Homeಕರ್ನಾಟಕಕೋಗಿಲು ತೆರವು ವಿಚಾರದ ಎನ್‍ಐಎ ತನಿಖೆಗೆ ಎಸ್.ಆರ್.ವಿಶ್ವನಾಥ್ ಒತ್ತಾಯ

ಕೋಗಿಲು ತೆರವು ವಿಚಾರದ ಎನ್‍ಐಎ ತನಿಖೆಗೆ ಎಸ್.ಆರ್.ವಿಶ್ವನಾಥ್ ಒತ್ತಾಯ

ಕೋಗಿಲು ಬಡಾವಣೆ ಅಕ್ರಮವಾಸಿಗಳ ತೆರವು ಸಂಬಂಧ ಘಟನಾವಳಿಯ ತನಿಖೆಯನ್ನು ಎನ್‍ಐಎಗೆ ವಹಿಸುವಂತೆ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರು ಆಗ್ರಹಿಸಿದ್ದಾರೆ.

ಯಲಹಂಕದ ಕೋಗಿಲು ಬಡಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಅವರ ನೇತೃತ್ವದ ಸತ್ಯಶೋಧನ ತಂಡವು ಇಂದು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರಿಗೆ ವರದಿಯನ್ನು ಸಲ್ಲಿಸಿತು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.

ಕೇರಳದ ಸಿಎಂ, ಕೆ.ಸಿ.ವೇಣುಗೋಪಾಲ್ ಸಾಕಷ್ಟು ಕೂಗಾಡಿದರಲ್ಲವೇ? ತೆರವಾದವರ ಈ ಪಟ್ಟಿಯಲ್ಲಿ ಒಬ್ಬರೇ ಒಬ್ಬರು ಕೇರಳದವರಿಲ್ಲ. ಕೇರಳದ ಮತಕ್ಕಾಗಿ ಇಷ್ಟೆಲ್ಲ ರಾದ್ಧಾಂತ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

ಕೇರಳದವರು ಇರಲಿ ಬಿಡಲಿ; ಅಲ್ಲಿನ ರಾಜಕಾರಣಕ್ಕಾಗಿ ನಮ್ಮ ರಾಜ್ಯವನ್ನು ಬಲಿ ಪಡೆಯುವ ಕೆಲಸ ಮಾಡಿದ್ದಾರೆ. ಒಬ್ಬರೇ ಒಬ್ಬರು ಕೇರಳದವರಿಲ್ಲ. ಒಬ್ಬರೇ ಒಬ್ಬರು ಕ್ರಿಶ್ಚಿಯನ್ ಇದ್ದಾರೆ. ನಮಗೆ ಸಿಕ್ಕಿದ ಪಟ್ಟಿಯಲ್ಲಿ ಬಹುತೇಕ ಎಲ್ಲರೂ ಮುಸ್ಲಿಮರೇ ಇದ್ದಾರೆ. ಬೆಂಗಳೂರಿನಲ್ಲಿ ಸರಕಾರಿ ಜಾಗದಲ್ಲಿ ಹೊಸದಾಗಿ ಗುಡಿಸಲು ಹಾಕಿಕೊಂಡವರನ್ನು ಕೂಡಲೇ ಸರಕಾರ ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ನಗರದಲ್ಲಿರುವ 100 ಚಿಂದಿ ಆಯುವವರ ಪೈಕಿ ಶೇ 95 ಜನರು ರೋಹಿಂಗ್ಯಾಗಳೇ ಇದ್ದಾರೆ. ಅವರ ಬಳಿ ಕೆಲವು ಕಾರ್ಡ್‍ಗಳಿವೆ. ನಾವು ಹೋಗಿ ಕೇಳಿದಾಗ ಕೊಟ್ಟಿಲ್ಲ. ವಲಸಿಗರ ಕಾರ್ಡ್ ಅವರ ಬಳಿ ಇದೆ. ಹಣ ಕೊಟ್ಟು ಗಡಿ ದಾಟಿ ಬಂದುದಾಗಿ ಹೇಳುತ್ತಾರೆ. ಪಶ್ಚಿಮ ಬಂಗಾಲದ ಮೂಲಕ ಬರಲು ವ್ಯವಸ್ಥೆ ಕಲ್ಪಿಸುವ ತಂಡವೇ ಇದೆ ಎಂದು ಅವರೇ ಹೇಳಿದ್ದಾಗಿ ವಿವರಿಸಿದರು.

ಅವರ ಭಾಷೆ ಹಿಂದಿಯೂ ಅಲ್ಲ; ಉರ್ದುವೂ ಅಲ್ಲ. ಅದು ನಮಗೆ ಅರ್ಥವೂ ಆಗುವುದಿಲ್ಲ ಎಂದು ತಿಳಿಸಿದರು. ಬಾಂಗ್ಲಾ ಮತ್ತು ರೋಹಿಂಗ್ಯಾ ಭಾಷೆ ಕೇಳಿದೊಡನೆ ಗೊತ್ತಾಗುತ್ತದೆ. ಮೊನ್ನೆ ಟಿ.ವಿ ಚಾನೆಲ್ ಒಂದರಲ್ಲಿ ಮಹಿಳೆಯೊಬ್ಬರು ಜೈ ಬಾಂಗ್ಲಾ ಹೇಳಿದ್ದನ್ನು ಕೇಳಿದ್ದೇವೆ ಎಂದು ತಿಳಿಸಿದರು. ಅವರು ರಾಜಾರೋಷವಾಗಿ ಇದ್ದಾರೆ ಎಂದರು.

ರೋಹಿಂಗ್ಯಾಗಳು ಮತ್ತು ಬಾಂಗ್ಲಾದವರ ಮೇಲೆ ಕ್ರಮಕ್ಕೆ ಆಗ್ರಹ
2 ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾಗಳು ಮತ್ತು ಬಾಂಗ್ಲಾದವರಿದ್ದಾರೆ ಎಂದು ನಮಗೆ ವರದಿಗಳು ಬಂದಿವೆ. ಅವೆಲ್ಲವನ್ನೂ ಪರಿಶೀಲಿಸಿ, ಅಂಥವರನ್ನು ಬಂಧಿಸಬೇಕು. ಅವರ ದೇಶಕ್ಕೆ ಕಳಿಸುವುದು ಅಥವಾ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಸ್.ಆರ್. ವಿಶ್ವನಾಥ್ ಅವರು ಒತ್ತಾಯಿಸಿದರು.

ರಾಜಕಾಲುವೆ ಮೇಲಿನ ಮನೆಗಳನ್ನೂ ಒಡೆಯಲಾಗಿದೆ. ಕಾಚರಕನಹಳ್ಳಿಯಲ್ಲಿ ಕೆರೆಯಲ್ಲಿ ಮನೆ ಕಟ್ಟಿದರೆಂದು ಗುಡಿಸಲಿಗೆ ಬೆಂಕಿ ಹಾಕಿದ್ದರು. ಅವರಿಗೂ ನಾವು ಪರಿಹಾರ ಕೊಟ್ಟಿಲ್ಲ ಎಂದು ತಿಳಿಸಿದರು.

ಅಕ್ರಮವಾಗಿ ಮನೆ ಕೊಡದಿರಿ

15 ಸಾವಿರಕ್ಕೂ ಹೆಚ್ಚು ಜನರು ಮನೆಗಾಗಿ ಅರ್ಜಿ ಹಾಕಿ ಕಾಯುತ್ತಿದ್ದಾರೆ. ಈ ಥರ ಅಕ್ರಮವಾಗಿ ಮನೆ ಕೊಡುವುದಾಗಲೀ, ನಿಯಮಬಾಹಿರವಾಗಿ ಸಹಾಯಧನ ನೀಡಿವುದಾಗಲೀ ಮಾಡಬಾರದು ಎಂದು ವರದಿಯಲ್ಲಿ ತಿಳಿಸಿರುವುದಾಗಿ ಹೇಳಿದರು.

ನಿಯಮ ಪ್ರಕಾರ ಮಾಡಬೇಕೇ ಹೊರತು ಮಾನವೀಯತೆ ದೃಷ್ಟಿಯಿಂದ ಕ್ರಮ ಬೇಡ ಎಂದು ಆಗ್ರಹಿಸಿದರು. ಗುಲ್ಬರ್ಗ ಮತ್ತಿತರ ಕಡೆಗಳಿಂದ ಬಂದು ಅಕ್ರಮವಾಗಿ ಗುಡಿಸಲು ಹಾಕಿಕೊಂಡು ತೆರವಾದವರಿಗೆ ಪರಿಹಾರ ಕೊಡದೇ, ಹೊರದೇಶದವರಿಗೆ ಈ ಥರ ಕುಮ್ಮಕ್ಕು ಕೊಡುವುದನ್ನು ಬಿಜೆಪಿ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಅವರೆಲ್ಲರನ್ನು ನಮ್ಮ ಸಮರ್ಥ ಪೊಲೀಸ್ ಇಲಾಖೆ ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು.

ತರಾತುರಿಯಲ್ಲಿ ಹೊರದೇಶದವರಿಗೆ ಮನೆ ಕೊಡಲು ಹೊರಟಿದೆ. ವಿದೇಶದವರು ಇರುವ ಕಾರಣ ಎನ್‍ಐಎ ತನಿಖೆ ಆಗಬೇಕಿದೆ ಎಂದು ತಿಳಿಸಿದರು.

ಶಾಸಕ ಎಸ್.ಆರ್. ವಿಶ್ವನಾಥ್, ಎಸ್. ಮುನಿರಾಜು, ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ಮಾಳವಿಕ ಅವಿನಾಶ್, ರಾಜ್ಯ ಕಾರ್ಯದರ್ಶಿ ಹೆಚ್.ಸಿ. ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಪ್ರಮುಖರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments