ರೀನಿವಾಸ ಪ್ರಸಾದ್ ಅವರ ಮನೆಗೆ ತೆರಳಿ ಕೆಲ ಹೊತ್ತು ಸಿದ್ದರಾಮಯ್ಯ ಚರ್ಚಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸಿದ್ದರಾಮಯ್ಯ ಅವರಿಂದ ಶ್ರೀನಿವಾಸ ಪ್ರಸಾದ್ ದೂರವೇ ಉಳಿದಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸಿ ಮತಬೇಟೆ ಆರಂಭಿಸುವ ಒಂದು ದಿನದ ಮೊದಲೇ ಸಿದ್ದರಾಮಯ್ಯ ಅವರು ಶ್ರೀನಿವಾಸ ಪ್ರಸಾದ್ ಅವರನ್ನು ಭೇಟಿ ಮಾಡಿರುವುದು ರಾಜಕೀಯ ಸಂಚಲನಕ್ಕೂ ಕಾರಣವಾಗಿದೆ.
ಸಿದ್ದರಾಮಯ್ಯ ಭೇಟಿ ಬಳಿಕ ಶ್ರೀನಿವಾಸ ಪ್ರಸಾದ್ ಅವರು ಮಾಧ್ಯಮಗಳ ಜೊತೆ ಮಾತನಾಡಿ, “ಭಾನುವಾರ ನಡೆಯುವ ಮೋದಿ ಸಮಾವೇಶಕ್ಕೆ ನಾನು ಹೋಗುವುದಿಲ್ಲ. ನನಗೆ ಆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಚಾಮರಾಜನಗರದಲ್ಲಿ ಈ ಬಾರಿ ಕಾಂಗ್ರೆಸ್ ಪರವಾದ ಅಲೆ ಇದೆ” ಎಂದಿರುವುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
ಶ್ರೀನಿವಾಸ ಪ್ರಸಾದ್ ಭೇಟಿ ಬಳಿಕ ಮಾತನಾಡಿದ ಸಿದ್ದರಾಮಯ್ಯ, “ನಾನು, ಶ್ರೀನಿವಾಸ ಪ್ರಸಾದ್ ಅವರು ಬಹುಕಾಲದ ಗೆಳೆಯರು. ರಾಜಕೀಯ ನಿವೃತ್ತಿ ಬಳಿಕ ಭೇಟಿಯಾಗಿರಲಿಲ್ಲ. ಹೀಗಾಗಿ ಭೇಟಿಯಾದೆ ಅಷ್ಟೆ. ಇದು ರಾಜಕೀಯದ ಭೇಟಿ ಅಲ್ಲ” ಎಂದಿದ್ದಾರೆ.
ಕಾಂಗ್ರೆಸ್ಗೆ ಶ್ರೀನಿವಾಸ ಪ್ರಸಾದ್ ಬೆಂಬಲ: ಸುನೀಲ್ ಬೋಸ್
“ಶ್ರೀನಿವಾಸ ಪ್ರಸಾದ್ ಅವರ ಬೆಂಬಲ ನಮಗಿದೆ” ಎಂದು ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಬಹಿರಂಗ ಹೇಳಿಕೆ ನೀಡಿದ್ದು, ಸಹಜವಾಗಿ ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದೆ.
ಚಾಮರಾಜನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸುನೀಲ್ ಬೋಸ್, “ಶ್ರೀನಿವಾಸ ಪ್ರಸಾದ್ ಅವರ ಸಂಪೂರ್ಣ ಬೆಂಬಲ ಕಾಂಗ್ರೆಸ್ಗೆ ಇದೆ. ಬಿಜೆಪಿ ಸಂಸದರ ಆಶೀರ್ವಾದ ಪಡೆದಿದ್ದೇನೆ. ಗೆದ್ದು ಬಾ ಎಂದು ನನಗೆ ಆಶೀರ್ವಾದ ಮಾಡಿದ್ದಾರೆ. ಅವರ ಬೆಂಬಲಿಗರು ಕೂಡ ಕಾಂಗ್ರೆಸ್ ಸೇರಿದ್ದಾರೆ. ನಮ್ಮ ಗೆಲುವು ನಿಶ್ಚಿತ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.