Homeಕರ್ನಾಟಕಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಮೇಲೆ ಹಿಟ್ಲರ್ ಆಗಿದ್ದಾರೆ: ಶೋಭಾ ಕರಂದ್ಲಾಜೆ

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಮೇಲೆ ಹಿಟ್ಲರ್ ಆಗಿದ್ದಾರೆ: ಶೋಭಾ ಕರಂದ್ಲಾಜೆ

ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಮೇಲೆ ಹಿಟ್ಲರ್ ಆಗಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು (ಸೆ.19) ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಬಿಜೆಪಿ ಸಂಸದರು ಮತ್ತು ಶಾಸಕರ ಮೇಲೆ ನಿರಂತರವಾಗಿ ಎಫ್‍ಐಆರ್‌ಗಳು ದಾಖಲಾಗುತ್ತಿವೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕನ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ. ಕೇಂದ್ರದ ಸಚಿವರ ಮೇಲೆ ಎಫ್‍ಐಆರ್ ದಾಖಲಿಸಿದ್ದಾರೆ” ಎಂದು ಹರಿಹಾಯ್ದರು.

“ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯರ ಮೇಲೆ ಎಫ್‍ಐಆರ್ ದಾಖಲು ಮಾಡಿದ್ದಾರೆ. ಶಾಸಕರಾದ ಹರೀಶ್ ಪೂಂಜಾ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಭರತ್ ಶೆಟ್ಟಿ- ಹೀಗೆ ನಿರಂತರವಾಗಿ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಹತ್ತಿಕ್ಕುವ, ಅವರ ಧ್ವನಿ ಅಡಗಿಸುವ ಕೆಲಸವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ” ಎಂದು ಆರೋಪಿಸಿದರು.

“ಬಾಂಗ್ಲಾ ಮಾದರಿಯಲ್ಲಿ ರಾಜ್ಯಪಾಲರನ್ನು ಓಡಿಸುತ್ತೇವೆ ಎಂದು ಐವನ್ ಡಿಸೋಜ ಅವರು ಹೇಳಿಕೆ ಕೊಟ್ಟಿದ್ದರು. ನಮ್ಮ ಮಂಗಳೂರಿನ ಜನರು, ಕಾರ್ಯಕರ್ತರು ದಿನವೂ ಪೊಲೀಸ್ ಸ್ಟೇಶನ್‍ಗೆ ಹೋಗುತ್ತಿದ್ದಾರೆ. ದೂರನ್ನೂ ನೀಡುತ್ತಿದ್ದಾರೆ. ಆದರೆ, ಇವತ್ತಿನ ತನಕ ದೂರನ್ನು ತೆಗೆದುಕೊಂಡಿಲ್ಲ” ಎಂದರು.

ನಾಗಮಂಗಲದಲ್ಲಿ ಕೋಮು ಘಟನೆ ನಡೆಯಿತು. ನಾಗಮಂಗಲದ ಗಣಪತಿಗೆ ನೀವು ಚಪ್ಪಲಿ ಎಸೆಯಲು ಅವಕಾಶ ಕೊಟ್ಟಿದ್ದೀರಿ. ಕಲ್ಲುಗಳನ್ನೂ ಎಸೆದರು. ಮೂರ್ತಿ ಭಗ್ನ ಆಯಿತು. ಮೂರ್ತಿಯನ್ನು ಅಲ್ಲೇ ಬಿಟ್ಟು ಓಡಿದರು. 25 ಅಂಗಡಿಗಳನ್ನು ಸುಟ್ಟು ಹಾಕಿದರು. ಆ ಜನರು ಯಾರು” ಎಂದು ಪ್ರಶ್ನಿಸಿದರು.

“ಸಮಾಜಘಾತುಕರು, ದೇಶದ್ರೋಹಿಗಳು, ಅಪರಾಧಿಗಳಿಗೆ ಈ ಧೈರ್ಯ ಹೇಗೆ ಬಂದಿದೆ? ನೀವು ಮುಖ್ಯಮಂತ್ರಿ ಆದ ತಕ್ಷಣ ರಾಜ್ಯಸಭೆ ಚುನಾವಣೆ ನಡೆದಿತ್ತು. ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ವಿಧಾನಸೌಧದಲ್ಲಿ ಮೊದಲ ಬಾರಿಗೆ ನಾವು ಪಾಕಿಸ್ತಾನ್ ಜಿಂದಾಬಾದ್ ಕೇಳಿದೆವು” ಎಂದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ. ಮುನಿರಾಜು, ರಾಜ್ಯ ವಕ್ತಾರರಾದ ಕು. ಸುರಭಿ ಹೊದಿಗೆರೆ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಕೆ.ಸಿ.ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments