ಅಶ್ಲೀಲ ವಿಡಿಯೋ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಲ್ಲಿದ್ದುಕೊಂಡೆ ಕಣ್ಣಾಮುಚ್ಚಾಲೆ ಆಟ ಮಂದುವರಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಜರ್ಮನ್ನ ಮ್ಯೂನಿಚ್ನಿಂದ ಬೆಂಗಳೂರಿಗೆ ಬುಕ್ ಆಗಿದ್ದ ವಿಮಾನ ಟಿಕೆಟ್ ಅನ್ನು ರದ್ದುಪಡಿಸಿಕೊಂಡಿದ್ದಾರೆ. ಹೀಗಾಗಿ ಬುಧವಾರ ಸಹ ಬೆಂಗಳೂರಿಗೆ ಬರುವುದು ಅನುಮಾನವಾಗಿದೆ.
ತಂದೆ ಮತ್ತು ಶಾಸಕ ಎಚ್ ಡಿ ರೇವಣ್ಣ ಅವರಿಗೆ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಬುಧವಾರ ಪ್ರಜ್ವಲ್ ರಾಜ್ಯಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿತ್ತು. ಇಂದು ಬೆಂಗಳೂರಿಗೆ ಬರಬೇಕಿದ್ದ ಪ್ರಜ್ವಲ್ ಈಗಾಗಲೇ ಟಿಕೆಟ್ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ.
ಲುಪ್ತಾನ್ಸಾ ವಿಮಾನದಲ್ಲಿ ಬುಕ್ ಆಗಿದ್ದ ಟಿಕೆಟ್ ಅನ್ನು ಪ್ರಜ್ವಲ್ ರದ್ದು ಮಾಡಿಕೊಂಡಿರುವುದು ತಿಳಿದುಬಂದಿದೆ. ಆದರೆ, ಟಿಕೆಟ್ ರದ್ದು ಮಾಡಿದರೂ ಅದರ ಹಣ ವಾಪಸ್ ಪಡೆಯದೆ ಪ್ರಜ್ವಲ್ ಗೊಂದಲ ಮೂಡಿಸಿದ್ದಾರೆ. ಇದರ ಅರ್ಥ ಯಾವುದೇ ಕ್ಷಣದಲ್ಲಾದರೂ ಮತ್ತೆ ಟಿಕೆಟ್ ಖರೀದಿಸಲು ಪ್ರಜ್ವಲ್ ಈ ತಂತ್ರ ಹೂಡಿರಬಹುದು ಎನ್ನಲಾಗಿದೆ.
ಎಸ್ಐಟಿ ಕಣ್ಣು
ಪ್ರಜ್ವಲ್ ರೇವಣ್ಣ ಚಲನ ವಲನಗಳ ಮೇಲೆ ಎಸ್ಐಟಿ ತಂಡ ನಿಗಾ ಇಟ್ಟಿದೆ. ಬೇರೆ ವಿಮಾನದಲ್ಲಿ ಟಿಕೆಟ್ ಬುಕ್ ಆಗುತ್ತದೆಯೇ, ಆಗಿದೆಯೇ ಎಂದು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಎಸ್ಐಟಿ ತಂಡ ಬೀಡುಬಿಟ್ಟಿದೆ.