Homeಕರ್ನಾಟಕಶಿರೂರು ಗುಡ್ಡ ಕುಸಿತ | ನೊಂದ ಕುಟುಂಬಗಳಿಗೆ ಸರ್ಕಾರ ದೊಡ್ಡ ಪ್ರಮಾಣದ ಪರಿಹಾರ ಕೊಡಲಿ: ಕುಮಾರಸ್ವಾಮಿ

ಶಿರೂರು ಗುಡ್ಡ ಕುಸಿತ | ನೊಂದ ಕುಟುಂಬಗಳಿಗೆ ಸರ್ಕಾರ ದೊಡ್ಡ ಪ್ರಮಾಣದ ಪರಿಹಾರ ಕೊಡಲಿ: ಕುಮಾರಸ್ವಾಮಿ

ರಾಜ್ಯ ಸರಕಾರವು ಗುಡ್ಡ ಕುಸಿತದಲ್ಲಿ ಜೀವ ಕಳೆದುಕೊಂಡಿರುವ ಕುಟುಂಬಗಳ ಜತೆ ನಿಲ್ಲಬೇಕು ಎಂದು ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಒತ್ತಾಯ ಮಾಡಿದರು.

ಅಂಕೋಲಾ ಬಳಿಯ ರಾಷ್ಟ್ತ್ರೀಯ ಹೆದ್ದಾರಿಯ ಶಿರೂರು ಗ್ರಾಮದ ಬಳಿ ಗುಡ್ಡ ಕುಸಿದು ಏಳು ಜನರು ಧಾರುಣ ಸಾವನ್ನಪ್ಪಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.

“ಪರಿಹಾರ ಕಾರ್ಯದಲ್ಲಿ ರಾಜಕರಣ ಮಾಡಬಾರದು. ಕೇಂದ್ರ ಸರಕಾರವು ಪರಿಹಾರ ಕಾರ್ಯದಲ್ಲಿ ನಿರತವಾಗಿದೆ. ರಾಜ್ಯ ಸರ್ಕಾರವು ತನ್ನ ಪಾಲಿನ ಕೆಲಸವನ್ನು ಮಾಡಬೇಕು. ರಾಜಕೀಯದಿಂದ ಉಪಯೋಗ ಇಲ್ಲ. ನೊಂದ ಕುಟುಂಬಗಳಿಗೆ ದೊಡ್ಡ ಪ್ರಮಾಣದಲ್ಲಿ ಪರಿಹಾರ ಕೊಡಬೇಕು ಹಾಗೂ ಮನೆಗಳನ್ನು ಕಳೆದುಕೊಂಡವರಿಗೆ ಮರು ವಸತಿ ಕಲ್ಪಿಸಬೇಕು” ಎಂದರು.

“ಒಂದೇ ಕುಟುಂಬದಲ್ಲಿ ಐವರು, ಇನ್ನೂ ಇಬ್ಬರು ಈ ದುರಂತದಲ್ಲಿ ಜೀವ ಕಳೆದುಕೊಂಡಿರುವುದು ಅತ್ಯಂತ ನೋವಿನ ಸಂಗತಿ. ಎಲ್ಲರೂ ಶ್ರಮ ಜೀವಿಗಳು. ಇಬ್ಬರು ಮಕ್ಕಳು ಬಲಿಯಾಗಿರುವುದು ದುಃಖ ತಂದಿದೆ” ಎಂದು ತಿಳಿಸಿದರು.

“ಯಾಕೆ ಈ ದುರಂತ ಸಂಭವಿಸಿತು? ಅದಕ್ಕೆ ಕಾರಣಗಳು ಏನು? ಕಾಮಗಾರಿಯಲ್ಲಿ ಸಮಸ್ಯೆ ಇದೆಯಾ? ಎಂಬ ಪರಿಶೀಲನೆ ನಡೆಸಲಾಗುವುದು ಹಾಗೂ ಸಂಬಂಧಪಟ್ಟ ಸಚಿವರ ಗಮನಕ್ಕೂ ತರಲಾಗುವುದು. ಮೊದಲು ಪರಿಹಾರ ಕಾರ್ಯ ಮುಗಿಯಲಿ” ಎಂದು ಹೇಳಿದರು.

“ಈ ಬಗ್ಗೆ ನಾನು ಅಧಿಕಾರಿಗಳಿಗೆ ದೋಷ ಕೊಡಲಾರೆ. ಅವರು ಮಳೆಯ ನಡುವೆಯೂ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಈ ದುರಂತ ಊಹೆಗೂ ನಿಲುಕದ್ದು. ಜನತೆಗೆ ಮೂಲಸೌಕರ್ಯ ಕಲ್ಪಿಸುವ ಸಂದರ್ಭದಲ್ಲಿ ಅವೈಜ್ಞಾನಿಕ ಕಾಮಗಾರಿಗಳಿಂದ ಇಂಥ ಘಟನೆಗಳು ಮರುಕಳಿಸುತ್ತಿವೆ” ಎಂದು ಹೇಳಿದರು.

“ರಾಜ್ಯ ಸರಕಾರದ ಯಾವೊಬ್ಬ ಸಚಿವರು, ಮುಖ್ಯಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡದಿರುವ ಬಗ್ಗೆ ಸ್ಥಳೀಯರಿಗೆ ಬೇಸರವಿದೆ. ಈ ಬಗ್ಗೆ ನಾನು ಚರ್ಚೆ ನಡೆಸಲಾರೆ. ನಾನು ಬಂದಿದ್ದೇನೆ. ಕೇಂದ್ರದಿಂದ ಏನು ಸಹಾಯ ಮಾಡಿಸಬಹುದೋ ಅದನ್ನು ಮಾಡಿಸುತ್ತೇನೆ” ಎಂದು ತಿಳಿಸಿದರು.

“ಭಾರೀ ಮಳೆಯಿಂದ ಹಾಸನ, ಮಂಗಳೂರು, ಚಿಕ್ಕಮಗಳೂರು, ಕೊಡಗು ಸೇರಿ ಕರಾವಳಿ ಮಲೆನಾಡು ಭಾಗದಲ್ಲಿ ಕೃಷಿ ಬೆಳೆ ನಷ್ಟವಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಬೇಕು” ಎಂದು ಆಗ್ರಹಿಸಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಜೆಡಿಎಸ್ ನಾಯಕ ಸೂರಜ್ ನಾಯಕ್ ಸೋನಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಜೆಡಿಎಸ್ ಮುಖಂಡರು ಸಚಿವರ ಜತೆಯಲ್ಲಿ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments