Homeಕರ್ನಾಟಕಶಿವಕುಮಾರ ಸ್ವಾಮೀಜಿಗೆ 'ಭಾರತ ರತ್ನ' ಪುರಸ್ಕಾರ ನೀಡಿ ಗೌರವಿಸಬೇಕು: ಡಿ ಕೆ ಶಿವಕುಮಾರ್‌ ಕೇಂದ್ರಕ್ಕೆ ಮನವಿ

ಶಿವಕುಮಾರ ಸ್ವಾಮೀಜಿಗೆ ‘ಭಾರತ ರತ್ನ’ ಪುರಸ್ಕಾರ ನೀಡಿ ಗೌರವಿಸಬೇಕು: ಡಿ ಕೆ ಶಿವಕುಮಾರ್‌ ಕೇಂದ್ರಕ್ಕೆ ಮನವಿ

ಜಾತಿ ಧರ್ಮಗಳ ತಾರತಮ್ಯವಿಲ್ಲದೆ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಸಮಾಜಕ್ಕೆ ಸಾವಿರಾರು ಮುತ್ತುರತ್ನಗಳನ್ನು ನೀಡಿರುವ ಶಿವಕುಮಾರ ಸ್ವಾಮೀಜಿಗಳಿಗೆ “ಭಾರತ ರತ್ನ” ಪುರಸ್ಕಾರ ನೀಡಿ ಗೌರವಿಸಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಂಗಳವಾರ ನಡೆದ ಶಿವೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ 118ನೇ ಜಯಂತಿ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ಶ್ರೀಗಳಿಗೆ ಭಾರತ ರತ್ನ ನೀಡುವ ವಿಚಾರ ತರಬೇಕು ಎಂದು ರಾಜ್ಯದ ಜನರ ಹಾಗೂ ರಾಜ್ಯ ಸರ್ಕಾರದ ಪರವಾಗಿ ಮನವಿ ಮಾಡುತ್ತೇನೆ. ಶಿವಕುಮಾರ ಸ್ವಾಮೀಜಿಗಳು ಈ ಮಠದ ದಾಸೋಹ ಪರಿಕಲ್ಪನೆ ಮೂಲಕ ಅನೇಕ ಸಾಧಕರನ್ನು ಸಮಾಜಕ್ಕೆ ನೀಡಿದ ಪರಮ ಪೂಜ್ಯರು ಹಾಗೂ ಸಿದ್ದಗಂಗಾ ಮಠ ಪವಿತ್ರ ಸ್ಥಳ” ಎಂದು ಹೇಳಿದರು.

“ಗುರುವಿನಿಂದ ನಮ್ಮ ಬಂಧುಗಳು, ಗುರುವಿನಿಂದ ನಮ್ಮ ದೈವಗಳು, ಗುರುವಿನಿಂದ ಪುಣ್ಯ ಜಗಕ್ಕೆಲ್ಲ, ಗುರುವಿನಿಂದಲೇ ಮುಕ್ತಿ ಎಂದು ಸರ್ವಜ್ಞ ಹೇಳಿದ್ದಾರೆ. ನಾನು ಶ್ರೀಗಳ ಕೊನೆ ದಿನಗಳಲ್ಲಿ ಅವರನ್ನು ಚೆನ್ನೈ ಆಸ್ಪತ್ರೆಯಲ್ಲಿ ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಶಿವಕುಮಾರಸ್ವಾಮಿಗಳು ನಮ್ಮ ಜಿಲ್ಲೆಯವರು. ನಮ್ಮ ತಂದೆ ತಾಯಿಗಳು ನನಗೂ ಶಿವಕುಮಾರ ಎಂದು ಹೆಸರಿಟ್ಟಿರುವುದು ನನ್ನ ಭಾಗ್ಯ. ಶ್ರೀಗಳನ್ನು ದಿನವೂ ಸ್ಮರಿಸುವ ಪುಣ್ಯ ನನ್ನದು ಎಂದು ನಾನು ಭಾವಿಸುತ್ತೇನೆ” ಎಂದರು.

“ಶ್ರೀಗಳು ಹಾಕಿಕೊಟ್ಟ ಹಾದಿ, ಅವರ ಆಚಾರ ವಿಚಾರ, ಅವರ ನುಡಿಮುತ್ತುಗಳು ನಮ್ಮ ಬದುಕಿಗೆ ಶಕ್ತಿ ತುಂಬುತ್ತವೆ. ಎಸ್.ಎಂ. ಕೃಷ್ಣ ಅವರ ಸರ್ಕಾರದಲ್ಲಿ ನಾನು ಸಚಿವನಾಗಿದ್ದಾಗ ಈ ಮಠಕ್ಕೆ ಆಗಮಿಸಿದ್ದೆ. ಇಲ್ಲಿನ ಅನ್ನದಾಸೋಹ ಕಾರ್ಯಕ್ರಮ ನೋಡಿ ಎಸ್.ಎಂ. ಕೃಷ್ಣ ಅವರು ವಾಪಸ್ ತೆರಳುವಾಗ ಮಹತ್ವದ ನಿರ್ಧಾರ ಮಾಡಿದರು. ಸಿದ್ದಗಂಗಾ ಮಠದ ಅನ್ನದಾಸೋಹ ಕಾರ್ಯಕ್ರಮ ನಮ್ಮ ಸರ್ಕಾರದ ಕಾರ್ಯಕ್ರಮವಾಗಿ ಪರಿವರ್ತನೆ ಆಗಬೇಕು ಎಂದು ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳಿಗೆ ʼಮಧ್ಯಾಹ್ನದ ಬಿಸಿಯೂಟ ಯೋಜನೆʼ ಆರಂಭಿಸಿದರು” ಎಂದು ಸ್ಮರಿಸಿದರು.

“ಅನ್ನ ಕೊಟ್ಟು, ಅಕ್ಷರ ಕಲಿಸಿದ ಮಹಾಚೇತನರಿಗೆ ನಾವು ಇಂದು ನಮಿಸಲು ಬಂದಿದ್ದೇವೆ. ನಾನು ಶಾಲೆಯಲ್ಲಿದ್ದಾಗ ನಮ್ಮ ಶಿಕ್ಷಕರು ನನಗೆ ಒಂದು ಕತೆ ಹೇಳಿದ್ದರು. ಅಲೆಕ್ಸಾಂಡರ್ ಭಾರತವನ್ನು ಗೆಲ್ಲಲು ಆಕ್ರಮಣ ಮಾಡುವ ಮುನ್ನ ಗುರುಗಳನ್ನು ಭೇಟಿ ಮಾಡಲು ಹೋದಾಗ, ಅವರ ಗುರು ಒಂದು ಮಾತು ಹೇಳಿದರು. ಭಾರತದಿಂದ ನೀನು ಬರುವಾಗ ರಾಮಾಯಣ, ಮಹಾಭಾರತ ಗ್ರಂಥ, ಕೃಷ್ಣನ ಕೊಳಲು, ಗಂಗಾ ಜಲ ಹಾಗೂ ತತ್ವಜ್ಞಾನಿಯನ್ನು ನಿನ್ನ ಜತೆ ತೆಗೆದುಕೊಂಡು ಬಾ, ಈ ಐದು ವಸ್ತುಗಳನ್ನು ನೀನು ತಂದರೆ ಇಡೀ ಭಾರತವನ್ನು ಗೆದ್ದುಕೊಂಡು ಬಂದಂತೆ ಎಂದು ಹೇಳಿದರು. ಅದೇ ರೀತಿ ನಮ್ಮ ಸಂಸ್ಕೃತಿ ಈ ದೇಶದ ಆಸ್ತಿ. ಇಡೀ ವಿಶ್ವದ ಜನ ನಮ್ಮ ಆಚಾರ ವಿಚಾರಗಳನ್ನು ನಂಬಿ ಶರಣಾಗಿದ್ದಾರೆ” ಎಂದರು.

“ಧರ್ಮ ಎಂದರೆ ಮನುಷ್ಯತ್ವ. ಮನುಷ್ಯತ್ವ ರೂಪಿಸುವ ಪವಿತ್ರ ಕೆಲಸವನ್ನು ಶ್ರೀಗಳು ಮಾಡಿದ್ದಾರೆ. ಈ ಮಠದಲ್ಲಿ ಬಡವ ಶ್ರೀಮಂತ, ಜಾತಿ ಧರ್ಮ, ಮೇಲು ಕೀಳು ತಾರತಮ್ಯವಿಲ್ಲ. ಹೀಗಾಗಿ ಈ ಮಠಕ್ಕೆ ದೊಡ್ಡ ಹೆಸರಿದೆ. ಇದನ್ನು ನಾವು ನೀವು ಉಳಿಸಿಕೊಂಡು ಹೋಗಬೇಕು” ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments