Homeಕರ್ನಾಟಕಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ: ಡಿ ಕೆ ಸುರೇಶ್

ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ: ಡಿ ಕೆ ಸುರೇಶ್


‌ಸಿಎಂ ಬದಲಾವಣೆ ಚರ್ಚೆ ವ್ಯರ್ಥ ಪ್ರಯತ್ನ. ಕೆಲವರಿಗೆ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇರಬಹುದು. ಅದು ಈ ಅವಧಿಯಲ್ಲಿ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮಾಜಿ ಸಂಸದ ಡಿ ಕೆ ಸುರೇಶ್ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, “ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಚ್ಯುತಿ ಬರುವುದಿಲ್ಲ. ಅವರೇ ಐದು ವರ್ಷ ಸಿಎಂ ಆಗಿರುತ್ತಾರೆ. ಹೈಕಮಾಂಡ್ ಕೂಡ ಇದನ್ನು ಸ್ಪಷ್ಟವಾಗಿ ಹೇಳಿದೆ” ಎಂದರು.

“ಕೆಲವರಿಗೆ ಮುಖ್ಯಮಂತ್ರಿ ಆಗುವ ಆಸೆ ಇರಬಹುದು ಅವರೆಲ್ಲರೂ ಹಿರಿಯ ನಾಯಕರೇ. ಆದರೆ, ಖಾಲಿ ಇಲ್ಲದ ಹುದ್ದೆಗೆ ಪೈಪೋಟಿ ನಡೆಸುವುದು ಸೂಕ್ತವಲ್ಲ. ಎಲ್ಲ ಶಾಸಕರ ಅಭಿಪ್ರಾಯ ಆಧರಿಸಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಹೈಕಮಾಂಡ್ ಕೂಡ ಸಿದ್ದರಾಮಯ್ಯ ಅವರ ಬೆನ್ನಿಗಿದೆ” ಎಂದು ತಿಳಿಸಿದರು.

“ಬಿಜೆಪಿಯವರು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಹುನ್ನಾರ ನಡೆಸುತ್ತಿದ್ದಾರೆ. ಆ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಕಿಲ್ಲ. ರಾಜ್ಯ ಸರ್ಕಾರ ಭದ್ರವಾಗಿದೆ. ಯಾವ ಅನುಮಾನವೂ ಬೇಡ” ಎಂದರು.

“ರಾಜಕಾರಣದಲ್ಲಿ ಗೊಂದಲ ಸೃಷ್ಟಿಸಬೇಕು ಎಂದೇ ಕೆಲವರು ಇರುತ್ತಾರೆ. ಗೊಂದಲಗಳಿಂದಲೇ ನಾಯಕರಾಗಬೇಕು ಎಂಬುದು ಅವರ ಆಸೆ. ಕೆಲಸ ಮಾಡಿ ನಾಯಕರಾಗಬೇಕು” ಎಂದು ಸಿಎಂ ಸ್ಥಾನದ ಬಗ್ಗೆ ಆಕಾಂಕ್ಷೆ ವ್ಯಕ್ತಪಡಿಸಿರುವ ಸ್ವಪಕ್ಷದ ನಾಯಕರಿಗೆ ಪರೋಕ್ಷವಾಗಿ ಕುಟುಕಿದರು.

ಚನ್ನಪಟ್ಟಣ ಉಪ ಚುನಾವಣೆ ಬಗ್ಗೆ ಮಾತನಾಡಿ, “ನಾವ್ಯಾಕೆ ಸಿ ಪಿ ಯೋಗೇಶ್ವರ್ ಅವರಿಗೆ ಮಣೆ ಹಾಕಬೇಕು? ನಮಗೆ ಯೋಗೇಶ್ವರ್ ಅವಶ್ಯಕತೆ ಇಲ್ಲ. ಚನ್ನಪಟ್ಟಣ ಗೆಲುವಿಗಾಗಿ ತಂತ್ರಗಾರಿಕೆ ರೂಪಿಸಿದ್ದೇವೆ. ಶೀಘ್ರದಲ್ಲಿ ಅಚ್ಚರಿಯ ಅಭ್ಯರ್ಥಿ ಹೆಸರು ಬಹಿರಂಗವಾಗಲಿದೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments