ದೇಶದ್ರೋಹಿ ಹೇಳಿಕೆ ನೀಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸುವೆ. ನನ್ನ ವಿರುದ್ಧ ಇಂತಹ ನೂರು ಎಫ್‌ಐಆರ್ ಹಾಕಿದರು ನಾನು ಹೆದರಲ್ಲ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ” ದೇಶದ್ರೋಹಿ ಹೇಳಿಕೆ ಕೊಡುವವರ ಮೇಲೆ ಕೇಸ್ ಹಾಕಿಲ್ಲ. ಆದರೆ ನನ್ನ ಮೇಲೆ ಕೇಸ್ ಹಾಕಿದ್ದಾರೆ. ರಾಷ್ಟ್ರದ್ರೋಹಿಗಳನ್ನ ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕು. ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದೇನೆ” ಎಂದರು.
“ನನ್ನ ಹೇಳಿಕೆ ಇಟ್ಟುಕೊಂಡು ಕಾಂಗ್ರೆಸ್ ಗೊಂದಲ ಸೃಷ್ಟಿಸುತ್ತಿದೆ. ಸಂಸದ ಡಿ ಕೆ ಸುರೇಶ್ ಅವರಿಗೆ ಮೊದಲು ನೋಟಿಸ್ ಕೊಡಲಿ. ನಾನು ಎಲ್ಲೂ ಸಂಸದ ಡಿಕೆ ಸುರೇಶ್ ಅವರಿಗೆ ಗುಂಡಿಕ್ಕಿ ಕೊಲ್ಲಿ ಅಂತ ಹೇಳಿಲ್ಲ. ನನಗೆ ನೋಟಿಸ್ ಬಂದಿದೆ, ನಾನು ಉತ್ತರ ಕೊಡುತ್ತೇನೆ. ಪ್ರಕರಣದಲ್ಲಿ ನನಗೆ ಕ್ಲೀನ್ಚಿಟ್ ಸಿಗಲಿದೆ” ಎಂದರು.
“ಆರ್ಎಸ್ಎಸ್ ಬಗ್ಗೆ ನೀಡಿದ ಹೇಳಿಕೆ ಸಿಎಂ ವಾಪಸ್ ಪಡೆಯಲಿ. ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು” ಎಂದರು.
ಪ್ರಿಯಾಂಕ್ ಎಂಬ ಕೆಟ್ಟ ಹುಳು ಹುಟ್ಟಿದ್ದು ವಿಪರ್ಯಾಸ
“ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೊಟ್ಟೆಯಲ್ಲಿ ಪ್ರಿಯಾಂಕ್ ಎಂಬ ಕೆಟ್ಟ ಹುಳು ಹುಟ್ಟಿದ್ದು ವಿಪರ್ಯಾಸ” ಎಂದು ಇದೇ ವೇಳೆ ನಾಲಿಗೆ ಹರಿಬಿಟ್ಟರು.
ಮತ್ತೊಂದು ದೂರು ದಾಖಲು
ದೇಶವನ್ನು ಇಬ್ಭಾಗ ಮಾಡುವ ಹೇಳಿಕೆ ನೀಡುವ ಡಿ.ಕೆ ಸುರೇಶ್ ಹಾಗೂ ವಿನಯ್ ಕುಲಕರ್ಣಿ ಅವರಂಥವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೆ ತರಬೇಕೆಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ವಿರುದ್ದ ಮತ್ತೊಂದು ದೂರು ದಾಖಲಾಗಿದೆ.
ಶುಕ್ರವಾರ ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ಈಶ್ವರಪ್ಪ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದೀಗ, ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ. ಆರ್‌ಆರ್ ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಶಶಾಂಕ್ ಹಾಗೂ ಸಂಜಯ್ ಅವರು ದೂರು ದಾಖಲಿಸಿದ್ದಾರೆ.
ಗುಂಡಿಕ್ಕಿ ಕೊಲ್ಲುವ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಈಶ್ವರಪ್ಪ ವಿರುದ್ಧ ಭಯೋತ್ಪಾದನೆ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ದೂರುದಾರರು ಆಗ್ರಹಿಸಿದ್ದಾರೆ.
ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಕೂಡ ನಡೆಸಿದ್ದು, ಬೆಂಗಳೂರಿನಲ್ಲಿರುವ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.
“ಗುಂಡಿಕ್ಕಿ ಕೊಲ್ಲಬೇಕೆಂದು ಹೇಳಿಕೆ ನೀಡಿದ್ದ ಈಶ್ವರಪ್ಪ ವಿರುದ್ಧ ಎಫ್‌ಐಆರ್ ದಾಖಲಲಾಗಿದೆ. ಅವರು ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ” ಎಂದು ಗೃಹ ಸಚಿವ ಜಿ ಪರಮೇಶ್ವರ ತಿಳಿಸಿದ್ದಾರೆ.