ಜೂನ್ 29ರ ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಸಮಯ ನಿಗದಿಯಾಗಿದೆ. ಪ್ರಧಾನಿ ಹಾಗೂ ಕೇಂದ್ರದ ಹಲವು ಸಚಿವರು ಹಾಗೂ ರಾಜ್ಯದಿಂದ ಆಯ್ಕೆಯಾದ ಎಲ್ಲ ಸಂಸದ ಜತೆ ಮಾತುಕತೆ ನಡೆಸಲಿದ್ದೇನೆ. ಇದಕ್ಕಾಗಿ ಇಂದೇ ದೆಹಲಿಗೆ ತೆರಳಲಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಧಾನಸೌಧದಲ್ಲಿ ನಾಡಪ್ರಭು ಕೆಂಪೇಗೌಡರ 515 ನೇ ಜಯಂತಿ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
“ದೆಹಲಿಗೆ ತೆರಳುವ ಮುನ್ನ ಇಂದು ರಾಜ್ಯದ ಸಂಸದರ ಜೊತೆ ಸಭೆ ನಡೆಸುತ್ತೇನೆ. ರಾಜ್ಯಕ್ಕೆ ಬರಬೇಕಿರುವ ಅನುದಾನ, ಯೋಜನೆಗಳ ಬಗ್ಗೆ ಚರ್ಚೆ ನಡೆಸಿ ಮಾಹಿತಿ ಸಂಗ್ರಹಿಸಲಿದ್ದೇನೆ” ಎಂದು ತಿಳಿಸಿದರು.
“ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಅನುಷ್ಠಾನಗೊಳಿಸಬೇಕಿರುವ ಯೋಜನೆಗಳ ಬಗ್ಗೆ ಪ್ರಧಾನ ಮಂತ್ರಿ ಹಾಗೂ ಕೇಂದ್ರ ಸಚಿವರ ಜತೆ ಚರ್ಚಿಸಲಿದ್ದೇನೆ. ರಾಜ್ಯದ ಯೋಜನೆಗಳಿಗೆ ಕೇಂದ್ರದಿಂದ ಬರಬೇಕಿರುವ ಅನುದಾನದ ಬಗ್ಗೆಯೂ ಪ್ರಸ್ತಾಪಿಸಲಿದ್ದೇನೆ” ಎಂದು ಹೇಳಿದರು.
“ವಿವಿಧ ಇಲಾಖೆಗಳ ಸಚಿವರೂ ನನ್ನ ಜತೆ ದೆಹಲಿಗೆ ಬರಲಿದ್ದಾರೆ. ಅಲ್ಲಿ ಭೂಸಾರಿಗೆ ಸಚಿವರನ್ನು ಭೇಟಿಯಾಗಲಿದ್ದೇವೆ. ಗೃಹ ಸಚಿವರನ್ನೂ ಭೇಟಿಯಾಗಿ ಮಾತುಕತೆ ನಡೆಸಲಿದ್ದೇವೆ. ಹಣಕಾಸು ಸಚಿವರನ್ನೂ ಭೇಟಿಯಾಗಲು ಪ್ರಯತ್ನಿಸುತ್ತೇವೆ. ಪ್ರಧಾನಿ ಹಾಗೂ ಗಡ್ಕರಿ ಭೇಟಿಗೆ ಸಮಯ ನಿಗದಿಯಾಗಿದೆ. ಗೃಹ ಸಚಿವರ ಭೇಟಿಗೆ ಇನ್ನಷ್ಟೇ ಸಮಯ ನಿಗದಿಯಾಗಬೇಕಿದೆ” ಎಂದರು.
ಕೇಂದ್ರ ಬಜೆಟ್ನಲ್ಲಿ ಕರ್ನಾಟಕದ ಬೇಡಿಕೆಗಳೇನು ಎಂದು ಪ್ರಶ್ನಿಸಿದಾಗ, “ಈಗಾಗಲೇ ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ. ಬಜೆಟ್ ಪೂರ್ವಭಾವಿ ಸಭೆಯಲ್ಲಿ ಖುದ್ದು ಭಾಗವಹಿಸಲು ಸಾಧ್ಯವಾಗಿಲ್ಲ. ಹೀಗಾಗಿ ಸಚಿವ ಕೃಷ್ಣ ಬೈರೇಗೌಡರ ಮೂಲಕ ಪ್ರಸ್ತಾವನೆ ಕಳುಹಿಸಲಾಗಿದೆ. ಏನೇನು ಆಗಬೇಕೆಂಬ ಹೇಳಿಕೆ ರೆಕಾರ್ಡ್ ಮಾಡಿ ಕಳುಹಿಸಿದ್ದೇನೆ” ಎಂದರು.
“ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿದ್ದಾರೆ. ರಾಹುಲ್ ಗಾಂಧಿಯವರು ವಿಪಕ್ಷ ನಾಯಕನಾಗಿದ್ದಾರೆ. ರಾಹುಲ್ ಗಾಂಧಿ ಚುನಾವಣೆಗೂ ಮುನ್ನ ಇಡೀ ದೇಶ ಸುತ್ತಿದ್ದಾರೆ. ಅವರಿಗೆ ಜನರ ಸಮಸ್ಯೆಗಳ ಬಗ್ಗೆ ಅರಿವಿದೆ. ಅದನ್ನವರು ಸಂಸತ್ನಲ್ಲಿ ಸಮರ್ಥವಾಗಿ ಮಂಡಿಸಲಿದ್ದಾರೆ. ಸಮರ್ಥ ವಿಪಕ್ಷ ನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂಬ ವಿಶ್ವಾಸ ಇದೆ” ಎಂದು ಹೇಳಿದರು.
“ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ ಅವರು ನಮಗೆಲ್ಲ ಮಾದರಿ. ಅನೇಕ ಕೆರೆಗಳನ್ನು ಬೆಂಗಳೂರಿನಲ್ಲಿ ನಿರ್ಮಿಸಿದ್ದರು. ಅವರ ಅವಧಿಯಲ್ಲಿ ಪೇಟೆಗಳು ನಿರ್ಮಾಣ ಆದವು. ಪರಿಣಾಮ ಬೆಂಗಳೂರು ವ್ಯಾಪಾರ ಕೇಂದ್ರವಾಗಿ ಮುನ್ನೆಲೆಗೆ ಬಂದು ಈಗ ವಿಶ್ಯ ವಿಖ್ಯಾತಿ ಗಳಿಸಿದೆ. ಇದರ ಶ್ರೇಯಸ್ಸು ಕೆಂಪೇಗೌರಿಗೆ ಸಲ್ಲಬೇಕು” ಎಂದು ತಿಳಿಸಿದರು.
ಮೊದಲ ಬಾರಿಗೆ ಸರ್ಕಾರದ ವತಿಯಿಂದ ಕೆಂಪೇಗೌಡ ಜಯಂತಿ ನಾನು ಆರಂಭಿಸಿದೆ. ಪ್ರಾಧಿಕಾರ ರಚನೆ ಕೂಡ ಮಾಡಿದೆ. ಅಂದಿನಿಂದ ನಿರಂತರವಾಗಿ ಸರ್ಕಾರಗಳು ಜಯಂತಿ ಆಚರಿಸುತ್ತ ಬಂದಿವೆ. ಕೆಂಪೇಗೌಡರ ಆಡಳಿತ ನಮಗೆಲ್ಲ ಮಾದರಿ. ಎಲ್ಲರಿಗೂ ಕೆಂಪೇಗೌಡ ಜಯಂತಿ ಶುಭಾಶಯಗಳು” ಎಂದರು.