Homeಕರ್ನಾಟಕಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಸಿದ್ದರಾಮಯ್ಯ- ಡಿ ಕೆ ಶಿವಕುಮಾರ್‌ ಭೇಟಿ

ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಸಿದ್ದರಾಮಯ್ಯ- ಡಿ ಕೆ ಶಿವಕುಮಾರ್‌ ಭೇಟಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಸುರಿದ ಮಳೆಯಿಂದ ಹಾನಿಗೆ ಒಳಗಾಗಿರುವ ಪ್ರದೇಶಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಭೇಟಿ ನೀಡಿ ಪರಿಶೀಲಿಸಿದರು. ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, “ಸಂಜೆ ವೇಳೆ ಸಂಚಾರ ದಟ್ಟಣೆ ಹೆಚ್ಚಿರುವ ಕಾರಣ ಜನರಿಗೆ ತೊಂದರೆಯಾಗುತ್ತದೆ ಎಂದು ಮನಗಂಡು ಇಂದು ಕೆಲವು ಸ್ಥಳಗಳಿಗೆ ಭೇಟಿ ನೀಡಲಾಗಿದೆ. ನಾಳಿದ್ದು (ಮೇ 21) ಇಡೀ ದಿನ ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರಿನ ಶಾಸಕರೊಂದಿಗೆ ನಗರ ಪ್ರದಕ್ಷಿಣೆ ಮಾಡಲಾಗುವುದು” ಎಂದು ತಿಳಿಸಿದರು. “ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸಲಾಗುವುದು. ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎನ್ನುವುದನ್ನು ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ಕೊಡಲಾಗುವುದು” ಎಂದು ಹೇಳಿದರು. ಈವರೆಗೆ 491 ಕಿ.ಮೀ ಉದ್ದದ ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಾಣ “ನಗರದಲ್ಲಿ ರಾಜಕಾಲುವೆಗಳು ಒತ್ತುವರಿಯಾಗಿದ್ದು, ಚರಂಡಿಗಳು ಆಳವಿಲ್ಲದೆ ಚಿಕ್ಕದಾಗಿರುವುದಲ್ಲದೆ ಹೂಳು ತುಂಬಿದೆ. ಇದನ್ನು ತೆರವು ಮಾಡಲು ನಗರಪಾಲಿಕೆಯವರಿಗೆ ಅನೇಕ ಬಾರಿ ಸೂಚನೆ ನೀಡಲಾಗಿದ್ದು, ಇನ್ನೂ ಕಾಮಗಾರಿಗಳು ನಡೆಯುತ್ತಿವೆ. 859.90 ಕಿ. ಮಿ ಉದ್ದದ ರಾಜಕಾಲುವೆಗಳು ಇವೆ. ಇಲ್ಲಿಯವರೆಗೆ 491 ಕಿಮಿ ಉದ್ದದ ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಿಸಲಾಗಿದೆ. 195 ಉದ್ದದಲ್ಲಿ ತಡೆಗೋಡೆ ನಿರ್ಮಾಣ ಕಾರ್ಯ ಚಾಲ್ತಿಯಲ್ಲಿದ್ದು, 173 ಕಿ.ಮಿ ಉದ್ದದ ರಾಜಕಾಲುವೆಗಳನ್ನು ವರ್ಲ್ಡ್ ಬ್ಯಾಂಕ್ ವತಿಯಿಂದ ಕೈಗೊಳ್ಳಲಾಗಿದ್ದು, ರಾಜಕಾಲುವೆ ಕಾರ್ಯ ಪ್ರಗತಿಯಲ್ಲಿದೆ” ಎಂದರು. “ರಾಜಕಾಲುವೆಗಳಾಗದೆ ರಸ್ತೆಗಳಲ್ಲಿ ನೀರು ನಿಲ್ಲುವುದನ್ನು ತಪ್ಪಿಸುವುದು ಕಷ್ಟ. ಬೆಂಗಳೂರು ನಗರದಲ್ಲಿ ಸುಮಾರು 210 ತಗ್ಗು ಪ್ರದೇಶಗಳನ್ನು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಎಂದು ಗುರುತು ಮಾಡಲಾಗಿದೆ. 166 ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಬಾಕಿ 44 ಪ್ರದೇಶಗಳಲ್ಲಿ ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಪೈಕಿ 24 ಕಾಮಗಾರಿ ಪ್ರಗತಿಯಲ್ಲಿದ್ದು, ಇವು ಪೂರ್ಣಗೊಂಡರೆ ಈ ಸಮಸ್ಯೆ ಬಹಳಷ್ಟು ಕಡಿಮೆಯಾಗಲಿದೆ” ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಮಳೆ (2) ಮಹಿಳೆ ಸಾವು: ಪರಿಹಾರ ಘೋಷಣೆ ವೈಟ್ ಫೀಲ್ಡ್ ನಲ್ಲಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದು, ಸರ್ಕಾರದ ವತಿಯಿಂದ 5 ಲಕ್ಷ ರೂ.ಗಳ ಪರಿಹಾರವನ್ನು ನೀಡುವುದಾಗಿ ಸಿಎಂ ಘೋಷಿಸಿದರು. ರಾಜಕಾಲುವೆಗಳ ಕಾಮಗಾರಿ ಕೈಗೊಳ್ಳಲಾಗಿದೆ “ಸಂಚಾರಿ ಪೊಲೀಸರು 132 ಸ್ಥಳಗಳನ್ನು ಗುರುತಿಸಿದ್ದಾರೆ. ಈ ಪೈಕಿ 82 ಕಾಮಗಾರಿ ಪೂರ್ಣಗೊಂಡಿದ್ದು, 41 ಕಾಮಗಾರಿಗಳು ಬಾಕಿ ಇವೆ. ಈ ವರ್ಷ ಇಡೀ ಬೆಂಗಳೂರಿನ ರಾಜಕಾಲುವೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸಿಲ್ಕ್ ಬೋರ್ಡ್ ಜಂಕ್ಷನ್, ಹೆಬ್ಬಾಳ ಜಂಕ್ಷನ್ ಬಳಿ ಅತಿ ಹೆಚ್ಚು ಮಳೆಯಾಗಿದ್ದು, ನೀರು ಹರಿದುಹೋಗುವಂತೆ ದಾರಿ ಮಾಡಲು ರೈಲ್ವೆಯವರಿಗೆ ಕೆಲಸವನ್ನು ವಹಿಸಲಾಗಿದೆ” ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿವರಿಸಿದರು.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments