Homeಕರ್ನಾಟಕಕನ್ನಡಪರ ಹೋರಾಟಗಾರರ ಬಗ್ಗೆ ಗೌರವವಿದೆ, ಆದರೆ ಕಾನೂನು ಕೈಗೆತ್ತಿಕೊಂಡರೆ ಸಹಿಸಲ್ಲ: ಡಿ ಕೆ ಶಿವಕುಮಾರ್

ಕನ್ನಡಪರ ಹೋರಾಟಗಾರರ ಬಗ್ಗೆ ಗೌರವವಿದೆ, ಆದರೆ ಕಾನೂನು ಕೈಗೆತ್ತಿಕೊಂಡರೆ ಸಹಿಸಲ್ಲ: ಡಿ ಕೆ ಶಿವಕುಮಾರ್

ನಾವೆಲ್ಲರೂ ಕನ್ನಡ ಉಳಿಸಬೇಕು. ಕನ್ನಡಪರ ಹೋರಾಟಗಾರರ ಮೇಲೆ ನಮಗೆ ಗೌರವವಿದೆ. ಹಾಗಂತ ಆಸ್ತಿ-ಪಾಸ್ತಿ ಹಾನಿ ಮಾಡಿದರೆ ಸರ್ಕಾರ ಕಣ್ಣುಮುಚ್ಚಿಕೊಂಡು ಕೂರಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಎಚ್ಚರಿಸಿದರು.

ಸದಾಶಿವನಗರ ನಿವಾಸ ಹಾಗೂ ಕೆಪಿಸಿಸಿ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿ, “ಯಾರೊಬ್ಬರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಕನ್ನಡ ಉಳಿಸಿ, ಬೆಳೆಸುವ ಹೋರಾಟಕ್ಕೆ ನಮ್ಮ ಅಭ್ಯಂತರವಿಲ್ಲ. ಹೋರಾಟದ ಹೆಸರಿನಲ್ಲಿ ಆಸ್ತಿಪಾಸ್ತಿ ಹಾನಿ ಮಾಡುವುದನ್ನು ನಾವು ಒಪ್ಪುವುದಿಲ್ಲ, ಸಹಿಸುವುದೂ ಇಲ್ಲ” ಎಂದರು.

“ಕಾನೂನು ಪಾಲನೆ ಎಲ್ಲರ ಕರ್ತವ್ಯ. ನೀವು ಹೋರಾಟ ಮಾಡುವುದಾದರೆ ಮಾಡಿ, 60% ನಾಮಫಲಕ ಹಾಕಬೇಕು ಎನ್ನುವುದನ್ನು ಕೇಳಲು ಒಂದು ಇತಿಮಿತಿ ಇದೆ. ಈ ಹಿಂದೆ ಯಾರೋ ಒಬ್ಬರು ದೂರು ನೀಡಿದರು ಎಂದು ನಾರಾಯಣಗೌಡರ ಮೇಲೆ ಕೇಸ್ ದಾಖಲಾದಾಗ, ಅವರ ವಿರುದ್ಧ ಪ್ರಕರಣ ದಾಖಲಿಸುವುದು ಸರಿಯಲ್ಲ ಎಂದು ಪೊಲೀಸ್ ಅಧಿಕಾರಿಗಳ ಜತೆ ನಾನೇ ಮಾತನಾಡಿದ್ದೆ. ಕನ್ನಡ ಕಡ್ಡಾಯ ಮಾಡಲು ನೋಟಿಸ್ ನೀಡೋಣ. ಆದರೆ ಕಾನೂನು ಕೈಗೆತ್ತಿಕೊಳ್ಳಬಾರದು. ನಾರಾಯಣಗೌಡರಿಗೆ ಈ ಮಾತನ್ನು ಇವತ್ತೂ ಹೇಳುತ್ತೇನೆ, ಮುಂದೆಯೂ ಹೇಳುತ್ತೇನೆ” ಎಂದು ಹೇಳಿದರು.

“ಪ್ರತಿಭಟನೆ ಮಾಡಲಿ, ಧಿಕ್ಕಾರ ಕೂಗಲಿ. ನಾವು ತಪ್ಪು ಮಾಡಿದರೆ ನಮ್ಮ ಮನೆ ಮುಂದೆಯೂ ಬಂದು ಪ್ರತಿಭಟನೆ ಮಾಡಲಿ. ನಾವೂ ಕನ್ನಡಿಗರೇ. ಕನ್ನಡದ ಬಗ್ಗೆ ನಮಗೂ ಬದ್ಧತೆ ಇದೆ. ಸಚಿವ ಸಂಪುಟದಲ್ಲಿ ನಿಮ್ಮ ಟಿಪ್ಪಣಿಗಳೇನೆ ಇದ್ದರೂ ಕನ್ನಡದಲ್ಲೇ ಇರಬೇಕು ಎಂದು ಮುಖ್ಯಮಂತ್ರಿಗಳು ಸಚಿವರುಗಳಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಕನ್ನಡ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ” ಎಂದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಪಾಠ ಕಲಿಸುತ್ತೇವೆ ಎಂಬ ನಾರಾಯಣಗೌಡರ ಎಚ್ಚರಿಕೆ ವಿಚಾರವಾಗಿ ಕೇಳಿದಾಗ, “ನಮ್ಮ ಸರ್ಕಾರ ಅಧಿಕಾರಕ್ಕೆ ಬರಲು ಕನ್ನಡಪರ ಹೋರಾಟಗಾರರ ಸಹಕಾರ ಇಲ್ಲ ಎಂದು ನಾನು ಹೇಳುವುದಿಲ್ಲ. ಹಾಗೆಂದು ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರು ಏನು ಬೇಕಾದರೂ ಮಾಡಲಿ. ಅವರು ತಪ್ಪು ಮಾಡಿದ್ದಾರೆ” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments