“ಗೃಹಲಕ್ಷ್ಮಿ ಯೋಜನೆ ದುಡ್ಡು ನಿನಗೆ ಬರುತ್ತೆ, ನಾನಿಲ್ಲ ಎಂದು ಚಿಂತಿಸಬೇಡ” ಎಂದು ಮಗನ ಮಾತನ್ನು ನೆನಪು ಮಾಡಿಕೊಂಡು ಆತನ ಶವದೆದುರು ತಾಯಿ ರೋದಿಸುತ್ತಿರುವುದನ್ನು ನೋಡಿ ಎದೆ ಭಾರವಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವುಕರಾಗಿ ನುಡಿದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಅನಾರೋಗ್ಯದಿಂದ ಅಕಾಲಿಕ ಮರಣಕ್ಕೆ ತುತ್ತಾದ ಈ ಬಡತಾಯಿಯ ಮಗನ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದಿದ್ದಾನೆ.
“ಯಾವ ತಾಯಿಗೂ ಎದೆಯೆತ್ತರಕ್ಕೆ ಬೆಳೆದ ಮಗನ ಚಿತೆಗೆ ಅಗ್ನಿಸ್ಪರ್ಶ ಮಾಡುವ ಸ್ಥಿತಿ ಬಾರದಿರಲಿ. ನಾವು ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿದ ದಿನದಿಂದ ಇಂದಿನ ವರೆಗೆ ಕೆಲವರಿಂದ ಅಪಪ್ರಚಾರ, ಟೀಕೆ, ವ್ಯಂಗ್ಯಗಳು ವ್ಯಕ್ತವಾಗುತ್ತಲೇ ಇದೆ, ಇದಾವುದಕ್ಕೂ ನಾನು ತಲೆಕೆಡಿಕೊಂಡಿಲ್ಲ. ಕಾರಣ ಇಂತಹ ಲಕ್ಷಾಂತರ ಬಡತಾಯಂದಿರಿಗೆ ನಮ್ಮ ಯೋಜನೆ ಮೂರು ಹೊತ್ತು ನೆಮ್ಮದಿಯ ಅನ್ನ ನೀಡಿ ಬದುಕಿಗೆ ಆಧಾರವಾಗಿದೆ” ಎಂದು ಹೇಳಿದ್ದಾರೆ.
“ಬಡತನ, ಹಸಿವು, ಅನಾಥಭಾವ ಅನುಭವಿಸಿದವರಿಗಷ್ಟೇ ಅದರ ನೋವು, ಹತಾಶೆ ಅರಿವಾಗಲು ಸಾಧ್ಯ. ಈ ತಾಯಿಯ ಜೊತೆ ನಮ್ಮ ಸರ್ಕಾರ ಇದೆ, ಮಗನ ಸಾವಿನ ದುಃಖದಿಂದ ಆದಷ್ಟು ಬೇಗ ಹೊರಬರಲಿ ಎಂದು ಹಾರೈಸುತ್ತೇನೆ” ಎಂದು ತಿಳಿಸಿದ್ದಾರೆ.


