- ಬಡವರ ಸಂವಿಧಾನಬದ್ಧ ಕೆಲಸದ ಹಕ್ಕನ್ನು ವಿಬಿ ಜಿ ರಾಮ್ ಜಿ ಕಸಿದುಕೊಂಡಿದೆ - ಸಮಾಜದಲ್ಲಿ ಅಸಮಾನತೆಯನ್ನು ಶಾಶ್ವತವಾಗಿಸುವುದೇ ಆರ್‌ಎಸ್‌ಎಸ್ ಹುನ್ನಾರ - ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತದೆ
ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತಿದ್ದು, ವಿಬಿ ರಾಮ್ ಜಿ ರದ್ದುಪಡಿಸಿ ನರೇಗಾ ಪುನರ್ಸ್ಥಾಪನೆಯಾಗುವವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಿದ್ದ ‘ಮನರೇಗಾ ಬಚಾವ್ ಸಂಗ್ರಾಮ್” ಅಂಗವಾಗಿ ಆಯೋಜಿಸಿದ್ದ ಬೃಹತ್ ಪ್ರತಿಭಟನೆ ಹಾಗೂ ರಾಜ್ ಭವನ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
“ಇತ್ತೀಚೆಗೆ ಬಿಜೆಪಿಯವರು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಕಾಯ್ದೆ (MGNREGA) ಕಾಯ್ದೆಯನ್ನು ರದ್ದು ಮಾಡಿ, ದುರುದ್ದೇಶದಿಂದ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ. ಹೊಸ ಕಾಯ್ದೆಗೆ ವಿಕಸಿತ ಭಾರತ- ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಆಜೀವಿಕ ಮಿಶನ್ (ಗ್ರಾಮೀಣ) ಎಂಬ ಹೆಸರಿಟ್ಟಿದ್ದಾರೆ” ಎಂದರು.
ಬಡವರ ಬಗ್ಗೆ ಕಾಂಗ್ರೆಸ್ ಪಕ್ಷ ಮಾತ್ರವೇ ಚಿಂತಿಸುತ್ತದೆ
“2005 ರಲ್ಲಿ ಮನಮೋಹನ್ ಸಿಂಗ್ ಪ್ರದಾನಿಯಾಗಿದ್ದ ಸಂದರ್ಭದಲ್ಲಿ ನರೇಗಾ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಅಂತೆಯೇ ಆಹಾರ ಹಕ್ಕು, ಕೆಲಸದ ಹಕ್ಕು, ಶಿಕ್ಷಣ ಹಕ್ಕು, ಮಾಹಿತಿ ಹಕ್ಕು, ಅರಣ್ಯ ಕಾಯ್ದೆ ಗಳನ್ನು ಕಾಂಗ್ರೆಸ್ನ ಸರ್ಕಾರದ ಅವಧಿಯಲ್ಲಿಯೇ ಜಾರಿಗೆ ಬಂದ ಜನಪರ ಕಾಯ್ದೆಗಳಾಗಿದ್ದುವು. ಕಾಂಗ್ರೆಸ್ ಸರ್ಕಾರ ಎಂದಿಗೂ ಮಹಿಳೆಯರಿಗೆ, ದಲಿತರಿಗೆ ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಸಣ್ಣ ರೈತರು ಬಗ್ಗೆ ಕೇವಲ ಕಾಂಗ್ರೆಸ್ ಪಕ್ಷ ಮಾತ್ರ ಚಿಂತನೆ ಮಾಡುತ್ತದೆ” ಎಂದು ಹೇಳಿದರು.
ಬಡವರು ಸೇವಕರಾಗಿಯೇ ಇರಲು ಬಿಜೆಪಿ-ಆರ್ ಎಸ್ ಎಸ್ ನ ಕುತಂತ್ರ
“ಬಿಜೆಪಿಯವರು ಈ ಜನಪರ ಯೋಜನೆಗಳನ್ನು ನಾಶಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಉದ್ಯೋಗ ಸಿಗದಂತೆ ಮಾಡಲಾಗುತ್ತಿದೆ. ಸುಮಾರು ಶೇ. 53 ರಷ್ಟು ಮಹಿಳೆಯರು, ಶೇ. 28 ರಷ್ಟು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರು ಮತ್ತು ಸುಮಾರು 5 ಲಕ್ಷ ಅಂಗವಿಕಲರು ಕೂಲಿ ಕೆಲಸದಲ್ಲಿ ನಿರತರಾಗಿದ್ದು, ನರೇಗಾ ಯೋಜನೆಯಿಂದ ಎಲ್ಲರಿಗೂ ಉದ್ಯೋಗ ಸಿಗುವಂತಾಗಿತ್ತು. ಆದರೆ ಕೇಂದ್ರ ಸರ್ಕಾರ, ಆರ್ ಎಸ್ ಎಸ್ ಅವರ ಜೊತೆಗೂಡಿ ಬಡಜನರು ಸದಾ ಸೇವಕರಾಗಿಯೇ ಇರಬೇಕೆಂದು ಹುನ್ನಾರ ಮಾಡಿದ್ದಾರೆ” ಎಂದರು.

ಬಡವರ ಕೆಲಸವನ್ನು ದಿಲ್ಲಿಯಲ್ಲಿ ನಿರ್ಧರಿಸುವುದು ತಪ್ಪು
“ಬಿಜೆಪಿಯವರು ಕಾಂಗ್ರೆಸ್ ನ ಜನಪರ ಗ್ಯಾರಂಟಿ ಯೋಜನೆಗಳ ಬಗ್ಗೆ ‘ವೋಟ್ ಗಾಗಿ ಮಾಡಿದ ಯೋಜನೆಗಳು’ ಎಂದು ಟೀಕಿಸುತ್ತಿದ್ದರು. ಮಹಿಳೆಯರಿಗೆ, ದಲಿತರಿಗೆ ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಸಣ್ಣ ರೈತರು ನರೇಗಾ ಯಿಂದ ವರ್ಷದ ಯಾವುದೇ ದಿನಗಳಲ್ಲಿ ಕೆಲಸ ಮಾಡಬಹುದಿತ್ತು. ಗ್ರಾಮಸಭೆಗಳು ಹಾಗೂ ಗ್ರಾಮ ಪಂಚಾಯತಿಗಳು ಈ ಮೊದಲು ಕೆಲಸವನನ್ನು ನಿರ್ಧರಿಸಲಾಗುತ್ತಿತ್ತು. ಆದರೆ ಈಗ ಬಡವರ ಗ್ರಾಮೀಣ ಬಡಜನರ ಕೆಲಸವನ್ನು ಸ್ಥಳೀಯ ಗ್ರಾಮೀಣ ಆಡಳಿತ ಬಿಟ್ಟು , ದಿಲ್ಲಿಯಲ್ಲಿ ನಿರ್ಧರಿಸಲಾಗುತ್ತದೆ” ಎಂದರು.
ಮನರೇಗಾ ದಿಂದ 100 ದಿನಗಳ ಕೆಲಸದ ಭರವಸೆಯಿತ್ತು
“ಎಲ್ಲ ಗ್ರಾಮಪಂಚಾಯತಿಗಳಲ್ಲಿ ಬಡ ಕೂಲಿ ಕಾರ್ಮಿಕರಿಗೆ ಕೆಲಸ ಸಿಗುವ ಅವಕಾಶವಿಲ್ಲ. ನರೇಗಾ ಯೋಜನೆಯಿಂದ, ಹಿಂದೆ ಕೂಲಿಗಾರರಿಗೆ 100 ದಿನಗಳ ಕೆಲಸ ಖಾತ್ರಿಯಾಗಿ ಸಿಗುತ್ತಿತ್ತು. ಬಡವರ ಕೆಲಸದ ಹಕ್ಕು ಸಂವಿಧಾನಬದ್ಧವಾದದ್ದು, ಆದರೆ ವಿಬಿ ರಾಮ್ ಜಿ ಯ ಜಾರಿಯಿಂದ ಈ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಈ ಹಿಂದೆ ನರೇಗಾ ಅಡಿಯಲ್ಲಿ ವೆಚ್ಚಮಾಡಲಾಗುವ ಅನುದಾನವನ್ನು ಕೇಂದ್ರ ಸರ್ಕಾರವೇ ನೀಡುತ್ತಿತ್ತು. ಈಗ ಈ ಅನುದಾನವನ್ನು ನಿಲ್ಲಿಸಲಾಗಿದ್ದು, ಕೇಂದ್ರದ ಈ ಹೊಸ ಕಾಯ್ದೆಯಂತೆ ಶೇ. 40 ರಷ್ಟು ರಾಜ್ಯ ಸರ್ಕಾರಗಳು ಕೊಟ್ಟು, ಕೇಂದ್ರ ಶೇ. 60 ರಷ್ಟು ಮಾತ್ರ ಪಾವತಿಸುತ್ತವೆ” ಎಂದು ಹೇಳಿದರು.
ವಿಬಿ ಜಿ ರಾಮ್ ಜಿ – ಆರ್ ಎಸ್ ಎಸ್ ಹುನ್ನಾರ
“ವಿಬಿ ಜಿ ರಾಮ್ ಜಿ ಎಂದ ಕಾಯ್ದೆ ಬಡವರ ಹಕ್ಕನ್ನು ರಕ್ಷಿಸುವುದಿಲ್ಲ. ಈ ಹುನ್ನಾರದ ಹಿಂದೆ ಆರ್ ಎಸ್ ಎಸ್ ಇದೆ. ಬಡವರು ಬಲಯುತರಾಗದೇ, ಸೇವಕರಾಗಿಯೇ ಇರಬೇಕೆಂಬ ಕುತಂತ್ರ ಅವರದ್ದಾಗಿದೆ. ಸಮಾಜದಲ್ಲಿ ಅಸಮಾನತೆಯನ್ನು ಶಾಶ್ವತವಾಗಿಸುವುದೇ ಅರ್ ಎಸ್ ಎಸ್ ಹುನ್ನಾರ” ಎಂದು ಕಿಡಿಕಾರಿದರು.

ನರೇಗಾ ರದ್ಧತಿ ಬಗ್ಗೆ ವಿಶೇಷ ಅಧಿವೇಶನ- ಬಿಜೆಪಿ ಚರ್ಚಿಸುತ್ತಿಲ್ಲ
ಡಾ.ಬಿ.ಆರ್. ಅಂಬೇಡ್ಕರ್ ಹೇಳಿದಂತೆ ದೇಶದಲ್ಲಿ ಸಮಾನತೆ ಸ್ಥಾಪನೆಯಾಗಿಸಲು ಆರ್ಥಿಕ ,ಸಾಮಾಜಿಕ ಸ್ವಾತಂತ್ರ್ಯ ಎಲ್ಲರಿಗೂ ದೊರೆಯಬೇಕು. ಮಹಾತ್ಮಾ ಗಾಂಧಿಯವರು ಗ್ರಾಮ ಸ್ವರಾಜ್ಯ ಪ್ರತಿಪಾದಿಸಿದರು. ಗೋಡ್ಸೆಯವರು ಮಹಾತ್ಮಾಗಾಂಧಿಯವರ ಹತ್ಯೆಯನ್ನು ಮಾಡಿದರೆ, ಬಿಜೆಪಿಯವರು ನರೇಗಾ ಯೋಜನೆಯನ್ನು ರದ್ದುಗೊಳಿಸುವ ಮೂಲಕ, ಮಹಾತ್ಮಾ ಗಾಂಧಿಯವರನ್ನು ಮತ್ತೊಮ್ಮೆ ಹತ್ಯೆ ಮಾಡಿದಂತಾಗಿದೆ. ಬಿಜೆಪಿಯವರು ಈಗ ಸುಳ್ಳು ಹೇಳುತ್ತಿದ್ದಾರೆ . ಈ ಕಾಯ್ದೆಯ ರದ್ದತಿಯ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಆದರೆ ಬಿಜೆಪಿಯವರು ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಆದರೆ ರದ್ದತಿಯ ವಿರುದ್ಧ ಸರ್ಕಾರ ಖಂಡಿತ ನಿರ್ಣಯ ಕೈಗೊಳ್ಳಲಿದೆ ಎಂದು ತಿಳಿಸಿದರು.
ಮುಂದಿನ ಬಜೆಟ್-ಗ್ರಾಮಪಂಚಾಯತ್ ಗಳಿಗೆ ಮಹಾತ್ಮಾ ಗಾಂಧಿ ಹೆಸರು
ನರೇಗಾ ಯೋಜನೆಯ ಪುನರ್ ಸ್ಥಾಪನೆ ಹಾಗೂ ವಿಬಿ ಜಿ ರಾಮ್ ಜಿ ಯ ರದ್ದತಿಯನ್ನು ಒತ್ತಾಯಿಸಿ, ರಾಜಭವನಕ್ಕೆ ಮನವಿಯನ್ನು ತಲುಪಿಸಲಾಗುವುದು. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪಾದಯಾತ್ರೆ ಪ್ರಾರಂಭಿಸಲಾಗಿದ್ದು, ರಾಜ್ಯದ ಪ್ರತಿಯೊಬ್ಬರೂ ಕಾಂಗ್ರೆಸ್ ನ ಈ ಉದ್ದೇಶಕ್ಕೆ ಸಹಕರಿಸಬೇಕು. ಮುಂದಿನ ಬಜೆಟ್ ನಲ್ಲಿ ಘೋಷಣೆಯಲ್ಲಿ 6000 ಗ್ರಾಮ ಪಂಚಾಯತಿಗಳ ಕಚೇರಿಗೂ ಮಹಾತ್ಮಾ ಗಾಂಧಿಯವರ ಹೆಸರನ್ನು ಇಡುವ ಬಗ್ಗೆ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು.


