ಹಿರಿಯ ಪತ್ರಕರ್ತ ದೊಡ್ಡ ಬೊಮ್ಮಯ್ಯ ಹೃದಯಾಘಾತದಿಂದ ಶನಿವಾರ (ಡಿ.20) ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವರ್ಷ ವಯಸ್ಸಾಗಿತ್ತು.
ಮೃತರು ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಹುಟ್ಟೂರು ಪಾವಗಡ ತಾಲೂಕಿನ ರೊಪ್ಪ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಅಧಿವೇಶನ ಮುಗಿದ ನಂತರ ಇಂದು ಬೆಳಿಗ್ಗೆ ಬೆಂಗಳೂರಿಗೆ ಆಗಮಿಸಿದ್ದರು. ಮನೆಗೆ ತೆರಳಲು ಬಿಎಂಟಿಸಿ ಬಸ್ ಹತ್ತಿದ್ದಾರೆ. ಬಸ್ಸಿನಲ್ಲೇ ಬೊಮಯ್ಯ ಅವರಿಗೆ ಹೃದಯಘಾತವಾಗಿ ನಿಧನರಾಗಿದ್ದಾರೆ. ಬೊಮ್ಮಯ್ಯ ಕಣ್ಣು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಸಂಜೆವಾಣಿ ಪತ್ರಿಕೆಯಲ್ಲಿ ಹಿರಿಯ ವರದಿಗಾರರಾಗಿ ಮೂವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕರ್ನಾಟಕ ಪತ್ರಕರ್ತರ ಸಹಕಾರ ಸಂಘದಲ್ಲಿ ಉಪಾಧ್ಯಕ್ಷರಾಗಿದ್ದರು.
ಸಿಎಂ ಸೇರಿ ಗಣ್ಯರಿಂದ ಸಂತಾಪ
ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷರಾದ ದೊಡ್ಡ ಬೊಮಯ್ಯ ಅವರ ನಿಧನವಾರ್ತೆ ನೋವುಂಟು ಮಾಡಿದೆ. ಸುದೀರ್ಘ 30 ವರ್ಷಗಳ ತಮ್ಮ ವೃತ್ತಿ ಜೀವನದಲ್ಲಿ ಪತ್ರಿಕಾ ಧರ್ಮಕ್ಕೆ ನಿಷ್ಠರಾಗಿದ್ದವರು. ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಅರೆಕಾಲಿಕ ಸುದ್ದಿ ಸಂಪಾದಕರಾಗಿ, ವಿವಿಧ ಪತ್ರಿಕೆಗಳಲ್ಲಿ ವರದಿಗಾರರಾಗಿ, ಪ್ರೆಸ್ ಕ್ಲಬ್ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ಈ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಡಿ ಕೆ ಶಿವಕುಮಾರ್ ಸಂತಾಪ
ಹಿರಿಯ ಪತ್ರಕರ್ತರು ಹಾಗೂ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷರಾದ ದೊಡ್ಡಬೊಮ್ಮಯ್ಯ ಅವರು ಹೃದಯಾಘಾತದಿಂದ ನಿಧನರಾಗಿರುವುದು ದುಃಖ ತಂದಿದೆ. ‘ಇಂದು ಸಂಜೆʼ ಪತ್ರಿಕೆಯಲ್ಲಿ ವರದಿಗಾರರಾಗಿದ್ದ ದೊಡ್ಡಬೊಮ್ಮಯ್ಯ ಅವರು ಸತತ 30 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ಪತ್ರಿಕೋದ್ಯಮದ ಮೂಲಕ ಜನಪರ ಕೆಲಸಗಳನ್ನು ಮಾಡುತ್ತಿದ್ದ ದೊಡ್ಡಬೊಮ್ಮಯ್ಯ ಅವರ ಕಾರ್ಯವೈಖರಿ ಸದಾ ಸ್ಮರಣೀಯ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಹಠಾತ್ ನಿಧನದಿಂದ ದುಃಖದಲ್ಲಿರುವ ಕುಟುಂಬಸ್ಥರಿಗೆ ದೇವರು ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಸಂತಾಪದಲ್ಲಿ ಹೇಳಿದ್ದಾರೆ.
ಬಿ.ವೈ.ವಿಜಯೇಂದ್ರ ಸಂತಾಪ
‘ಸಂಜೆವಾಣಿ’ ಪತ್ರಿಕೆಯ ಹಿರಿಯ ವರದಿಗಾರ ದೊಡ್ಡಬೊಮ್ಮಯ್ಯನವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಸಂತಾಪ ಸೂಚನಾ ಸಂದೇಶದಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಅವರನ್ನು ಭೇಟಿಯಾಗಿದ್ದು ಈಗ ಅವರು ನಮ್ಮೊಂದಿಗಿಲ್ಲ ಎಂಬ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅವರ ನಿಧನದಿಂದ ಕನ್ನಡ ಪತ್ರಿಕೋದ್ಯಮ ಒಬ್ಬ ಪ್ರಾಮಾಣಿಕ ಮತ್ತು ಅನುಭವಿ ಪತ್ರಕರ್ತನನ್ನು ಕಳೆದುಕೊಂಡಿದೆ ಎಂದಿದ್ದಾರೆ. ಅಗಲಿದ ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಪ್ರಾರ್ಥಿಸುತ್ತಾ, ಅವರ ಕುಟುಂಬ ಸದಸ್ಯರಿಗೆ, ಸ್ನೇಹಿತರಿಗೆ ಹಾಗೂ ಸಂಜೆವಾಣಿ ಪತ್ರಿಕಾ ಬಳಗಕ್ಕೆ ನನ್ನ ತೀವ್ರ ಸಂತಾಪಗಳನ್ನು ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದಾರೆ.
(ಕರುಣಾಕರ ಖಾಸಲೆ)
ರಾಜ್ಯ ಮಾಧ್ಯಮ ಸಂಚಾಲಕರು
ಬಿಜೆಪಿ ಕರ್ನಾಟಕ


