ಎಟಿಎಂಗಳಿಗೆ ಹಣ ತುಂಬುವ ವಾಹನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆ ನಡೆದ 24 ಗಂಟೆಯೊಳಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಸಿಸಿ ಕ್ಯಾಮೆರಾ ದೃಶ್ಯಗಳನ್ನಾಧರಿಸಿ ಖದೀಮರ ಬೆನ್ನತ್ತಿದ್ದ ಪೊಲೀಸರು, ಶಂಕಿತ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದರೋಡೆಗೆ ಬಳಸಿದ್ದ ಇನ್ನೋವಾ ಕಾರು ಆಂಧ್ರಪ್ರದೇಶದ ಚಿತ್ತೂರು ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಿರುಪತಿಯಲ್ಲಿ ಕಾರು ಬಿಟ್ಟು ಆರೋಪಿಗಳು ಪರಾರಿ ಆಗಿದ್ದರು. ಈ ನಡುವೆ ಕಾರಿನ ನಂಬರ ಪ್ಲೇಟ್ ಬದಲಿಸಿ, ಓಡಾಡುತ್ತಿದ್ದ ಇಬ್ಬರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ.
ದರೋಡೆಯ ವೇಳೆ ಕರ್ನಾಟಕ ನೋಂದಣಿ ನಂಬರ್ ಪ್ಲೇಟ್ ಹಾಕಿದ್ದ ಆರೋಪಿಗಳು, ಪರಾರಿಯಾದ ಬಳಿಕ ಯುಪಿ ನೋಂದಣಿಯ ನಂಬರ್ ಪ್ಲೇಟ್ ಹಾಕಿಕೊಂಡು ಓಡಾಡುತ್ತಿದ್ದರು ಎನ್ನಲಾಗಿದೆ.
ಎಟಿಎಂ ಕೇಂದ್ರಕ್ಕೆ ಹಣ ತುಂಬಲು ಹೊರಟಿದ್ದ ಸಿಎಂಎಸ್ ಏಜೆನ್ಸಿ ವಾಹನವನ್ನು ಆದಾಯ ತೆರಿಗೆ ಇಲಾಖೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳ ಸೋಗಿನಲ್ಲಿ ಅಡ್ಡಗಟ್ಟಿ, ₹7.11 ಕೋಟಿ ದರೋಡೆ ನಡೆಸಿದ ಆರೋಪಿಗಳು ಪರಾರಿಯಾದ ಘಟನೆ ಬುಧವಾರ ನಡೆದಿತ್ತು.


