ರಾಜ್ಯ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಸಕ್ತ ವರ್ಷದಿಂದ ಪ್ರಾರಂಭಿಸಿರುವ ‘ವಡ್ಡರ್ಸೆ ರಘುರಾಮಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ’ ಪ್ರಶಸ್ತಿಗೆ ಹೆಸರಾಂತ ಹಿರಿಯ ಪತ್ರಕರ್ತ ಡಿ.ಉಮಾಪತಿ ಅವರು ಭಾಜನರಾಗಿದ್ದಾರೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, “ನ್ಯಾ.ಅಶೋಕ ಹಿಂಚಿಗೇರಿ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಪ್ರಶಸ್ತಿ ಆಯ್ಕೆ ಸಮಿತಿಯು ಒಮ್ಮತದಿಂದ ಹಿರಿಯ ಪತ್ರಕರ್ತ ಡಿ.ಉಮಾಪತಿಯವರನ್ನು ‘ವಡ್ಡರ್ಸೆ ರಘುರಾಮಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ’ಗೆ ಆಯ್ಕೆ ಮಾಡಿದೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಯು 2 ಲಕ್ಷ ರೂ.ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.
ಪತ್ರಿಕೋದ್ಯಮದಲ್ಲಿ ಸಾಮಾಜಿಕ ನ್ಯಾಯ ಕುರಿತು ವರದಿ, ವಿಶೇಷ ಲೇಖನಗಳ ಪ್ರಕಟಣೆ ಗುರುತಿಸಿ, ಗೌರವಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024ರ ಆಯವ್ಯಯದಲ್ಲಿ ಹಿರಿಯ ಪತ್ರಕರ್ತ ‘ವಡ್ಡರ್ಸೆ ರಘುರಾಮಶೆಟ್ಟಿ’ ಹೆಸರಿನಲ್ಲಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಘೋಷಿಸಿದ್ದರು.
ಡಿ.ಉಮಾಪತಿ ಅವರ ಪರಿಚಯ
ಮಾರ್ಚ್ 18,1959 ರಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಜನಿಸಿದ ಡಿ.ಉಮಾಪತಿ ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಬಿ.ಎ, ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಎರಡನೆ ರ್ಯಾಂಕ್ ಮೂಲಕ ಪಡೆದಿದ್ದಾರೆ.
ಡಿ. ಉಮಾಪತಿಯವರು ಕನ್ನಡದ ಉತೃಷ್ಟ ಲೇಖಕರಲ್ಲೊಬ್ಬರು. ಪತ್ರಕರ್ತರು, ಬರಹಗಾರರು ಆಗಿರುವ ಅವರು ಮೊದಲು ಕನ್ನಡ ದೈನಂದಿನ ಪತ್ರಿಕೆಯಾದ ಕನ್ನಡ ಪ್ರಭದಲ್ಲಿ ಪತ್ರಕರ್ತರಾಗಿ ಕೆಲಸ ಆರಂಭಿಸಿದರು. ನಂತರ ದೆಹಲಿಗೆ ತೆರಳಿ ಕನ್ನಡ ಪ್ರಭ, ವಿಜಯ ಕರ್ನಾಟಕ ಹಾಗೂ ಪ್ರಜಾವಾಣಿ ಪತ್ರಿಕೆಗಳಿಗೆ ದೆಹಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಪಾರ್ಲಿಮೆಂಟ್ ವರದಿ, ಚುನಾವಣಾ ವಿಶ್ಲೇಷಣೆಗಳು, ಸುಪ್ರೀಂ ಕೋರ್ಟುಗಳಲ್ಲಿನ ನದಿ ನೀರು ನ್ಯಾಯಾಧೀಕರಣ ವ್ಯಾಜ್ಯಗಳ, ರಾಷ್ಟ್ರಮಟ್ಟದ ರಾಜಕೀಯ ಬೆಳವಣಿಗೆಗಳು ಹಾಗೂ ವಿದೇಶಾಂಗ ಸಚಿವರ ವಿದೇಶ ಪ್ರವಾಸದ ಜೊತೆಗೂಡಿ ರಾಜತಾಂತ್ರಿಕ ವರದಿಗಾರಿಕೆಯಲ್ಲಿ ವಿಶಿಷ್ಟ ಅನುಭವ ಇವರದ್ದಾಗಿದೆ.
ಡಿ. ಉಮಾಪತಿ ಅವರು ಪ್ರೆಸ್ ಕ್ಲಬ್ ಆಫ್ ಇಂಡಿಯಾದ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಆಂದೋಲನ, ರೈತ ಚಳವಳಿ, ಸಂಯುಕ್ತ ಕರ್ನಾಟಕ, ವಾರ್ತಾಭಾರತಿ ಪತ್ರಿಕೆಗಳಿಗೆ ಅಂಕಣ ಬರಹಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ’ನ್ಯಾಯಪಥ’ (ಗೌರಿ ಮಿಡಿಯಾ) ಮತ್ತು ’ಈ ದಿನ.ಕಾಮ್’ ಮಾಧ್ಯಮ ಸಂಸ್ಥೆಯ ಕನ್ಸಲ್ಟಿಂಗ್ ಎಡಿಟರ್ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ದೆಹಲಿ ನೋಟ’, ’ಪದಕುಸಿಯೇ ನೆಲವಿಲ್ಲ’ ಉಮಾಪತಿ ಅವರ ಎರಡು ಮಹತ್ವದ ಕೃತಿಗಳು ಪ್ರಕಟವಾಗಿವೆ.