Homeಕರ್ನಾಟಕ1.53 ಲಕ್ಷ ಕೋಟಿ ರೂ. ಹೊಸ ಹೂಡಿಕೆ ಆಕರ್ಷಣೆ: ಎಂ ಬಿ ಪಾಟೀಲ್

1.53 ಲಕ್ಷ ಕೋಟಿ ರೂ. ಹೊಸ ಹೂಡಿಕೆ ಆಕರ್ಷಣೆ: ಎಂ ಬಿ ಪಾಟೀಲ್

-‌ ಜಾಗತಿಕ ಹೂಡಿಕೆದಾರರ ಸಮಾವೇಶದ ನಂತರದ ನಿರಂತರ ಬೆಳವಣಿಗೆ

ಜಿಸಿಸಿ, ಡೇಟಾ ಸೆಂಟರ್, ಮರುಬಳಕೆ ಇಂಧನ, ತಯಾರಿಕೆ ಕ್ಷೇತ್ರಗಳತ್ತ ಒಲವು

ಕಳೆದ ವರ್ಷದ ಫೆಬ್ರುವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಿದ ನಂತರದ 11 ತಿಂಗಳ ಅವಧಿಯಲ್ಲಿ ರಾಜ್ಯವು 1.53 ಲಕ್ಷ ಕೋಟಿ ರೂ.ಗಳಷ್ಟು ಹೊಸ ಹೂಡಿಕೆಯ ಹಲವು ಕೈಗಾರಿಕಾ ಯೋಜನೆಗಳನ್ನು ಆಕರ್ಷಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಶನಿವಾರ ತಿಳಿಸಿದ್ದಾರೆ.

ರಾಜ್ಯ ಸರಕಾರದ ಉನ್ನತ ಮಟ್ಟದ ನಿಯೋಗದೊಂದಿಗೆ ದಾವೋಸ್ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಅವರು ಈ ವಿವರ ಮತ್ತು ಅಂಕಿಅಂಶಗಳನ್ನು ನೀಡಿದ್ದಾರೆ. ರಾಜ್ಯಕ್ಕೆ ಹೂಡಿಕೆಯನ್ನು ಆಕರ್ಷಿಸುವ ಪ್ರಯತ್ನಗಳು ನಿರಂತರವಾಗಿ ಸಾಗಿದ್ದು, ಅದು ಕೇವಲ ಹೂಡಿಕೆದಾರರ ಸಮಾವೇಶಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ತಯಾರಿಕೆ, ಮರುಬಳಕೆ ಇಂಧನ, ಡೇಟಾ ಕೇಂದ್ರಗಳು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ಸ್ಥಾಪನೆ ಈ ವಲಯಗಳಲ್ಲಿ ಹಲವು ಅಗ್ರಗಣ್ಯ ಉದ್ಯಮ ಸಂಸ್ಥೆಗಳು ಈ ಹೂಡಿಕೆ ಮಾಡಲು ಆಸಕ್ತಿ ತೋರಿಸಿವೆ. ಈ ಪ್ರಸ್ತಾವನೆಗಳು ಇನ್ನು ಕೆಲವೇ ದಿನಗಳಲ್ಲಿ ಕರ್ನಾಟಕ ಉದ್ಯೋಗ ಮಿತ್ರಕ್ಕೆ ಬರಲಿದ್ದು, ಮುಂದಿನ ಹಂತದ ಪ್ರಕ್ರಿಯೆಗಳು ತ್ವರಿತವಾಗಿ ನಡೆಯಲಿವೆ ಎಂದಿದ್ದಾರೆ.

11 ತಿಂಗಳಲ್ಲಿ ಆಕರ್ಷಿಸಿರುವ ಹೊಸ ಬಂಡವಾಳದಲ್ಲಿ ತಯಾರಿಕೆ ವಲಯದಲ್ಲಿ 66,293 ಕೋಟಿ, ಪವನ ಮತ್ತು ಸೌರ ವಿದ್ಯುತ್ ಉತ್ಪಾದನೆಗೆ 20,913 ಕೋಟಿ, ಜಿಸಿಸಿ ಕೇಂದ್ರಗಳ ಸ್ಥಾಪನೆಗೆ 12,500 ಕೋಟಿ, ಮತ್ತು ಡೇಟಾ ಸೆಂಟರುಗಳ ಸ್ಥಾಪನೆಗೆ 6,350 ಕೋಟಿ ರೂಪಾಯಿ ಹೂಡಿಕೆ ಆಗಲಿದೆ ಎಂದು ಅವರು ಹೇಳಿದ್ದಾರೆ.

ಟೊಯೋಟಾ ಕಂಪನಿ ಜಿಗಣಿಯ ತನ್ನ ಘಟಕದಲ್ಲಿ ಗ್ಯಾಸೊಲಿನ್ ಮತ್ತು ಹೈಬ್ರಿಡ್ ಎಂಜಿನ್ನುಗಳ ತಯಾರಿಕೆಗೆ 1,330 ಕೋಟಿ ರೂ, ಕ್ಯೂಪೈಎಐ ಕಂಪನಿಯು ಬೆಂಗಳೂರಿನಲ್ಲಿ ತನ್ನ ಕ್ವಾಂಟಂ ಉತ್ಕೃಷ್ಟತಾ ಕೇಂದ್ರ ಸ್ಥಾಪನೆಗೆ 1,136 ಕೋಟಿ ರೂ, ಎಟಿ&ಎಸ್ ಕಂಪನಿಯು ಎಲೆಕ್ಟ್ರಾನಿಕ್ ಬಿಡಿಭಾಗಗಳ ತಯಾರಿಕೆಗೆ ನಂಜನಗೂಡಿನಲ್ಲಿ 2,850 ಕೋಟಿ ರೂ, ವಿಪ್ರೋ ಹೈಡ್ರಾಲಿಕ್ಸ್ ಕಂಪನಿಯು ಎಲೆಕ್ಟ್ರಾನಿಕ್ಸ್ ಮತ್ತು ಪಿಸಿಬಿ ವಲಯಕ್ಕೆ ಬೇಕಾದ ತಾಮ್ರದ ಲ್ಯಾಮಿನೇಟ್ ತಯಾರಿಕೆಗೆ 499 ಕೋಟಿ ರೂ, ಝೆನ್-ಫೋಲ್ಡ್ ಬಯೋಸೈನ್ಸಸ್ ಲಿಮಿಟೆಡ್ ಔಷಧ ವಿಜ್ಞಾನ ಕ್ಷೇತ್ರಕ್ಕೆ ಬೇಕಾಗುವ ಕಿಣ್ವಗಳ ತಯಾರಿಕೆಗೆ 490 ಕೋಟಿ ರೂ. ಹೂಡಿಕೆ ಮಾಡುತ್ತಿವೆ ಎಂದು ಅವರು ಅಂಕಿಅಂಶ ನೀಡಿದ್ದಾರೆ.

ಉಳಿದಂತೆ ಜೆಜೆಜಿ ಏರೋಸ್ಪೇಸ್ ವಿಮಾನಗಳ ಬಿಡಿಭಾಗಗಳ ತಯಾರಿಕೆಗೆ ದೊಡ್ಡಬಳ್ಳಾಪುರದ ಆದಿನಾರಾಯಣ ಹೊಸಹಳ್ಳಿಯಲ್ಲಿ 470 ಕೋಟಿ ರೂ, ಯಸಾಕಾವ ಇದೇ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುನ್ಮಾನ ಉತ್ಪನ್ನಗಳ ತಯಾರಿಕಾ ಘಟಕ ಸ್ಥಾಪನೆಗೆ 330 ಕೋಟಿ ರೂ, ಐನಾಕ್ಸ್ ವಿಂಡ್ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ವಿಂಡ್ ಟರ್ಬೈನ್ ತಯಾರಿಕಾ ಘಟಕ ಸ್ಥಾಪನೆಗೆ 305 ಕೋಟಿ ರೂ, ಎಸ್ಎಪಿ ದೇವನಹಳ್ಳಿಯಲ್ಲಿ ತನ್ನ ಎರಡನೇ ಘಟಕ ಆರಂಭಕ್ಕೆ 1,960 ಕೋಟಿ ರೂ, ಗೂಗಲ್ ಬೆಂಗಳೂರಿನಲ್ಲಿ 2,500 ಕೋಟಿ ರೂ, ಎನ್.ಟಿ.ಟಿ. ತನ್ನ ಡೇಟಾ ಸೆಂಟರುಗಳ ಸ್ಥಾಪನೆಗೆ ದೇವನಹಳ್ಳಿಯಲ್ಲಿ 4,000 ಕೋಟಿ ರೂ, ಡೇಟಾ ಸಮುದ್ರ ಕಂಪನಿಯು ಮಂಗಳೂರು, ಹುಬ್ಬಳ್ಳಿ-ಧಾರವಾಡ ಮತ್ತು ಮೈಸೂರಿನಲ್ಲಿ 1,350 ಕೋಟಿ ರೂ, ಹಳದಿರಾಮ್ಸ್ ಸಮೂಹವು ತುಮಕೂರಿನ ವಸಂತ ನರಸಾಪುರದಲ್ಲಿ ತನ್ನ ಕುರುಕಲು ತಿಂಡಿ ಘಟಕ ಸ್ಥಾಪನೆಗೆ 444 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿವೆ ಎಂದು ಪಾಟೀಲ್ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments