ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರಾಜ್ಯ ಅಭಿವೃದ್ಧಿ ಪರಿಷತ್ ಸಭೆ ನಡೆಯಿತು.
ಸಭೆಯಲ್ಲಿ ಮುಖ್ಯಮಂತ್ರಿಗಳು ಮಾತನಾಡಿ, “ಇಡೀ ದೇಶದಲ್ಲಿ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆ ಮಾಡಿರುವುದು ನಾವು ಮಾತ್ರ. ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿ ಎಸ್‌ಟಿ ಸಮುದಾಯಕ್ಕೆ ಹಣ ಖರ್ಚು ಕೊಡುತ್ತಿರುವುದು ನಮ್ಮ ಸರ್ಕಾರ ಮಾತ್ರ” ಎಂದು ಹೇಳಿದರು.
“2024-25 ನೇ ಸಾಲಿನಲ್ಲಿ 39121.46 ಕೋಟಿ ಇದ್ದರೆ, ಹಿಂದಿನ ವರ್ಷ 35221.84 ಕೋಟಿ ಇತ್ತು. ಇದರಲ್ಲಿ ಬಿಡುಗಡೆ ವೆಚ್ಚದ ಶೇ.99.64 ಕೋಟಿಯಷ್ಟು ಖರ್ಚಾಗಿದೆ. ಉಳಿದದ್ದು ಏಕೆ ಆಗಿಲ್ಲ” ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
“ಆಯಾಯ ವರ್ಷವೇ ಶೇ.100 ರಷ್ಟು ಖರ್ಚು ಮಾಡಬೇಕು ಎನ್ನುವ ಕಾನೂನು ಮಾಡಿದ್ದು ನಾವೇ. ಖರ್ಚು ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎನ್ನುವ ನಿಯಮವನ್ನೂ ಮಾಡಿದ್ದೇವೆ. ಯಾರು ನಿರ್ಲಕ್ಷ್ಯ ಮಾಡಿದ್ದಾರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ನಿರ್ಲಕ್ಷ್ಯಕ್ಕೆ ಕ್ಷಮೆ ಇಲ್ಲ” ಎಂದರು.
“ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಎಸ್.ಸಿ.ಎಸ್.ಪಿ., ಟಿ.ಎಸ್.ಪಿ. ಕಾಯ್ದೆ 2013 ನ್ನು ಜಾರಿಗೆ ತಂದು, ಸರ್ಕಾರದ ಒಟ್ಟಾರೆ ಅಭಿವೃದ್ಧೀ ಆಯವ್ಯಯದ ಶೇ. 24.1 ರಷ್ಟನ್ನು ಈ ಸಮುದಾಯಗಳ ಅಭಿವೃದ್ಧಿಗೆ ವೆಚ್ಚ ಮಾಡಲಾಗುತ್ತಿದೆ. ಶುಕ್ರವಾರ ನಡೆದ ರಾಜ್ಯ ಪರಿಷತ್ ಸಭೆಯಲ್ಲಿ 2024-25 ನೇ ಸಾಲಿಗೆ ಎಸ್.ಸಿ.ಎಸ್.ಪಿ. / ಟಿಎಸ್.ಪಿ. ಅಡಿ ಒಟ್ಟಾರೆ. ರೂ.39,121.46 ಕೋಟಿ ಅನುದಾನ ಒದಗಿಸಲಾಗಿದೆ” ಎಂದು ಹೇಳಿದರು.
“ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಇದು 11% ಅಂದರೆ ರೂ.3897 ಕೋಟಿ ಹೆಚ್ಚಳವಾಗಿದೆ. ಎಸ್.ಸಿ.ಎಸ್.ಪಿ. ಅಡಿ 27,673.96 ಕೋಟಿ ರೂ. ಹಾಗೂ ಟಿ.ಎಸ್.ಪಿ. ಅಡಿ 11447.50 ಕೋಟಿ ರೂ. ಒದಗಿಸಲಾಗಿದೆ. ಈ ವರ್ಷದ ಕ್ರಿಯಾ ಯೋಜನೆಯಲ್ಲಿ ಮುಖ್ಯವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 8,480 ಕೋಟಿ ರೂ., ಇಂಧನ ಇಲಾಖೆಗೆ 5026 ಕೋಟಿ, ಸಮಾಜ ಕಲ್ಯಾಣ ಇಲಾಖೆಗೆ 4174 ಕೋಟಿ ರೂ., ಕಂದಾಯ ಇಲಾಖೆಗೆ 3403 ಕೋಟಿ ರೂ. , ಗ್ರಾಮೀಣಾಭಿವೃದ್ಧಿ ಇಲಾಖೆಗೆ 3163 ಕೋಟಿ ರೂ. ಒದಗಿಸಲಾಗಿದೆ” ಎಂದು ಹೇಳಿದರು.
“ಕಳೆದ ವರ್ಷ 35221.84 ಕೋಟಿ ರೂ. ಆಯವ್ಯಯ ಹಂಚಿಕೆಗೆ ಎದುರಾಗಿ ಶೇ. 97.23 ರಷ್ಟು ಹಾಗೂ ಬಿಡುಗಡೆಗೆ ಎದುರಾಗಿ ಶೇ. 99.64 ರಷ್ಟು ಸಾಧನೆಯಾಗಿದೆ. ಈ ಅನುದಾನ ಯಾವ ಕಾರಣಕ್ಕೂ ಬಳಕೆಯಾಗದೆ ಉಳಿಕೆ ಆಗಬಾರದು. ಅದೇ ವರ್ಷ ವೆಚ್ಚವಾಗಬೇಕು” ಎಂದು ಸೂಚಿಸಿದರು.
“ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನಿಗಮಗಳಲ್ಲಿ ಹಣ ವೆಚ್ಚವಾಗಿಲ್ಲ. ಇದಕ್ಕೆ ಶಾಸಕರು ಪಟ್ಟಿ ಕೊಡಲಿಲ್ಲ ಎಂಬ ಕಾರಣ ನೀಡುತ್ತಾರೆ. ನಿಗಮಗಳ ಅಧ್ಯಕ್ಷರು ಹಾಗೂ ಸಂಬಂಧಿಸಿದ ಸಚಿವರು, ಶಾಸಕರು ಫಲಾನುಭವಿಗಳ ಪಟ್ಟಿ ಒದಗಿಸುವಂತೆ ಮನವೊಲಿಸಬೇಕು” ಎಂದರು.
“ಈ ಯೋಜನೆಗಳ ಮೌಲ್ಯಮಾಪನದಿಂದ ಶೇ. 65 ರಷ್ಟು ಉಪಯೋಗವಾಗಿರುವುದು ಕಂಡು ಬರುತ್ತದೆ. ಸೆಕ್ಷನ್ 7 (ಡಿ) ಕೈಬಿಡಲಾಗಿದೆ. ಇದರಿಂದಾಗಿ ಈ ಯೋಜನೆಯ ಸಂಪೂರ್ಣ ವೆಚ್ಚ ಈ ಸಮುದಾಯದವರಿಗೇ ಬಳಕೆಯಾಗಲಿದೆ” ಎಂದು ಹೇಳಿದರು.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ. ಮಹದೇವಪ್ಪ, ಸಚಿವರಾದ ಹೆಚ್.ಕೆ.ಪಾಟೀಲ್, ಪ್ರಿಯಾಂಕ್ ಖರ್ಗೆ, ಡಾ. ಎಂ.ಸಿ. ಸುಧಾಕರ್, ಪರಿಷತ್ತಿನ ಸದಸ್ಯರಾಗಿರುವ ಶಾಸಕರಾದ ಪ್ರಸಾದ್ ಅಬ್ಬಯ್ಯ, ಬಸಂತಪ್ಪ, ಶ್ರೀನಿವಾಸ್,ನರೇಂದ್ರಸ್ವಾಮಿ, ಕೃಷ್ಣಾನಾಯಕ್ , ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ್ ರಾಥೋಡ್, ಸಂಸದರಾದ ಸುನಿಲ್ ಬೋಸ್ ಪ್ರಕಾಶ್ ಸೇರಿದಂತೆ ಅಧಿಕಾರಿ ವರ್ಗ ಇದ್ದರು.