ಲೋಕಸಭಾ ಚುನಾವಣೆಗೂ ರಾಜ್ಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದ್ದ ವಿಧಾನ ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೆ ಪುಟ್ಟಣ್ಣ ವಿಜಯಿಯಾಗಿದ್ದಾರೆ. ಆ ಮೂಲಕ ಬಿಜೆಪಿ-ಜೆಡಿಎಸ್ ಮೈತ್ರಿಯ ಅಭ್ಯರ್ಥಿ ಎ ಪಿ ರಂಗನಾಥ್ ಸೋಲನುಭವಿಸಿದ್ದಾರೆ.
ಲೋಕಸಭೆ ಚುನಾವಣೆ ಹೊತ್ತಲ್ಲಿ ಮೊದಲ ಬಾರಿಗೆ ಬಿಜೆಪಿ-ಜೆಡಿಎಸ್ ಮೈತ್ರಿಗೆ ಹಿನ್ನಡೆಯಾಗಿದ್ದು, ಮೈತ್ರಿ ಅಭ್ಯರ್ಥಿಗೆ ಸೋಲಾಗಿದೆ.
1507 ಮತಗಳ ಅಂತರದಿಂದ ಪುಟ್ಟಣ್ಣ ಗೆಲುವು ದಾಖಲಿಸಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 19,152 ಮತದಾರರಿದ್ದು, ಈ ಉಪ ಚುನಾವಣೆಯಲ್ಲಿ 16,544 ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದರು. ಈ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ 8,260 ಮತಗಳನ್ನು ಗಳಿಸಿದರೆ, ಬಿಜೆಪಿ-ಜೆಡಿಎಸ್ ಮೈತ್ರಿಯ ಅಭ್ಯರ್ಥಿ ಎ.ಪಿ. ರಂಗನಾಥ್ 6,753 ಮತಗಳಷ್ಟೇ ಪಡೆಯುವಲ್ಲಿ ಸಫಲರಾಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಬೆಂಬಲಿಗರಿಂದ ಸಂಭ್ರಮಾಚರಣೆ ಮಾಡಿದ್ದಾರೆ. ಸರ್ಕಾರಿ ಆರ್ಟ್ಸ್ ಕಾಲೇಜ್ ಮುಂಭಾಗ ಡೋಲು ಬಡಿದು ಕುಣಿದು ಸಂಭ್ರಮಿಸಿದ್ದಾರೆ.
ಸೋಲಿನ ಕುರಿತು ಪ್ರತಿಕ್ರಿಯಿಸಿರುವ ಮೈತ್ರಿ ಅಭ್ಯರ್ಥಿ ಎ.ಪಿ.ರಂಗನಾಥ್, “ಇದು ಮೈತ್ರಿಯ ಸೋಲು ಅಲ್ಲ. ಇದು ನನ್ನ ವೈಯಕ್ತಿಕ ಸೋಲು. ಆಡಳಿತ ದುರುಪಯೋಗ ಮಾಡಿಕೊಂಡಿದ್ದಾರೆ. ಒತ್ತಡ ಹಾಕಿ ಕೆಲಸ ಮಾಡಿಕೊಂಡಿದ್ದಾರೆ. ಹಣ ದುರುಪಯೋಗ ಮಾಡಿಕೊಂಡು ಗೆಲವು ಪಡೆದಿದ್ದಾರೆ” ಎಂದು ಆರೋಪಿಸಿದರು.