Homeಕರ್ನಾಟಕಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ದೌರ್ಜನ್ಯ ಪ್ರಕರಣ | 60 ದಿನದಲ್ಲಿ ಆರೋಪ ಪಟ್ಟಿ ಸಲ್ಲಿಸಿ: ಸಿಎಂ

ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ದೌರ್ಜನ್ಯ ಪ್ರಕರಣ | 60 ದಿನದಲ್ಲಿ ಆರೋಪ ಪಟ್ಟಿ ಸಲ್ಲಿಸಿ: ಸಿಎಂ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ 60 ದಿನಗಳ ಒಳಗಾಗಿ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.

ವಿಧಾನಸೌಧ ಸಭಾಂಗಣದಲ್ಲಿ ಇಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಮಾತನಾಡಿದ ಅವರು, “ಕಳೆದ ಆರು ತಿಂಗಳಲ್ಲಿ ಶೇ.84 ರಷ್ಟು ಮಾತ್ರ ಪ್ರಕರಣಗಳಲ್ಲಿ ನಿಗದಿತ ಅವಧಿಯ ಒಳಗಾಗಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಶೇ.100 ಪ್ರಕರಣಗಳಲ್ಲಿ 60ದಿನಗಳ ಒಳಗಾಗಿ ಕಡ್ಡಾಯವಾಗಿ ಆರೋಪ ಪಟ್ಟಿ ಸಲ್ಲಿಸಲು ಕ್ರಮ ಕೈಗೊಳ್ಳಬೇಕು” ಎಂದು ಸಿಎಂ ಸ್ಪಷ್ಟ ಸೂಚನೆ ನೀಡಿದರು.

“ಪೊಲೀಸರು ಇದರಲ್ಲಿ ಯಾವುದೇ ನೆಪ ಹೇಳಬಾರದು. ನ್ಯಾಯಾಲಯದಲ್ಲಿ 56 ಪ್ರಕರಣಗಳಲ್ಲಿ ತಡೆಯಾಜ್ಞೆ ಇದ್ದು, ಇದನ್ನು ತೆರವುಗೊಳಿಸಲು ಕ್ರಮಕೈಗೊಳ್ಳಬೇಕು. ರಾಜ್ಯದಲ್ಲಿ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗಾಗಿ 11ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಪ್ರಕರಣಗಳ ಸರಿಯಾದ ವಿಚಾರಣೆ ನಡೆಸಿ, ತ್ವರಿತವಾಗಿ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಶಿಕ್ಷೆಯ ಪ್ರಮಾಣ ಶೇ.10ರಷ್ಟಿದ್ದು, ಇದು ಹೆಚ್ಚಾಗಬೇಕು. ಆರೋಪಿಗಳೊಂದಿಗೆ ಪೊಲೀಸರು ಶಾಮೀಲಾಗಿರುವುದು ಕಂಡು ಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದರು.

“ದೌರ್ಜ್ಯನ್ಯ ಪ್ರಕರಣಗಳಲ್ಲಿ ಅಂಗವೈಕಲ್ಯತೆ ಉಂಟಾದಲ್ಲಿ ನೀಡಲಾಗುವ ವೈದ್ಯಕೀಯ ಪರಿಹಾರದ ಮೊತ್ತವನ್ನು ಹೆಚ್ಚಿಸುವ ಕುರಿತು ಪರಿಶೀಲನೆ ಮಾಡಲಾಗುವುದು” ಎಂದು ಭರವಸೆ ನೀಡಿದರು.

“2023ರಿಂದ ಕಳೆದ ಮೂರು ವರ್ಷಗಳಲ್ಲಿ ಒಟ್ಟು 6,635 ಪ್ರಕರಣಗಳು ದಾಖಲಾಗಿವೆ. ದೋಷಾರೋಪಣೆ ಪಟ್ಟಿ ಸಲ್ಲಿಸಿರುವುದು 4,912 ಪ್ರಕರಣಗಳಲ್ಲಿ. 60 ದಿನಗಳ ಒಳಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿರುವುದು 4,149 ಪ್ರಕರಣಗಳಲ್ಲಿ ಮಾತ್ರ. ನೋಂದಣಿಯಾದ ಒಟ್ಟು ಪ್ರಕರಣಗಳಲ್ಲಿ 60 ದಿನಗಳ ಒಳಗಾಗಿ 63% ಪ್ರಕರಣಗಳಲ್ಲಿ ಮಾತ್ರ ದೋಷಾರೋಪಣೆ ಪಟ್ಟಿ ಸಲ್ಲಿಕೆ ಯಾಗಿರುತ್ತದೆ. ಶಿಕ್ಷೆಯಾದ ಪ್ರಕರಣಗಳು ಕೇವಲ 36. ತನಿಖಾ ಹಂತದಲ್ಲಿ ಸುಮಾರು 679 ಪ್ರಕರಣಗಳಿವೆ. ಈ ಹಿಂದೆ ನಡೆದಿರುವ ಪ್ರಕರಣಗಳ ಸ್ಥಿತಿ ಗತಿ ಏನು? ಆಯಾ ವರ್ಷಗಳಲ್ಲಿ ನಡೆದಿರುವ ಪ್ರಕರಣಗಳ ನಿಖರ ದಾಖಲೆ ನೀಡುವಂತೆ” ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ಕಾಯ್ದೆಯನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಿ

ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ನ್ಯಾಯಾಲಯಗಳಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪ್ರಕರಣಗಳ ಕುರಿತು ತೀರ್ಪು ಬಂದರೂ, ತೀರ್ಪು ಜಾರಿಗೆ ಯಾಕೆ ಬಾಕಿ ಇದೆ. ಪ್ರಸ್ತುತ ಸುಳ್ಳು ಜಾತಿ ಪ್ರಮಾಣ ಪತ್ರ ಸಾಬೀತಾಗಿರುವ 170 ಪ್ರಕರಣಗಳಲ್ಲಿದ್ದು, ತಕ್ಷಣ ಕ್ರಮ ಕೈಗೊಳ್ಳಬೇಕು. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರದ ಸೌಲಭ್ಯಗಳನ್ನು ಪಡೆದಿರುವುದು ಸಾಬೀತಾದರೆ ಅದನ್ನು ಮರಳಿ ಪಡೆಯಲು ಕ್ರಮ ಕೈಗೊಳ್ಳಬೇಕು. ಈ ಕುರಿತು ಇಲಾಖೆಗಳ ನಡುವೆ ಸಮನ್ವಯತೆ ಅಗತ್ಯವಿದ್ದು, ಸಮಗ್ರ ವರದಿಯನ್ನು ಸಲ್ಲಿಸಲು ಸೂಚಿಸಿದರು.

ರಾಜ್ಯದಲ್ಲಿ 33 ಡಿಸಿಆರ್‌ಇ ಪೊಲೀಸ್‌ ಠಾಣೆಗಳನ್ನು ತೆರೆಯಲಾಗಿದ್ದು, ಇಲ್ಲಿ ಸಿಬ್ಬಂದಿ ಕೊರತೆಯಿದ್ದರೆ ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ಈ ಕುರಿತು ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕು. ದೌರ್ಜನ್ಯ ಪ್ರಕರಣಗಳಲ್ಲಿ ಪ್ರತಿ ದೂರು ದಾಖಲಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಅಂತಹ ಪ್ರಕರಣಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ದೂರಿನಲ್ಲಿ ಸತ್ಯಾಂಶವಿದ್ದರೆ ಮಾತ್ರ ಎಫ್‌ಐಆರ್‌ ದಾಖಲಿಸಬೇಕು ಎಂದು ಸೂಚನೆ ನೀಡಿದರು.

ಸಚಿವರಾದ ಹೆಚ್.ಕೆ.ಪಾಟೀಲ್, ಡಾ.ಹೆಚ್.ಸಿ ಮಹಾದೇವಪ್ಪ, ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ್, ಶಾಸಕರಾದ ಎ.ಸಿ.ಶ್ರೀನಿವಾಸ್‌, ಎಚ್.ವಿ.ವೆಂಕಟೇಶ್‌, ಸುಧಾಮ್‌ ದಾಸ್, ಎ.ಆರ್.ಕೃಷ್ಣಮೂರ್ತಿ, ನರೇಂದ್ರ ಸ್ವಾಮಿ, ಡಿ.ತಿಮ್ಮಯ್ಯ, ಭಾಗೀರಥಿ, ಶಾಂತಾರಾಮ್‌ ಸಿದ್ದಿ, ಬಸವರಾಜ್‌, ಬಿಎಂ.ನಾಗರಾಜ್, ಎನ್.ಟಿ.ಶ್ರೀನಿವಾಸ್, ಬಸನಗೌಡ ತುರವಿಹಾಳ್‌, ರಾಜು ವೇಣುಗೋಪಾಲ ನಾಯಕ್‌, ಡಾ.ಉಮೇಶ್‌ ಜಾಧವ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments