Homeಕರ್ನಾಟಕಸಿದ್ದರಾಮಯ್ಯ ಗುಂಡುಕಲ್ಲು ಇದ್ದ ಹಾಗೆ ಇದ್ದಾರೆ, ಯಾಕೆ ವೀಕ್ ಆಗ್ತಾರೆ?: ಸಚಿವ ಪರಮೇಶ್ವರ್

ಸಿದ್ದರಾಮಯ್ಯ ಗುಂಡುಕಲ್ಲು ಇದ್ದ ಹಾಗೆ ಇದ್ದಾರೆ, ಯಾಕೆ ವೀಕ್ ಆಗ್ತಾರೆ?: ಸಚಿವ ಪರಮೇಶ್ವರ್

ಸಿದ್ದರಾಮಯ್ಯನವರು ಗುಂಡುಕಲ್ಲು ಇದ್ದ ಹಾಗೆ ಇದ್ದಾರೆ. ಯಾಕೆ ವೀಕ್ ಆಗ್ತಾರೆ? ನಮಗೇನು ಹಂಗ್ ಅನ್ನಿಸಿಲ್ಲ. ನಿಮ್ಮ ಕ್ಯಾಮೆರಾ ಕಣ್ಣಲ್ಲಿ ಏನು ಬರುತ್ತೋ ಗೊತ್ತಾಗಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದರು.

ಸಿದ್ದರಾಮಯ್ಯನವರು ವೀಕ್ ಆಗಿದ್ದಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಮುಡಾ‌ ಪ್ರಕರಣದಲ್ಲಿ ಮುಖ್ಯಮಂತ್ರಿಯವರ ಪಾತ್ರ ಏನು ಇಲ್ಲ. ಮುಂದಿನ ನ್ಯಾಯಾಂಗ ಹೋರಾಟ ಮಾಡಲು ಅವಕಾಶ ಇರುವುದರಿಂದ ಮುಖ್ಯಮಂತ್ರಿಯವರು ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ” ಎಂದು ಹೇಳಿದರು.

ಬೆಂಗಳೂರು ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮುಖ್ಯಮಂತ್ರಿಯವರು ಯಾವುದೇ ಕಡತಕ್ಕೆ ರುಜು ಹಾಕಿಲ್ಲ. ಅಧಿಕಾರ ದುರ್ಬಳಕೆ ಆಗಿಲ್ಲ ಎಂದು ನ್ಯಾಯಕ್ಕಾಗಿ ಹೈಕೋರ್ಟ್‌ಗೆ ಹೋಗಿದ್ದೇವು. ಅದಕ್ಕೆ ವಿರುದ್ಧವಾದ ತೀರ್ಪು ಬಂದಿದೆ. ತೀರ್ಪನ್ನು ಗೌರವಿಸುತ್ತೇವೆ. ಆದರೆ, ಎಲ್ಲೋ ಒಂದುಕಡೆ ನಮಗೆ ನ್ಯಾಯ ಸಿಗಲಿಲ್ಲವೇನು ಅನ್ನಿಸುತ್ತಿದೆ. ಮುಂದಿ‌ನ ನ್ಯಾಯಾಂಗ ಹೋರಾಟದ ಮುಖ್ಯಮಂತ್ರಿಯವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ” ಎಂದರು.

“ಮುಖ್ಯಮಂತ್ರಿಯವರು ರಾಜೀನಾಮೆ ಕೊಡಬೇಕು. ಅಧಿಕಾರ ಬಿಟ್ಟು ಇಳಿಯಬೇಕು ಎನ್ನುವ ಮಾತುಗಳು ವಿಪಕ್ಷದವರಿಂದ ಕೇಳಿಬರುತ್ತಿದೆ. ಇದ್ಯಾವುದು ಕೂಡ ಆಗುವುದಿಲ್ಲ. ಮುಖ್ಯಮಂತ್ರಿಯವರು ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಅನೇಕರು ಸ್ಪಷ್ಟಪಡಿಸಿದ್ದಾರೆ. ನಾನು ಸಹ ಇದೇ ಮಾತನ್ನು ಸ್ಪಷ್ಟಪಡಿಸುತ್ತೇನೆ. ಮುಂದಿನ ನ್ಯಾಯಾಂಗ ಹೋರಾಟ ಮಾಡಲು ಅವಕಾಶ ಇರುವುದರಿಂದ ರಾಜೀನಾಮೆ ನೀಡುವ ಪ್ರಮೇಯ ಬರುವುದಿಲ್ಲ” ಎಂದು ಪುನರುಚ್ಚರಿಸಿದರು.

“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ನಲವತ್ತು ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ರೀತಿಯ ಆಪಾದನೆಗಳು ಬಂದಿಲ್ಲ. ಈಗ ರಾಜಕೀಯ ದುರುದ್ದೇಶದಿಂದ ಆರೋಪಗಳನ್ನು ಮಾಡಿದ್ದಾರೆ. ಎಂತವರಿಗೂ ಸಹ ಇಂತಹ ಆಪಾದನೆ ಮಾಡಿದ್ದಾರೆ ಎಂದದಾಗ ನೋವಾಗುವುದು ಸಹಜ. ಇದಕ್ಕೆ ಹೋರಾಟ ಮಾಡಬೇಕಲ್ಲವೇ. ವಿಪಕ್ಷದವರು ರಾಜಕೀಯ ದುರುದ್ದೇಶದಿಂದ ಮಾಡಿರುವ ಆರೋಪವನ್ನು ಜನಸಮುದಾಯಕ್ಕೆ ತೋರಿಸುತ್ತೇವೆ” ಎಂದು ಹೇಳಿದರು‌.

“ಹೈಕೋರ್ಟ್‌ನಲ್ಲಿ ವಕೀಲರು ವಾದ ಮಾಡುವ ಸಂದರ್ಭದಲ್ಲಿ, ‘ಮುಖ್ಯಮಂತ್ರಿಯವರ ಪಾತ್ರ ಏನಿದೆ ಎಂಬುದನ್ನು ಹೇಳಿ. ಈ ಬಗ್ಗೆ ಯಾರು ಹೇಳುತ್ತಿಲ್ಲವಲ್ಲ’ ಎಂದು ಜಡ್ಜ್ ಅವರು ಕೇಳಿದ್ದಾರೆ. ಮುಖ್ಯಮಂತ್ರಿಯವರ ಪಾತ್ರ ಏನು ಎಂಬುದು ಜಡ್ಜ್‌ಮೆಂಟ್‌ನಲ್ಲಿ ಎಲ್ಲಿಯೂ ಕಾಣಿಸಿಲ್ಲ. ದ್ವಿಸದಸ್ಯ ಪೀಠ ಅಥವಾ ಸುಪ್ರೀಂಕೋರ್ಟ್‌ಗೆ ಹೋಗುವ ಬಗ್ಗೆ ಮುಖ್ಯಮಂತ್ರಿಯವರು ಮತ್ತು ಅವರ ಕಾನೂನು ಸಲಹೆಗಾರರು ತೀರ್ಮಾನ ಮಾಡುತ್ತಾರೆ. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನ್ಯಾಯಯುತವಾದ ತೀರ್ಮಾನ ಬರುತ್ತದೆ ಎಂಬ ವಿಶ್ವಾಸವಿದೆ” ಎಂದು ಅಭಿಪ್ರಾಯಪಟ್ಟರು.

“ಮುಖ್ಯಮಂತ್ರಿಯವರ ಮೇಲೆ ಪಕ್ಷದೊಳಗೆ ಯಾವುದೇ ರೀತಿಯ ಒತ್ತಡವಿಲ್ಲ. ಬಿಜೆಪಿಯವರು ಪದೇ ಪದೆ ರಾಜೀನಾಮೆ ಕೊಡಬೇಕು ಅಂತ ಹೇಳುತ್ತಿರುವುದರಿಂದ, ರಾಜೀನಾಮೆ‌ನೀಡುವುದಿಲ್ಲ‌ ಎಂದು ಮುಖ್ಯಮಂತ್ರಿಯವರು ಪುನರುಚ್ಚರಿಸಿದ್ದಾರೆ‌. ಪಕ್ಷದೊಳಗೆ ಒತ್ತಡವಿರುವ ರೀತಿಯ ವ್ಯತ್ಯಾಸಗಳಾಗಲಿ, ಭಾವನೆಗಳಾಗಲಿ ಇಲ್ಲ. ಹೈಕಮಾಂಡ್ ನಿಮ್ಮ ಜೊತೆಗಿದೆ ಎಂದು ಕೆ ಸಿ ವೇಣುಗೋಪಾಲ್ ಮತ್ತು ಸುರ್ಜೇವಾಲಾ ಅವರು ಹೇಳಿದ್ದಾರೆ”‌ ಎಂದು ಸ್ಪಷ್ಟಪಡಿಸಿದರು.

“ಹೈಕೋರ್ಟ್‌ನಿಂದ ರಾಜ್ಯಪಾಲರಿಗೆ ಬಲ ಬಂದಿರಬಹುದು. ಅದನ್ನು ಎಲ್ಲರಿಗೂ ಅನ್ವಯಿಸಬೇಕು. ಹೆಚ್‌.ಡಿ.ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ಧನಾ ರೆಡ್ಡಿ ಅವರಿಗೂ ಅನ್ವಯಿಸಬೇಕಲ್ಲವೇ? ಬಲ ಬಂದಿದೆ ಅಂತ ಹೇಳಿ ಒಬ್ಬರಿಗೆ, ಒಂದು ವರ್ಗಕ್ಕೆ ಸೀಮಿತ ಮಾಡುವುದು ಸರಿ ಕಾಣಿಸುವುದಿಲ್ಲ. ಅದು ನ್ಯಾಯ ಅಂತಲೂ ಅನ್ನಿಸುವುದಿಲ್ಲ” ಎಂದು ಹೇಳಿದರು.

“ರಾಜ್ಯಪಾಲರು ಕಡತಗಳನ್ನು ಲೋಕಾಯುಕ್ತಕ್ಕೆ ವಾಪಸ್ ಕಳಿಸಿರಬಹುದು. ಲೋಕಾಯುಕ್ತದವರು ಸ್ಪಷ್ಟನೆ ನೀಡಿ, ಆ ಕಡತಗಳನ್ನು ರಾಜ್ಯಪಾಲರಿಗೆ ವಾಪಸ್ ಕಳುಹಿಸಿದ್ದಾರೆ. ರಾಜ್ಯಪಾಲರು ತಮ್ಮ ಬಲವನ್ನು ಈ ಪ್ರಕರಣಗಳಿಗೂ ಉಪಯೋಗಿಸಬೇಕು” ಎಂದು ಆಗ್ರಹಿಸಿದರು.

“ಬೆಂಗಳೂರನ್ನೆ ತಲ್ಲಣಗೊಳಿಸಿರುವ ವೈಯಾಲಿಕಾವಲ್‌ನಲ್ಲಿ ನಡೆದ ಮಹಿಳೆ‌ಮಹಾಲಕ್ಷ್ಮೀ ಹತ್ಯೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಈಗಾಗಲೇ ಒಡಿಶಾದಲ್ಲಿ ಇದ್ದಾನೆ ಎಂದು ಗುರುತಿಸಲಾಗಿದೆ. ಸ್ಥಳ ಬದಲಾಯಿಸುತ್ತಿದ್ದು ತೀವ್ರ ಶೋಧ ನಡೆದಿದೆ. ಈಗಾಗಲೇ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಹೆಚ್ಚಿನ ಸಾಕ್ಷ್ಯ ಮತ್ತು ಮಾಹಿತಿ ಆಧಾರದ ಮೇಲೆ ಒಡಿಶಾದಲ್ಲಿ ತಲೆಮರೆಸಿಕೊಂಡಿರುವ ವ್ಯಕ್ತಿಯ ಮೇಲೆ ಸಂಶಯವಿದೆ” ಎಂದು ಮಾಹಿತಿ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments