ನಿವೃತ್ತ ಪೊಲೀಸ್ ಮಹಾನಿರ್ದೇಶಕ ಬಿ.ಎನ್.ಗರುಡಾಚಾರ್ (96) ಅವರು ಶುಕ್ರವಾರ (ಮಾ.28) ಬೆಳಗ್ಗೆ 3 ಗಂಟೆಗೆ ಮುಂಜಾನೆ ನಿಧನರಾದರು. ಬಸವನಗುಡಿಯ ಕೃಷ್ಣ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬೆಂಗಳೂರಿನ ಮೊದಲ ಪೊಲೀಸ್ ಕಮಿಷನರ್ ಸಿ.ಚಾಂಡಿ ಅವರ ಕಾಲದಲ್ಲಿ ಬೆಂಗಳೂರು ಸಂಚಾರ ವಿಭಾಗದ ಡಿಸಿಪಿ ಆಗಿದ್ದ ಬಿ.ಎನ್ ಗರುಡಾಚಾರ್ ಅವರು, ಎನ್.ಆರ್ ಜಂಕ್ಷನ್ (ಎಲ್ಐಸಿ ಕಚೇರಿ ಬಳಿ)ನಲ್ಲಿ 1963ರಲ್ಲಿ ಸಂಚಾರ ದಟ್ಟಣೆ ಹೆಚ್ಚಿದ್ದ ಕಾರಣಕ್ಕೆ ಸಿಗ್ನಲ್ ಅಳವಡಿಸಿದ್ದರು. ಇದು ಬೆಂಗಳೂರಿನ ಮೊದಲ ಟ್ರಾಫಿಕ್ ಸಿಗ್ನಲ್ ಆಗಿದೆ.
ಚಿಕ್ಕಪೇಟೆ ಬಿಜೆಪಿ ಶಾಸಕ ಉದಯ್ ಬಿ ಗರುಡಾಚಾರ್ ಅವರ ತಂದೆಯಾಗಿರುವ ಬಿ.ಎನ್.ಗರುಡಾಚಾರ್ ಅವರು ವಿವಿಧ ಜಿಲ್ಲೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಬೆಂಗಳೂರು ಮಹಾನಗರ ಡಿಸಿಪಿ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದರು. ನಂತರ ಡಿಜಿ-ಐಜಿಪಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.
ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು, ಬಿಂಡಿಗೇನವಿಲೆ ಗ್ರಾಮದಲ್ಲಿ ಜನಿಸಿದ ಗರುಡಾಚಾರ್ ಅವರು ಎಂಎ ಸ್ನಾತಕೋತ್ತರ ಪದವಿ ಪಡೆದ ನಂತರ 1953ರಲ್ಲಿ ಐಪಿಎಸ್ ಪಾಸ್ ಮಾಡಿ ಕೊಪ್ಪಳ, ಹುಮ್ನಾಬಾದ್, ತುಮಕೂರು, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಎಸ್‌ಪಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಹಾಗೂ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
1963ರಲ್ಲಿ ಬೆಂಗಳೂರು ನಗರದ ಸಂಚಾರ ಪೊಲೀಸ್ ಉಪ ಆಯುಕ್ತರಾಗಿದ್ದ ಸಮಯದಲ್ಲಿ ಬೆಂಗಳೂರಿನ ಕಾರ್ಪೊರೇಷನ್ ವೃತ್ತದಲ್ಲಿ ಬೆಂಗಳೂರು ನಗರದ ಮೊದಲ ಟ್ರಾಫಿಕ್ ಸಿಗ್ನಲ್ ಪ್ರಾರಂಭಿಸಿದ್ದರು. ಈ ಐತಿಹಾಸಿಕ ಘಟನೆಯ ಸವಿನೆನಪಿಗಾಗಿ, ಈ ಘಟನೆಯನ್ನು ಹೆಸರಿಸುವ ಕಲ್ಲನ್ನು 2021ರ ಮಾರ್ಚ್‌ನಲ್ಲಿ ಖುದ್ದು ಗರುಡಾಚಾರ್ ಅವರೇ ಅಂದಿನ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಕಮಲ್ ಪಂತ್, ಬೆಂಗಳೂರು ನಗರದ ಸಂಚಾರ ಜಂಟಿ ಪೊಲೀಸ್ ಆಯುಕ್ತ ಬಿ ಆರ್ ರವಿಕಾಂತೇಗೌಡ ಜತೆಗೂಡಿ ಉದ್ಘಾಟಿಸಿದ್ದರು.
1975ರ ತುರ್ತು ಪರಿಸ್ಥಿತಿಯಲ್ಲಿ ಇಂಟಲಿಜೆನ್ಸ್ ಐಜಿಯಾಗಿ, ಎಬಿ ವಾಜಪೇಯಿ, ಎಲ್ ಕೆ ಅಡ್ವಾನಿ ಮುಂತಾದ ರಾಷ್ಟ್ರಮಟ್ಟದ ರಾಜಕೀಯ ನಾಯಕರನ್ನು ಬಂಧಿಸಿ, ಜೈಲಿಗೆ ಹಾಕುವ ಮೂಲಕ ದೇಶವ್ಯಾಪಿ ಸುದ್ದಿಯಾಗಿದ್ದರು. 60ರ ದಶಕದಲ್ಲಿ ಹೈದರಾಬಾದ್‌ನಲ್ಲಿ ಉರ್ದು ವ್ಯಾಸಂಗ ಮಾಡಿದ್ದ ನಂತರ ಕೊನೆಯವರೆಗೂ ಪ್ರತಿನಿತ್ಯ ‘ಡೈಲಿ ಸಾಲಾರ್’ ಉರ್ದು ಪತ್ರಿಕೆಯನ್ನು ತಪ್ಪದೆ ಓದುವ ಹವ್ಯಾಸ ರೂಢಿಸಿಕೊಂಡಿದ್ದರು.