ಸದ್ಯ ಜಾರಿಯಲ್ಲಿರುವ ಶೇ.50ರ ಮೀಸಲಾತಿಯ ಅನ್ವಯ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ನಡೆಸುವ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ. ಮೀಸಲಾತಿ ಹೆಚ್ಚಿಸಿರುವುದರ (ಶೇ.56) ಅನುಸಾರ ಹೊಸದಾಗಿ ನೇಮಕಾತಿ ಅಧಿಸೂಚನೆ ಹೊರಡಿಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಿಸಿ ಒಟ್ಟು ಮೀಸಲು ಪ್ರಮಾಣವನ್ನು ಶೇ.50ರಿಂದ 56ಕ್ಕೆ ಹೆಚ್ಚಿಸಿದ್ದ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯಿದೆ-2022ರ ಅನ್ವಯ ಶೇ.50ಕ್ಕೂ ಹೆಚ್ಚು ಮೀಸಲಾತಿ ನೀಡುವುದನ್ನು ಆಕ್ಷೇಪಿಸಿ, ಡಾ.ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಮಹೇಂದ್ರ ಕುಮಾರ್ ಮಿತ್ರಾ ಮತ್ತಿತರರು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL) ಸಲ್ಲಿಸಿದ್ದರು.
ಈ ಅರ್ಜಿಗಳ ವಿಚಾರಣೆಯನ್ನು ಮಂಗಳವಾರ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ನಡೆಸಿತು.
ಮೀಸಲಾತಿ ಹೆಚ್ಚಳ ಮಾಡಿರುವ ಮಧ್ಯಪ್ರದೇಶ ಸರ್ಕಾರದ ಆದೇಶವನ್ನು ಪ್ರಶ್ನಿಸಿರುವ ಅರ್ಜಿ ಸುಪ್ರೀಂ ಕೋರ್ಟ್ಗೆ ವರ್ಗಾವಣೆಯಾಗಿದ್ದು, ಅದರ ವಿಚಾರಣೆ ಈ ತಿಂಗಳು ನಡೆಯಲಿದೆ. ಇಲ್ಲಿ ಸುಪ್ರೀಂ ಕೋರ್ಟ್ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಆದ್ದರಿಂದ ಶೇ.50ರ ಮೀಸಲಾತಿ ಪ್ರಕಾರ ಮಧ್ಯಂತರ ಆದೇಶ ನೀಡಲಾಗುತ್ತಿದೆ ಎಂದು ನ್ಯಾಯಪೀಠ ತಿಳಿಸಿದೆ.
ಇದಕ್ಕೂ ಮುನ್ನ, ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ”ಪ್ರಸ್ತುತ ಜಾರಿಯಲ್ಲಿರುವ ಶೇ.50ರ ಮೀಸಲಾತಿಯಲ್ಲಿ ನೇಮಕಾತಿ ಮುಂದುವರೆಸುತ್ತೇವೆ. ನ್ಯಾಯಾಲಯ ಹಾಲಿ ಅರ್ಜಿಗಳನ್ನು ನಿರ್ಧರಿಸುವವರೆಗೆ ಹೆಚ್ಚುವರಿ ಶೇ.6 ಮೀಸಲಾತಿ ಅನ್ವಯಿಸುವುದಿಲ್ಲ. ಆಯ್ಕೆ ಪ್ರಕ್ರಿಯೆ ಮುಂದುವರೆಸಲು ಅವಕಾಶ ನೀಡಬೇಕು. ಶೇ.56ರ ಮೀಸಲಾತಿ ಪ್ರಕಾರ ನೇಮಕ ಪ್ರಕ್ರಿಯೆ ನಡೆಸುತ್ತೇವೆ. ಶೇ.50ಕ್ಕೆ ಮಾತ್ರ ಆದೇಶ ನೀಡಿ, ಉಳಿದ ಶೇ.6ಕ್ಕೆ ನ್ಯಾಯಾಲಯ ನಿರ್ಧಾರ ಮಾಡಿದ ಬಳಿಕ ನೇಮಕ ಆದೇಶ ಹೊರಡಿಸಲಾಗುವುದು” ಎಂದರು.


