ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರ ತವರು ಜಿಲ್ಲೆಯಲ್ಲೇ ಶಾಲಾ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಬೆಂಗಳೂರಿನ ಪೀಣ್ಯ ಬಳಿಯಿರುವ ಅಂದ್ರಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಅಮಾನವೀಯ ಘಟನೆ ನಡೆದ ಪ್ರಕರಣ ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬೆನ್ನಲ್ಲೇ ಇದೇ ರೀತಿಯ ಮತ್ತೊಂದು ಘಟನೆ ಈಗ ಮರುಕಳಿಸಿದೆ.
ಭದ್ರಾವತಿ ತಾಲೂಕಿನ ಕೋಮಾರನಹಳ್ಳಿ ಗ್ರಾಂ ಪಂಚಾಯಿತಿಯ ಗುಡ್ಡದ ನೇರಲೆಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಶಂಕರಪ್ಪ ಹಾಗೂ ಇತರೆ ಶಿಕ್ಷಕರು ವಿದ್ಯಾರ್ಥಿಗಳ ಕೈಯಿಂದ ಶೌಚಾಲಯ ಸ್ವಚ್ಛಗೊಳಿಸಿದ್ದಾರೆ ಎನ್ನಲಾಗಿದೆ.
ಮಕ್ಕಳು ಶೌಚಾಲಯ ಸ್ವಚ್ಛಗೊಳಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ದಲಿತ ಸಂಘರ್ಷ ಸಮಿತಿ ಶಿವಮೊಗ್ಗ ಎಸಿ ಸತ್ಯನಾರಾಯಣ ಅವರಿಗೆ ದೂರು ಸಲ್ಲಿಸಿದೆ. ಮಕ್ಕಳನ್ನು ದುರ್ಬಳಕೆ ಮಾಡಿದ ಶಿಕ್ಷಕರ ವಿರುದ್ಧ ಕ್ರಮಕ್ಕೆ ಸಂಘಟನೆ ಮತ್ತು ಪೋಷಕರು ಆಗ್ರಹಿಸಿದ್ದಾರೆ.
ಈ ಹಿಂದೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಯಲುವಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳನ್ನು ಮಲದ ಗುಂಡಿಯೊಳಗೆ ಇಳಿಸಿ ಕ್ಲೀನ್ ಮಾಡಿಸಲಾಗಿದ್ದು ಅಮಾನವೀಯ ಘಟನೆ ನಡೆದಿತ್ತು. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ರಾಜ್ಯದೆಲ್ಲೆಡೆ ರಾಜಕೀಯವಾಗಿ ಭಾರೀ ಚರ್ಚೆಗೆ ಕಾರಣವಾಗಿದ್ದನ್ನು ಇಲ್ಲಿ ನೆನೆಯಬಹುದು.