ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಲ್ಲೇಶ್ವರಂನಲ್ಲಿರುವ ಕೆ.ಸಿ.ಜನರಲ್ ಆಸ್ಪತ್ರೆಯ ನೂತನ ಡಯಾಲಿಸಿಸ್ ಕೇಂದ್ರವನ್ನು ಶನಿವಾರ ಉದ್ಘಾಟಿಸಿದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಜತೆ ಮಾತನಾಡಿ ಆಸ್ಪತ್ರೆಯ ಆರೋಗ್ಯ ಸೇವೆಯ ಗುಣಮಟ್ಟ ಮತ್ತು ವೈದ್ಯ ಸಿಬ್ಬಂದಿಯ ಕಾರ್ಯಕ್ಷಮತೆ ಬಗ್ಗೆ ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಅವರು, “ಉಚಿತ ಡಯಾಲಿಸಿಸ್ ಸೇವೆಯನ್ನು ಉದ್ಘಾಟಿಸಿದ್ದೇವೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಡವರಿಗೆ ಇದು ಬಹಳ ಅನುಕೂಲಕರವಾಗಲಿದೆ. ವಾರಕ್ಕೆ ಮೂರು ಸಲ ಡಯಾಲಿಸಿಸ್ ಮಾಡಿಸಬೇಕು. ವಾರಕ್ಕೆ ಕನಿಷ್ಠ ಆರು ಸಾವಿರ ಉಳಿಯುತ್ತದೆ” ಎಂದರು.
“ಸರ್ಕಾರ ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ಉಚಿತ ಡಯಾಲಿಸಿಸ್ ಸೇವೆಯನ್ನು ಆರಂಭಿಸಿದೆ. ಕರ್ನಾಟಕದಲ್ಲಿ 219 ಡಯಾಲಿಸಿಸ್ ಕೇಂದ್ರಗಳು ಇವೆ. ಇಲ್ಲಿ 800 ಯಂತ್ರಗಳನ್ನು ಅಳವಡಿಸುತ್ತಿದ್ದೇವೆ” ಎಂದು ಹೇಳಿದರು.
“ನಮ್ಮ ಸರ್ಕಾರ ಗುಣಮಟ್ಟದ ಆರೋಗ್ಯ ಸೇವೆ ಕೊಡಲು ಸದಾ ಸಿದ್ಧ. ಕಿಡ್ನಿ ವೈಫಲ್ಯ ಎಲ್ಲರಿಗೂ ಬರುತ್ತದೆ. ಕೆ ಸಿ ಜನರಲ್ ಆಸ್ಪತ್ರೆ ಬಹಳ ಹಳೆಯದು. 26 ವರ್ಷ ಆಗಿದೆ. ಈ ಒಂದು ಸೌಕರ್ಯ ಇಲ್ಲಿ ಒದಗಿಸಿದ್ದೇವೆ. ಇನ್ನೂ ಹೆಚ್ಚಿನ ಸೇವೆ ಕೊಡುತ್ತೇವೆ” ಎಂದು ಭರವಸೆ ನೀಡಿದರು.
ಕೆ.ಸಿ ಜನರಲ್ ಆಸ್ಪತ್ರೆ ಮೇಲ್ದರ್ಜೆಗೆ
“ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸೇರಿದಂತೆ, 150 ಕೋಟಿ ವೆಚ್ಚದಲ್ಲಿ ಆಸ್ಪತ್ರೆಯನ್ನ ಮೇಲ್ದರ್ಜೆಗೆ ಏರಿಸುವುದಾಗಿ ಇದೇ ವೇಳೆ ಸಿಎಂ ಸಿದ್ದರಾಮಯ್ಯ ಹೇಳಿದರು. ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಕೆ.ಸಿ ಜನರಲ್ ಆಸ್ಪತ್ರೆ ತುಂಬ ಹಳೆಯ ಆಸ್ಪತ್ರೆ. ಇಲ್ಲಿಗೆ ಸಾಕಷ್ಟು ರೋಗಿಗಳ ಬರುತ್ತಾರೆ. 150 ಕೋಟಿ ವೆಚ್ಚದಲ್ಲಿ ಆಸ್ಪತ್ರೆಗೆ ಮೇಲ್ದರ್ಜೆಗೆ ಏರಿಸುವ ಬಗ್ಗೆ ದಿನೇಶ್ ಗುಂಡೂರಾವ್ ಪ್ರಸ್ತಾವನೆಯನ್ನ ಕ್ಯಾಬಿನೆಟ್ ಗೆ ತರುವುದಾಗಿ ಹೇಳಿದ್ದಾರೆ. ಕ್ಯಾಬಿನೆಟ್ ನಲ್ಲಿ ಪ್ರಸ್ತಾವನೆಗೆ ನಾವು ಒಪ್ಪಿಗೆ ನೀಡುತ್ತೇವೆ” ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.