ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಒಳಗೆ ಬಂಡಾಯ ನಾಮಪತ್ರ ಸಲ್ಲಿಕೆ ಕೊನೆಯ ದಿನವೇ ಭುಗಿಲೆದ್ದಿದೆ. ಕಾಂಗ್ರೆಸ್‌ನ ಮಾಜಿ ಶಾಸಕ ಸೈಯದ್ ಅಜ್ಜಂಪೀರ್ ಖಾದ್ರಿ ಅವರು ಬಂಡಾಯ ಎದ್ದು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ, ಮತ್ತೊಬ್ಬ ಮಾಜಿ ಶಾಸಕ ಪಕ್ಷೇತರರಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ.
ಮಾಜಿ ಶಾಸಕ ಮಂಜುನಾಥ್ ಕುನ್ನೂರು ಸಹ ಕಾಂಗ್ರೆಸ್ ಟಿಕೆಟ್‌ಗಾಗಿ ಮಂಜುನಾಥ ಕುನ್ನೂರು ಹಾಗೂ ಅವರ ಮಗ ರಾಜು ಅವರು ಪೈಪೋಟಿ ನಡೆಸಿದ್ದರು. ಆದರೆ, ಯಾಸೀರ್ ಅಹ್ಮದ್ ಖಾನ್ ಪಠಾಣ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಇದಿರಂದ ಅಸಮಾಧಾನಗೊಂಡಿರುವ ಮಂಜುನಾಥ್ ಕುನ್ನೂರು ಬಂಡಾಯ ಎದ್ದು ಅವರೂ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಕೊನೆಯ 13 ನಿಮಿಷ ಬಾಕಿ ಇರುವಾಗ ಖಾದ್ರಿ ಓಡೋಡಿ ಬಂದು ಚುನಾವಣಾಧಿಕಾರಿ ಮಹ್ಮದ್ ಖಿಝರ್ ಅವರಿಗೆ ನಾಮಪತ್ರ ಸಲ್ಲಿಸಿ ಎಲ್ಲರ ಗಮನಸೆಳೆದದರು.
ಬೆಂಬಲಿಗರ ಜೊತೆ ಚುನಾವಣಾಧಿಕಾರಿ ಕಚೇರಿಗೆ ತೆರಳಿದ್ದ ಮಂಜುನಾಥ ಕುನ್ನೂರು ನಾಮಪತ್ರ ಸಲ್ಲಿಸಿದರು. ಈಗಾಗಲೇ ಇದೇ ಕ್ಷೇತ್ರದಿಂದ ಕುನ್ನೂರು ಅವರು ಎರಡು ಬಾರಿ ಶಾಸಕರಾಗಿದ್ದರು. ಕ್ಷೇತ್ರದಲ್ಲಿ ಪಂಚಮಸಾಲಿ ಸಮಾಜದ ಮುಖಂಡರಾಗಿದ್ದಾರೆ.
ಕಾಂಗ್ರೆಸ್ ಒಳಗಿನ ಬಂಡಾಯ ಪಕ್ಷಕ್ಕೆ ಆಘಾತ ನೀಡುವ ಸಂಗತಿ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ.
ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಜ್ಜಂಪೀರ್ ಖಾದ್ರಿ, “ನಾನು ಶಿಗ್ಗಾಂವ ಕ್ಷೇತ್ರದ ನಿವಾಸಿ. ಬಿಜೆಪಿ ಭರತ್ ಬೊಮ್ಮಾಯಿ ಹುಬ್ಬಳ್ಳಿಯವ, ಕಾಂಗ್ರೆಸ್ ಅಭ್ಯರ್ಥಿ ಯಾಸೀನ್ ಖಾನ್ ಹಾನಗಲ್. ಯಾವುದೇ ಕಾರಣಕ್ಕೂ ನಾನು ನಾಮಪತ್ರ ಹಿಂದೆ ಪಡೆಯಲ್ಲ” ಎಂದು ಕಡ್ಡಿ ಮುರಿದಂತೆ ಹೇಳಿದರು.
ಸಂಧಾನಕ್ಕೆ ಬಂದ ಜಮೀರ್ ಕಾರಿನ ಗಾಜು ಪುಡಿಪುಡಿ
ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಅಜ್ಜಂಪೀರ್ ಖಾದ್ರಿ ಮನವೊಲಿಸಲು ಸಚಿವ ಜಮೀರ್ ಅಹಮ್ಮದ್ ಖಾನ್ ಕಸರತ್ತು ನಡೆಸಿದರು. ಆದರೆ ಸಂಧಾನ ವಿಫಲವಾಗಿದೆ. ಸಂಧಾನಕ್ಕೆ ಬಂದಿದ್ದ ಸಚಿವ ಜಮೀರ್ ಅಹಮ್ಮದ್ ಖಾನ್ ಕಾರಿನ ಮೇಲೆ ಖಾದ್ರಿ ಅಭಿಮಾನಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಕಾರಿನ ಗಾಜು ಪುಡಿಪುಡಿಯಾಗಿದೆ.