ಕಾಡುಗೋಡಿ ವಿದ್ಯುತ್ ಅವಘಡದಲ್ಲಿ ತಾಯಿ ಮತ್ತು ಮಗು ಸಾವನ್ನಪ್ಪಿದ ಪ್ರಕರಣದ ತನಿಖೆಗೆ ಸ್ವತಂತ್ರ ಸಮಿತಿ ರಚನೆ ಮಾಡಲಾಗಿದೆ ಎಂದು ಸಚಿವ ಕೆ ಜೆ ಜಾರ್ಜ್ ತಿಳಿಸಿದರು.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಇದೊಂದು ದುಖಃಕರ ಘಟನೆ. ತಕ್ಷಣ ಸ್ಥಳಕ್ಕೆ ಅಧಿಕಾರಿಗಳು ಹೋಗಿ ಪರಿಶೀಲಿಸಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ ಐದು ಜನರನ್ನು ಅಮಾನತು ಮಾಡಲಾಗಿದೆ”ಎಂದು ಹೇಳಿದರು.
“ತನಿಖಾ ಸಮಿತಿಯಲ್ಲಿ ಬೆಸ್ಕಾಂ, ಪೊಲೀಸ್ ಇಲಾಖೆ ಹಾಗೂ ಎಲೆಕ್ಟ್ರಿಕ್ ಇನ್ಸ್ ಪೆಕ್ಟರ್ ಇರುತ್ತಾರೆ. ಜೊತೆಗೆ ನಿವೃತ್ತ ಚೀಫ್ ಎಂಜಿನಿಯರ್ ನೇತೃತ್ವದಲ್ಲಿ ನಾಲ್ಕು ಜನರ ಸಮಿತಿ ಸ್ವತಂತ್ರ ಸಮಿತಿ ತನಿಖೆ ನಡೆಸಲಿದೆ” ಎಂದರು.
“ತನಿಖೆಗೆ ಪೊಲೀಸರಿಗೆ ಮುಕ್ತ ಅವಕಾಶ ಕೊಟ್ಟಿದ್ದೇವೆ. ನಾವು ಯಾವುದೇ ರೀತಿಯಲ್ಲಿ ತನಿಖೆಯಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ. ಇಂತಹ ಘಟನೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮೃತರ ಕುಟುಂಬಕ್ಕೆ ಹತ್ತು ಲಕ್ಷ ರೂ. ಪರಿಹಾರ ನೀಡಲಾಗಿದೆ” ಎಂದು ವಿವರಿಸಿದರು.
ಅಪಘಾತದ ಪ್ರಾಥಮಿಕ ವರದಿ
ನ.19 ರಂದು ಬೆಳಿಗ್ಗೆ 5.30 ಗಂಟೆಗೆ ಹೋಪ್ ಫಾರ್ಮ್ ಸಿಗ್ನಲ್ ಜಂಕ್ಷನ್‌ನಲ್ಲಿ 23 ವರ್ಷ ವಯಸ್ಸಿನ ಸೌಂದರ್ಯ ಮತ್ತು 9 ತಿಂಗಳ ಶಿಶುವಿಗೆ ವಿದ್ಯುತ್ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇಂಧನ ಸಚಿವ ನಿರ್ದೇಶನದಂತೆ ಬೆಸ್ಕಾಂನ ಹಿರಿಯ ಅಧಿಕಾರಿಗಳಾದ ವ್ಯವಸ್ಥಾಪಕ ನಿರ್ದೇಶಕರು, ನಿರ್ದೇಶಕರು (ತಾಂತ್ರಿಕ), ಮುಖ್ಯ ಅಭಿಯಂತರರು, ಅಧೀಕ್ಷಕ ಇಂಜಿನಿಯರ್ (ವಿ) ಮತ್ತು ಕಾರ್ಯನಿರ್ವಾಹಕ ಅಭಿಯಂತರರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಅಪಘಾತದ ಬಗ್ಗೆ ವಿವರವಾದ ವಿಚಾರಣೆ ನಡೆಸಿದರು.
ಇಲಿ ನುಗ್ಗಿದ್ದರಿಂದ ಶಾರ್ಟ್ ಸರ್ಕ್ಯೂಟ್
ಮೈತ್ರಿ ಲೇಔಟ್‌ನ ಔದುಂಬರ ಹೋಮ್ಸ್ ಎಂಬ ಅಪಾರ್ಟ್‌ಮೆಂಟ್‌ನಲ್ಲಿನ ಡಿಸ್ಟ್ರಿಬ್ಯೂಷನ್ ಟ್ರಾನ್ಸ್‌ಫಾರ್ಮರ್ ಬಾಕ್ಸ್‌ಗೆ ಇಲಿ ನುಗ್ಗಿದ್ದರಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, 11ಕೆವಿ ಓವರ್‌ಹೆಡ್ ಎಚ್ ಟಿ ಮಾರ್ಗವು ಮುಂಜಾನೆ ಸುಮಾರು 3.50 ಕ್ಕೆ ಹೋಪ್ ಫಾರ್ಮ್ ಜಂಕ್ಷನ್ ನಲ್ಲಿ ನೆಲಕ್ಕೆ ಬಿದ್ದಿರುವುದು ಅಧಿಕಾರಿಗಳ ಪ್ರಾಥಮಿಕ ವಿಚಾರಣೆಯ ವೇಳೆ ಕಂಡುಬಂದಿದೆ.
ಕಾಡುಗೋಡಿ ವಿದ್ಯುತ್ ಉಪಕೇಂದ್ರದ ಫೀಡರ್ ಟ್ರಿಪ್ ಆಗಿದೆ. ಬೆಳಿಗ್ಗೆ 3.55 ಗಂಟೆಗೆ ಕಾಡುಗೋಡಿ ವಿದ್ಯುತ್ ಉಪಕೇಂದ್ರದ ಫೀಡರ್ ಅನ್ನು ಪುನಃ ಟೆಸ್ಟ್ ಚಾರ್ಜ್ ಮಾಡಲಾಯಿತು, ಆದಾಗ್ಯೂ, ತುಂಡಾದ ತಂತಿಯು ಇನ್ನೂ ನೆಲದ ಮೇಲೆ ಬಿದ್ದಿತ್ತು.ಬೆಳಿಗ್ಗೆ 5.30 ರ ವೇಳೆಗೆ ತಾಯಿ ಸೌಂದರ್ಯ ತುಂಡಾಗಿ ಬಿದ್ದಿದ್ದ ತಂತಿಯನ್ನು ತುಳಿದಾಗ ವಿದ್ಯುತ್ ಸ್ಪರ್ಶವಾಗಿ ತಾಯಿ ಮತ್ತು ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸಿಬ್ಬಂದಿ ಅಮಾನತು
ಸಿಬ್ಬಂದಿಗಳಾದ ಟಿ ಸುಬ್ರಮಣಿ, ಎಸ್ ಚೇತನ್, ರಾಜಣ್ಣ, ಬಸವರಾಜು, ಮಂಜುನಾಥ್ ರೇವಣ್ಣ ಅವರನ್ನು ಪ್ರಕರಣಕ್ಕೆ ಸಂಬಂಧಿಸಿ ಅಮಾನತುಗೊಳಿಸಲಾಗಿದೆ. ಲೋಕೇಶ್ ಬಾಬು, ವಿ ಶ್ರೀರಾಮು ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಈಗಾಗಲೇ ಎಲ್ಲಾ ಕ್ಷೇತ್ರ ಎಂಜಿನಿಯರ್‌ಗಳಿಗೆ ಕಾಲಕಾಲಕ್ಕೆ ನಿಗದಿತ ನಿರ್ವಹಣೆಯನ್ನು ತಪ್ಪದೆ ಕೈಗೊಳ್ಳುವಂತೆ ಸೂಚಿಸಿದ್ದು, 15 ದಿನಕ್ಕೊಮ್ಮೆ ನಿಯಮಿತವಾಗಿ ಸದರಿ ನಿರ್ವಹಣಾಕಾರ್ಯವನ್ನು ಪರಿಶೀಲಿಸಲು ಸಚಿವರು ಸೂಚಿಸಿದ್ದಾರೆ.