Homeಕರ್ನಾಟಕಕುಮಾರಸ್ವಾಮಿಗೆ ಶಾಕ್!‌; ಜೆಡಿಎಸ್‌ ತೊರೆದು ಕಾಂಗ್ರೆಸ್ ಸೇರಿದ ಮಂಡ್ಯ ಭಾಗದ ಮೂವರು ಮಾಜಿ ಶಾಸಕರು

ಕುಮಾರಸ್ವಾಮಿಗೆ ಶಾಕ್!‌; ಜೆಡಿಎಸ್‌ ತೊರೆದು ಕಾಂಗ್ರೆಸ್ ಸೇರಿದ ಮಂಡ್ಯ ಭಾಗದ ಮೂವರು ಮಾಜಿ ಶಾಸಕರು

ಮಂಡ್ಯ ಜಿಲ್ಲೆಯ ಜೆಡಿಎಸ್ ನಾಯಕ ಮಾಜಿ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಅಪ್ಪಾಜಿಗೌಡ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೆಂಕಟೇಶ್, ಸದಸ್ಯ ಯೋಗೇಶ್, ಮಂಜುನಾಥ್ ಗೌಡ ಹಾಗೂ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಆಶಾ ಸುರೇಶ್ ಅವರು ಸೇರಿದಂತೆ ನೂರಾರು ಕಾರ್ಯಕರ್ತರು ಜೆಡಿಎಸ್ ಮತ್ತು ಬಿಜೆಪಿ ತೊರೆದು ಶುಕ್ರವಾರ ಕಾಂಗ್ರೆಸ್ ಸೇರ್ಪಡೆಗೊಂಡರು.

ಬಿಜೆಪಿ ಜತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಆಕ್ರೋಶಗೊಂಡು ವಿಧಾನ ಪರಿಷತ್ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡಿ ಜೆಡಿಎಸ್ ತೊರೆದ ಮರಿತಿಬ್ಬೇಗೌಡ ಅವರು ತಮ್ಮ ಅಪಾರ ಅಭಿಮಾನಿಗಳ ಜತೆ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಸಿಎಂ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇವರೆನ್ನಲ್ಲ ಕಾಂಗ್ರೆಸ್‌ಗೆ ಸ್ವಾಗತಿಸಿದರು.

ಕಾಂಗ್ರೆಸ್ ಸೇರಿದ ಬಳಿಕ ಮಾತನಾಡಿದ ಮರಿತಿಬ್ಬೇಗೌಡ, “ಜಾತ್ಯಾತೀತ ತತ್ವಗಳನ್ನು ಜೆಡಿಎಸ್ ಗಾಳಿಗೆ ತೂರಿದ ಕಾರಣ ನನ್ನ ಕ್ಷೇತ್ರದ ಶಿಕ್ಷಕರ ಅಭಿಪ್ರಾಯ ಕೇಳಿ ಕಾಂಗ್ರೆಸ್ ಪಕ್ಷಕ್ಕೆ ಸೇರುವ ತೀರ್ಮಾನ ಮಾಡಿದೆ” ಎಂದರು.

“ಜೆಡಿಎಸ್ ಅಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ, ಕಾರ್ಯಕರ್ತರ, ಮುಖಂಡರ ಅಭಿಪ್ರಾಯಗಳಿಗೆ ಬೆಲೆ ಇಲ್ಲ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ಕಾವೇರಿ ವಿಚಾರವನ್ನು ಭಾವನಾತ್ಮಕವಾಗಿ ಬಳಸಿಕೊಂಡಿದ್ದಾರೆ. ರೈತರ ಹೆಸರೇಳಿಕೊಂಡು ಜನತಾದಳ ಕೇವಲ ರಾಜಕಾರಣ ಮಾಡಿದೆ. ಮಂಡ್ಯ ಜಿಲ್ಲೆಗೆ ಜೆಡಿಎಸ್ ಕೊಡುಗೆ ಶೂನ್ಯ. ಚೆಲುವರಾಯ ಸ್ವಾಮಿ ಅವರು ಆರೋಗ್ಯ ಸಚಿವರಾಗಿದ್ದಾಗ ಮೆಡಿಕಲ್ ಕಾಲೇಜು ತಂದರು” ಎಂದು ಹೇಳಿದರು.

“ಜನತಾದಳದವರು ನನಗೆ ಟಿಕೆಟ್ ಮಾತ್ರ ನೀಡಿದರು ಆದರೆ ಬೆಂಬಲ ಮಾತ್ರ ನೀಡಲಿಲ್ಲ. ಕೇವಲ ಕುಟುಂಬದ ಪರವಾಗಿ ಮಾತ್ರ ಪಕ್ಷದ ಸಭೆಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ನಾನು ಅನೇಕ ಬಾರಿ ಇದರ ವಿರುದ್ಧ ದನಿ ಎತ್ತಿದ್ದೇನೆ. ರೈತ ವಿರೋಧಿ ಕಾಯ್ದೆಗಳನ್ನು ಜೆಡಿಎಸ್ ಬೆಂಬಲ ವ್ಯಕ್ತಪಡಿಸಿದಾಗ ನಾನು ವಿರೋಧ ವ್ಯಕ್ತಪಡಿಸಿದ್ದೆ” ಎಂದರು.

“ಕಳೆದ 4 ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದೆ. ಮೊದಲನೇ ಬಾರಿಗೆ ಡಿ.ಕೆ. ಶಿವಕುಮಾರ್ ಅವರ ಆಶೀರ್ವಾದದಿಂದ ಟಿಕೆಟ್ ದೊರೆಯಿತು. 1985 ರಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜನತಾದಳಕ್ಕೆ ಸೇರಿದ್ದೆ. ಇಂದು ಜಾತ್ಯತೀತ ತತ್ವಗಳಿಗೆ ಧಕ್ಕೆ ಆಗಿರುವ ಕಾರಣ ಮತ್ತು ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿಗೆ ಸಂಪೂರ್ಣವಾಗಿ ಬೆಂಬಲ ನೀಡಲಿದ್ದೇವೆ” ಎಂದು ತಿಳಿಸಿದರು.

“ಮರಿತಿಬ್ಬೇಗೌಡಗೆ ಬಹಳ ದಿನಗಳಿಂದ ಗಾಳ ಹಾಕ್ತಾ ಇದ್ದೆ, ಆದರೆ ಸಿಕ್ಕಿರಲಿಲ್ಲ. ಇವಾಗ ಅವರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಜೆಡಿ ಎಸ್ ಗೆ ದೊಡ್ಡ ಅಡಿಪಾಯ ಆಗಿದ್ದವರು ಮರಿತಿಬ್ಬೇಗೌಡರು” ಎಂದು ಡಿಸಿಎಂ ಡಿ ಕೆ ಶಿವಕುಮಾರ್‌ ಹೇಳಿದರು.

“ಜನತಾ ದಳ ಗೊಂದಲದ ಗೂಡಾಗಿದೆ. ಅದಕ್ಕೆ ಯಾವುದೇ ಶರತ್ತು ಇಲ್ಲದೆ ಕಾಂಗ್ರೆಸ್ ಗೆ ಸೇರ್ಪಡೆ ಆಗಿದ್ದಾರೆ. ಎಂ ಶ್ರೀನಿವಾಸ್ ಆರೋಗ್ಯ ಸರಿ‌ ಇಲ್ಲದ ಕಾರಣದಿಂದ ಪತ್ರ ಬರೆದು ಪಕ್ಷ ಸೇರ್ಪಡೆಗೆ ಸಮ್ಮತಿ ಸೂಚಿಸಿದ್ದಾರೆ” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಚೆಲುವರಾಯಸ್ವಾಮಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣ ಗೌಡ (ಸ್ಟಾರ್ ಚಂದ್ರು), ಶಾಸಕರಾದ ಉದಯ್, ರವಿ ಗಣಿಗ, ರಮೇಶ್ ಬಾಬು ಬಂಡ್ಡಿಸಿದ್ದೇಗೌಡ,ಎಂಎಲ್ಸಿ ದಿನೇಶ್ ಗೂಳಿಗೌಡ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments