ಏನಾದರೂ ಮಾಡಿ ಕುಮಾರಸ್ವಾಮಿಯನ್ನು ಜೈಲಿಗೆ ಕಳುಹಿಸಲೇಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಕುತಂತ್ರ ಹೆಣೆದಿದ್ದಾರೆ. ನಾನು ಒಂದು ದಿನವಾದರೂ ಜೈಲಿನಲ್ಲಿರಬೇಕು ಎಂಬುದು ಅವರ ಆಸೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದರು.
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಯಾವುದೋ ಸತ್ತು ಹೋಗಿರುವ ಪ್ರಕರಣ ಇಟ್ಟುಕೊಂಡು ನನ್ನ ಹಣಿಯಲು ಪ್ರಯತ್ನಿಸುತ್ತಿದ್ದಾರೆ. ಹಿಡಿದರೆ ಸ್ವಲ್ಪ ದೊಡ್ಡ ಕೇಸ್‌ಗಳನ್ನು ಹಿಡಿಯಿರಿ” ಎಂದು ವ್ಯಂಗ್ಯವಾಡಿದರು.
“2017ರಲ್ಲಿ ಎಸ್‌ಐಟಿ ನನಗೆ ನೋಟಿಸ್ ಕೊಟ್ಟಿತು. ನಮ್ಮ ವಕೀಲರ ಸಲಹೆ ಜಾಮೀನು ತಗೊಂಡು ಎಸ್‌ಐಟಿ ತಂಡ ಭೇಟಿಯಾದೆ. ಆದರೆ, ಅಲ್ಲಿಗೆ ಹೋದಾಗ ‘ಇದು ಜಾಮೀನು ತೆಗೆದುಕೊಳ್ಳುವ ಪ್ರಕರಣವೇ ಅಲ್ಲ’ ಎಂದು ಅಧಿಕಾರಿಗಳು ಹೇಳಿದ್ದರು” ಎಂದರು.
“ನಾನು ಸಿಎಂ ಆಗಿದ್ದಾಗ ಮನಸ್ಸು ಮಾಡಿದ್ದರೆ ನನ್ನ ಈ ಕೇಸುಗಳನ್ನು ಮುಚ್ಚಿ ಹಾಕಿಸಬಹುದಿತ್ತು. ನನಗೆ ಎರಡು ಸೆಕೆಂಡ್ ಆಗುತ್ತಿರಲಿಲ್ಲ. ನನ್ನ ಕಡೆ ಯಾವ ತಪ್ಪು ಆಗಿಲ್ಲ ಅಂತ ಸುಮ್ಮನಿರುವೆ. ಸಾಯಿ ವೆಂಕಟೇಶ್ವರ್ ಕಂಪನಿಗೆ ಸಂಬಂಧಪಟ್ಟ ಎಲ್ಲ ಕಡತಗಳು ನನ್ನ ಬಳಿ ಇವೆ. ನಾನು ಯಾವ ಕಡತಕ್ಕೂ ಸಹಿ ಮಾಡಿಲ್ಲ. ನನ್ನ ಹೆಸರಿನಲ್ಲಿ ನಕಲಿ ಸಹಿ ಮಾಡಲಾಗಿದೆ” ಎಂದು ದೂರಿದರು.
“ಎಸ್‌ಐಟಿ ತನಿಖೆ ಪೂರ್ಣಗೊಂಡಿದ್ದರೆ ಸುಪ್ರೀಂ ಕೋರ್ಟ್ ಮುಂದೆ ಯಾಕೆ ಇನ್ನೂ ಸಲ್ಲಿಸಿಲ್ಲ? ಇದನ್ನು ಸುಪ್ರೀಂ ಕೋರ್ಟ್ ಕೂಡ ಪ್ರಶ್ನಿಸಿದೆ. ರಾಜ್ಯಪಾಲರ ಅನುಮತಿ ತಗೊಂಡು ನನ್ನ ವಿರುದ್ಧ ತನಿಖೆ ಮಾಡಿ ಎಂದು ಸುಪ್ರೀಂ ಕೋರ್ಟ್ ಹೇಳಿದೆಯಾ? ಇದೆಲ್ಲ ಕುತಂತ್ರ ಅಷ್ಟೇ” ಎಂದು ದೂರಿದರು.
“ಸಾಯಿ ವೆಂಕಟೇಶ್ವರ್ ಕಂಪನಿ ಮೋಸದ ಕಂಪನಿ. ನನ್ನ ಸಹಿ ಬಗ್ಗೆ ತನಿಖೆ ನಡೆಯುತ್ತಿದೆ. ಈ ಕಂಪನಿ ಕೋರ್ಟ್‌ಗಳನ್ನೇ ಯಾಮಾರಿಸಿದೆ. ಅವತ್ತಿನ ರಾಜ್ಯಪಾಲರ ಮುಂದೆ ಮೋಸದ ಪ್ರಕರಣ ಬಂದಿದೆ. ನಾನು ಸಹಿ ಮಾಡಿದ ಆದೇಶದಲ್ಲಿ ಏನಿದೆ ಎಂಬುದು ತನಿಖೆ ಮಾಡಿದ್ದೀರಾ? ಅಲ್ಲಿ ಒಬ್ಬ ಅಧಿಕಾರಿ 20 ಲಕ್ಷ ರೂಗಳನ್ನು ತಮ್ಮ ಮಗನ ಅಕೌಂಟ್‌ಗೆ ಹಾಕಿಸಿಕೊಳ್ಳುತ್ತಾನೆ. ನಾನು ಅದನ್ನು ಕಂಡು ಹಿಡಿದೆ. ಎಲ್ಲ ಅಧಿಕಾರಿಗಳಿಂದಲೇ ಮೋಸವಾಗಿದೆ. ಅವರೇ ಫೈಲ್ ಸಿದ್ದಪಡಿಸಿದ್ದು” ಎಂದು ವಿವರಿಸಿದರು.
“ಸಿಎಂ ಸಿದ್ದರಾಮಯ್ಯ ಅವರ ಮೇಲೆ ಲೋಕಾಯುಕ್ತದಲ್ಲಿ 62 ಪ್ರಕರಣ ಇವೆ. ಭ್ರಷ್ಟಾಚಾರ, ಕರ್ತವ್ಯ ಲೋಪ ಮೇಲೆ ಅವೆಲ್ಲ ದಾಖಲಾಗಿವೆ. 50 ಪ್ರಕರಣಗಳ ವಿಚಾರಣೆಯೇ ನಡೆದಿಲ್ಲ. ಇವರು ನನ್ನ ಬಗ್ಗೆ ಮಾತನಾಡುತ್ತಾರೆ. ಲೋಕಾಯುಕ್ತದ ನರ ಕಿತ್ತಿದ್ದು ಏಕೆ ಎಂಬುದು ಬಿಚ್ಚಿಡಲಾ” ಎಂದು ಪ್ರಶ್ನಿಸಿದರು.
“ಸಂವಿಧಾನದ ಸಂಸ್ಥೆಗಳನ್ನು ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಹೇಗೆಲ್ಲಾ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬುದು ಸಾವಿರಾರು ಉದಾಹರಣೆ ಕೊಡಬಲ್ಲೆ. 2015ರಲ್ಲಿ ಸಿದ್ದರಾಮಯ್ಯ ಅವರು ಏನೇನು ಮಾಡಿದ್ದಾರೆ ಎಂಬುದು ಸಮಯ ಬಂದಾಗ ಬಿಚ್ಚಿಡುವೆ. ಈಗ ಹೇಳಿದ್ರೆ ಆ ಎಲ್ಲ ದಾಖಲೆಗಳನ್ನು ತಿದ್ದುತ್ತಾರೆ” ಎಂದರು.
“ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರವನ್ನು ಯಾಕೆ ಎಳೆದು ತರುತ್ತಾರೆ? ಕಾಂಗ್ರೆಸ್‌ಗೆ ನನ್ನ ಭಯ ಬಿಟ್ಟರೆ ಯಾರ ಭಯವೂ ಇಲ್ಲ. ನನ್ನ ಬಳಿ ಲಾರಿಯಷ್ಟು ದಾಖಲೆ ಇದೆ. ನನ್ನ ಕೆಣಕಿದರೆ ಅವುಗಳನ್ನು ಬಿಡುಗಡೆ ಮಾಡುವೆ” ಎಂದು ಎಚ್ಚರಿಸಿದರು.