Homeಕರ್ನಾಟಕಆಸ್ಟ್ರೇಲಿಯನ್‌ ಓಪನ್ ಪುರುಷರ ಡಬಲ್ಸ್‌ ಪ್ರಶಸ್ತಿ ಗೆದ್ದ ರೋಹನ್‌ ಬೋಪಣ್ಣ

ಆಸ್ಟ್ರೇಲಿಯನ್‌ ಓಪನ್ ಪುರುಷರ ಡಬಲ್ಸ್‌ ಪ್ರಶಸ್ತಿ ಗೆದ್ದ ರೋಹನ್‌ ಬೋಪಣ್ಣ

ಭಾರತದ ಗಣರಾಜ್ಯೋತ್ಸವದ ಸಮಯದಲ್ಲಿ ಘೋಷಿಸಲಾಗುವ ಪದ್ಮಶ್ರೀ ಪ್ರಶಸ್ತಿಗೆ ಕನ್ನಡಿಗ ರೋಹನ್ ಬೋಪಣ್ಣ ಆಯ್ಕೆಯಾದ ಬೆನ್ನಲ್ಲೇ, ಆಸ್ಟ್ರೇಲಿಯನ್‌ ಓಪನ್‌ನ ಪುರುಷರ ಡಬಲ್ಸ್‌ ಫೈನಲ್‌ ಪಂದ್ಯದಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾರೆ.

ಪದ್ಮಶ್ರೀ ಪ್ರಶಸ್ತಿಯ ಖುಷಿಯಲ್ಲಿರುವಾಗಲೇ 43 ವರ್ಷದ ವಿಶ್ವದ ನಂ.1 ಡಬಲ್ಸ್‌ ಆಟಗಾರ ರೋಹನ್‌ ಬೋಪಣ್ಣ, ಮೊಟ್ಟಮೊದಲ ಬಾರಿಗೆ ಗ್ರ್ಯಾಂಡ್‌ ಸ್ಲ್ಯಾಮ್ ಡಬಲ್ಸ್‌ ಚಾಂಪಿಯನ್ ಆಗಿದ್ದಾರೆ.

ಶನಿವಾರ ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯನ್‌ ಓಪನ್‌ನ ಪುರುಷರ ಡಬಲ್ಸ್‌ ಫೈನಲ್‌ ಪಂದ್ಯದಲ್ಲಿ 43 ವರ್ಷದ ರೋಹನ್‌ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡನ್‌ ಜೋಡಿ 7-6, 7-5 ರಿಂದ ಇಟಲಿಯ ಜೋಡಿ ಸಿಮೋನ್‌ ಬೊಲ್ಲೆಲಿ ಹಾಗೂ ಆಂಡ್ರೆಯಾ ವಿವಾಸ್ಸೋರಿ ಜೋಡಿಯನ್ನು ಸೋಲಿಸುವ ಮೂಲಕ ಪ್ರಶಸ್ತಿ ಜಯಿಸಿತು. ಈ ಗೆಲುವಿನೊಂದಿಗೆ ಅವರು 2 ಕೋಟಿ ರೂಪಾಯಿ ಬಹುಮಾನ ಜಯಿಸಿದ್ದಾರೆ.
ರೋಹನ್‌ ಬೋಪಣ್ಣ ಹಾಗೂ ಮ್ಯಾಥ್ಯೂ ಎಬ್ಡನ್‌ ತಂಡವಾಗಿ ಗೆದ್ದ ಮೊದಲ ಗ್ರ್ಯಾಂಡ್‌ ಸ್ಲಾಂ ಪ್ರಶಸ್ತಿ ಇದಾಗಿದೆ. ಇದು ರೋಹನ್‌ ಬೋಪಣ್ಣ ಅವರ ಮೊಟ್ಟಮೊದಲ ಗ್ರ್ಯಾಂಡ್‌ ಸ್ಲಾಂ ಡಬಲ್ಸ್‌ ಪ್ರಶಸ್ತಿಯಾಗಿದೆ.

ಇದಕ್ಕೂ ಮುನ್ನ ರೋಹನ್‌ ಬೋಪಣ್ಣ ಪುರುಷರ ಡಬಲ್ಸ್‌ನಲ್ಲಿ ಎರಡು ಬಾರಿ ಯುಎಸ್‌ ಓಪನ್‌ ಫೈನಲ್‌ಗೇರಿದ್ದೇ ಅವರ ಶ್ರೇಷ್ಠ ಸಾಧನೆಯಾಗಿತ್ತು. 2010 ಹಾಗೂ 2023ರ ಯುಎಸ್‌ ಓಪನ್‌ ಪುರುಷರ ಡಬಲ್ಸ್‌ನಲ್ಲಿ ಅವರು ರನ್ನರ್‌ಅಪ್‌ ಆಗಿದ್ದರು. 2010ರಲ್ಲಿ ಪಾಕಿಸ್ತಾನದ ಐಸಾಮ್‌ ಉಲ್‌ ಹಕ್‌ ಖುರೇಷಿ ಅವರ ಜೊತೆಗೂಡಿ ರನ್ನರ್‌ಅಪ್‌ ಆಗಿದ್ದರೆ, 2023ರಲ್ಲಿ ಎಬ್ಡೆನ್‌ ಜೊತೆಗೂಡಿ ರನ್ನರ್‌ ಅಪ್‌ ಆಗಿದ್ದರು.

ಇತ್ತೀಚೆಗಷ್ಟೇ ಪುರುಷರ ಡಬಲ್ಸ್‌ ವಿಭಾಗದಲ್ಲಿ ರೋಹನ್‌ ಬೋಪಣ್ಣ ವಿಶ್ವ ನಂ.1 ಆಟಗಾರ ಎನಿಸಿಕೊಂಡಿದ್ದರು. ಇದು ರೋಹನ್‌ ಬೋಪಣ್ಣ ಅವರ 2ನೇ ಗ್ರ್ಯಾಂಡ್‌ ಸ್ಲಾಂ ಪ್ರಶಸ್ತಿಯಾಗಿದೆ. ಇದಕ್ಕೂ ಮುನ್ನ 2017ರಲ್ಲಿ ಕೆನಡಾದ ಗ್ಯಾಬ್ರಿಯೆಲಾ ದೆಬ್ರೋವಸ್ಕಿ ಜೊತೆಗೂಡಿ ಅವರು ಫ್ರೆಂಚ್‌ ಓಪನ್‌ ಮಿಶ್ರ ಡಬಲ್ಸ್ ಪ್ರಶಸ್ತಿ ಜಯಿಸಿದ್ದರು.

ಸಿಎಂ ಸಿದ್ದರಾಮಯ್ಯ ಅಭಿನಂದನೆ

“ವಿಶ್ವ ಟೆನ್ನಿಸ್‌ನ ನಂ.1 ಡಬಲ್ಸ್‌ ಆಟಗಾರ, ಕನ್ನಡಿಗ ರೋಹನ್‌ ಬೋಪಣ್ಣ ಅವರು ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡನ್‌ ಜೊತೆಗೂಡಿ ಆಸ್ಟ್ರೇಲಿಯನ್ ಓಪನ್ ಡಬಲ್ಸ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ನಾಡಿಗೆ ಹೆಮ್ಮೆ ಮೂಡಿಸಿದ್ದಾರೆ. ಈ ಪ್ರಶಸ್ತಿ ಗೆಲುವಿನೊಂದಿಗೆ ಅವರು ಗ್ರ್ಯಾಂಡ್‌ ಸ್ಲಾಂ ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಹೊಸ ದಾಖಲೆ ಬರೆದಿರುವುದು ವಿಶೇಷ. ವಯಸ್ಸು ಬರೀ ಅಂಕಿಗಳಿಗಷ್ಟೇ ಸೀಮಿತ, ಸಾಧನೆಯ ಹಂಬಲ ದೊಡ್ಡದೆಂಬ ಮಾತು ಇವರ ಆಟ ನೋಡಿದವರಿಗೆ ಅನ್ನಿಸದೆ ಇರಲಾರದು. ಇಂತಹ ಇನ್ನಷ್ಟು ದಾಖಲೆಗಳು ರೋಹನ್ ಬೋಪಣ್ಣನವರಿಂದ ಮೂಡಿಬರಲೆಂದು ಆಶಿಸುತ್ತೇನೆ” ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments