ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ನನಗೇ ಸಿಗಲಿದೆ. ಯಾವ ಅನುಮಾನವು ಬೇಡ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿರುವ ಅವರು, “ಬಿಜೆಪಿಯ 3ನೇ ಪಟ್ಟಿ ನಾಳೆ ಬಿಡುಗಡೆ ಆಗಬಹುದು. ನಾಳೆ ನನ್ನ ಹೆಸರು ಅಧಿಕೃತ ಘೋಷಣೆ ಆಗಬಹುದು” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ಬೆಳಗಾವಿಯಿಂದ ಸ್ಪರ್ಧೆ ಮಾಡಲು ಒಪ್ಪಿಗೆ ಕೊಟ್ಟಿದ್ದೇನೆ. ಬೆಳಗಾವಿಯಲ್ಲಿ ಯಾವುದೇ ಭಿನ್ನಮತ ಇಲ್ಲ. ಪ್ರಭಾಕರ್ ಕೋರೆ ಅವರ ಜತೆ ಮಾತಾಡಿದ್ದೇನೆ. ಮನೆಗೆ ಬಂದರೆ ಬೇಡ ಅನ್ನೋಕಾಗುತ್ತಾ? ಪ್ರಭಾಕರ ಕೋರೆ ಅವರು ಟಿಕೆಟ್ ವಿಚಾರವಾಗಿ ನೇರವಾಗಿ ಎಲ್ಲೂ ಹೇಳಿಲ್ಲ. ನೇರವಾಗಿ ಹೇಳಿದ್ರೆ ಅದಕ್ಕೆ ಪ್ರತಿಕ್ರಿಯೆ ಕೊಡಬಹುದು” ಎಂದರು.
ಕೊನೆಯ ಕ್ಷಣದಲ್ಲಿ ಏನಾಗುತ್ತೋ?
ಲೋಕಸಭೆ ಚುನಾವಣೆಯಲ್ಲಿ ಹಾವೇರಿ ಮತ್ತು ಧಾರವಾಡ ಕ್ಷೇತ್ರದಲ್ಲಿ ಟಿಕೆಟ್ ಸಿಗದೆ ಮುನಿಸಿಕೊಂಡಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ಗೆ ಬೆಳಗಾವಿಯಿಂದ ಸ್ಪರ್ಧಿಸುವ ಆಫರ್ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದರು. ಇದನ್ನು ಒಪ್ಪಿರುವುದಾಗಿಯೂ ಶೆಟ್ಟರ್ ಹೇಳಿದ್ದಾರೆ. ಈ ಮಧ್ಯೆ ಬೆಳಗಾವಿ ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಬಿಗ್ ಟ್ವಿಸ್ಟ್ ಆಗುವ ಲಕ್ಷಣ ಇದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ.
ಕೊನೆ ಕ್ಷಣದಲ್ಲಿ ಶೆಟ್ಟರ್ಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎಂಬ ವದಂತಿ ಹಬ್ಬಿದೆ. ಬೆಳಗಾವಿಯಿಂದ ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ನೀಡಲು ಒತ್ತಡ ಹೆಚ್ಚಾಗಿದೆ. ಕಾಂಗ್ರೆಸ್ನಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಕಣಕ್ಕಿಳಿದರೆ ಬಿಜೆಪಿ ಜಾತಿ ಕಾರ್ಡ್ ಬಳಕೆ ಮಾಡುವ ಸಾಧ್ಯತೆ ಇದೆ. ಒಂದು ವೇಳೆ, ಮೃಣಾಲ್ ಕಣಕ್ಕಿಳಿದ್ರೆ ಬಿಜೆಪಿ ಪಂಚಮಸಾಲಿ ಕಾರ್ಡ್ ಬಳಕೆ ಮಾಡಲಿದೆ ಎಂದು ವರದಿಯಾಗಿದೆ.
ಯತ್ನಾಳ್ ಯತ್ನ
ಬೆಳಗಾವಿ ಟಿಕೆಟ್ ಪಡೆಯಲು ಬಿಜೆಪಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ. ಅವರು ಮಾತ್ರವಲ್ಲದೆ, ರಮೇಶ್ ಜಾರಕಿಹೊಳಿ ಸೇರಿ ಹಲವರಿಂದ ಪ್ರಯತ್ನ ನಡೆಯುತ್ತಿದೆ. ಯತ್ನಾಳ್ ಸದ್ಯ ದೆಹಲಿಯಲ್ಲಿಯೇ ಬೀಡುಬಿಟ್ಟಿದ್ದಾರೆ. ಅವರು ಇಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಭೇಟಿ ಮಾಡುವ ಸಾಧ್ಯತೆ ಇದೆ.
ಶೆಟ್ಟರ್ಗೆ ಟಿಕೆಟ್ ನೀಡಲು ಬಿ ಎಲ್ ಸಂತೋಷಗೆ ಒಲವಿಲ್ಲ ಎಂಬುದು ಬಹಿರಂಗವಾಗಿದೆ. ಹೀಗಾಗಿ ಟಿಕೆಟ್ ಪಡೆಯಲು ಯತ್ನಾಳ್ ಶತ ಪ್ರಯತ್ನ ನಡೆಸುತ್ತಿದ್ದಾರೆ. ಇನ್ನು, ಯತ್ನಾಳ್ಗೆ ಬೆಂಬಲವಾಗಿ ರಮೇಶ್ ಜಾರಕಿಹೊಳಿ ನಿಂತಿದ್ದಾರೆ.