ಲೋಕಸಭಾ ಚುನಾವಣೆಗೆ 18-20 ಸಚಿವರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್‌ನವರು ತೀರ್ಮಾನಿಸಿದ್ದರು. ರಾಜ್ಯದ ಯಾವುದೇ ಒಬ್ಬ ಸಚಿವರೂ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯ ತೋರಿಸಿಲ್ಲ. ಕಾರಣ ನರೇಂದ್ರ ಮೋದಿ ಪರ ಅಲೆ ಇದೆ. ಸೋಲುವ ಭಯದಿಂದ ಮುಂದೆ ಬಂದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.
ಮೈಸೂರಿನಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ರಾಜ್ಯದಲ್ಲಿದ್ದ ಸಣ್ಣಪುಟ್ಟ ಗೊಂದಲಗಳು ಬಗೆಹರಿಯುತ್ತಿವೆ. ಶಿವಮೊಗ್ಗವೂ ಸೇರಿ ಎಲ್ಲ ಸಮಸ್ಯೆಗಳೂ ಪರಿಹಾರವಾಗಲಿವೆ” ಎಂದರು.
“ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದು ನರೇಂದ್ರ ಮೋದಿಯವರು ಪ್ರಧಾನಿ ಆಗುವುದು ಖಚಿತವಾಗಿರುವ ಕಾರಣ ಬಿಜೆಪಿಗೆ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ರಾಜ್ಯದಲ್ಲಿ ಕೆಲವೊಂದು ಸಮಸ್ಯೆಗಳಿದ್ದು, ಅವು ಶೀಘ್ರವೇ ಬಗೆಹರಿಯಲಿವೆ” ಎಂದು ಅಭಿಪ್ರಾಯಪಟ್ಟರು.
ಕೆ.ಎಸ್.ಈಶ್ವರಪ್ಪ ಅವರ ಸ್ಪರ್ಧೆ ಕುರಿತ ಪ್ರಶ್ನೆಗೆ ಉತ್ತರ ನೀಡಿದ ಅವರು, “ನಮ್ಮದೊಂದು ರಾಷ್ಟ್ರೀಯ ಪಕ್ಷ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದರೂ ಬಿಜೆಪಿ ಗೆಲ್ಲುವ ನಿರೀಕ್ಷೆಯಿಂದ ಆಕಾಂಕ್ಷಿಗಳೂ ಹೆಚ್ಚಾಗಿದ್ದರು. ದಾವಣಗೆರೆ ಮತ್ತು ಬೆಳಗಾವಿಗೆ ನಮ್ಮ ರೈತ ನಾಯಕರಾದ ಯಡಿಯೂರಪ್ಪನವರು ಭೇಟಿ ಕೊಟ್ಟು ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಈಶ್ವರಪ್ಪನವರ ಸಮಸ್ಯೆಯೂ ಬಗೆಹರಿಯಲಿದೆ” ಎಂದರು.
“ನಮ್ಮ ಪಕ್ಷದ ಕೇಂದ್ರದ ನಾಯಕತ್ವವು ಕೇವಲ ವಿಜಯೇಂದ್ರ ಮತ್ತು ಯಡಿಯೂರಪ್ಪ ಅವರ ಮಾತು ಕೇಳಿ ತೀರ್ಮಾನ ಮಾಡುವುದಿಲ್ಲ. ಒಂದು ಬಲಿಷ್ಠ ನಾಯಕತ್ವ ನಮ್ಮ ಕೇಂದ್ರದಲ್ಲಿದೆ. ಬಲಿಷ್ಠ ನಾಯಕರಾದ ಮೋದಿಜೀ, ನಡ್ಡಾಜೀ, ಅಮಿತ್ ಶಾ ಜೀ ಅವರಿದ್ದಾರೆ. ರಾಜ್ಯಕ್ಕೆ ಸಂಬಂಧಿಸಿ ಎಲ್ಲ ನಾಯಕರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡಿದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಿದರು. ಚುನಾವಣೆ ಫಲಿತಾಂಶ ಬಂದಾಗ ಯಾರೆಲ್ಲ ಸಕ್ರಿಯರಾಗಿ ಕೆಲಸ ಮಾಡಿದ್ದಾರೆ ಎಂಬುದು ಗೊತ್ತಾಗಲಿದೆ” ಎಂದರು.