Homeಕರ್ನಾಟಕಕಾಮಗಾರಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ |ಸಿದ್ದರಾಮಯ್ಯ V/S ಆರ್‌ ಅಶೋಕ್‌ ಟಾಕ್‌ ವಾರ್

ಕಾಮಗಾರಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ |ಸಿದ್ದರಾಮಯ್ಯ V/S ಆರ್‌ ಅಶೋಕ್‌ ಟಾಕ್‌ ವಾರ್

ಕಾಮಗಾರಿಯಲ್ಲಿ ಮುಸ್ಲಿಂರಿಗೆ ಮೀಸಲಾತಿ ನೀಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂಬ ವರದಿ ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಮೀಸಲಾತಿ ನೀಡಬೇಕೆಂಬ ಬೇಡಿಕೆ ಬಂದಿರುವುದು ನಿಜ. ಆದರೆ, ಈ ಕುರಿತು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಸರ್ಕಾರದ ಸಿವಿಲ್ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ಪ್ರಸ್ತಾವನೆ ಸಿಎಂ ಸಿದ್ದರಾಮಯ್ಯ ಸರ್ಕಾರದ ಮುಂದಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಮುಸ್ಲಿಂ ಸಮುದಾಯಕ್ಕೆ ಸರ್ಕಾರದ ಗುತ್ತಿಗೆಯಲ್ಲಿ ಮೀಸಲಾತಿ ತರಲು ಸಲ್ಲಿಕೆಯಾಗಿರುವ ಪ್ರಸ್ತಾವನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ ಎನ್ನಲಾಗಿದ್ದು, ಕಾಯ್ದೆಯಲ್ಲಿ ಸಂಬಂಧಿತ ತಿದ್ದುಪಡಿ ಮಾಡುವಂತೆ ಹಣಕಾಸು ಇಲಾಖೆಗೆ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.

“ಸಂಡೂರು, ಚನ್ನಪಟ್ಟಣ ಮತ್ತು ಶಿಗ್ಗಾಂವಿ ಉಪಚುನಾವಣೆಗೂ ಮುನ್ನ ಮುಸ್ಲಿಂ ಮತಗಳ ಕ್ರೋಡೀಕರಣದ ಮೇಲೆ ಕಣ್ಣಿಟ್ಟಿರುವ ರಾಜ್ಯ ಸರ್ಕಾರದ ಹೇಯ ನಡೆ ಇದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್ ಮೂಲಕ ಟೀಕಿಸಿದ್ದಾರೆ.

“ಟೆಂಡರ್ ಅನ್ನು ಕೆಟಿಟಿಪಿ ಕಾಯ್ದೆಯ ಆಧಾರದ ಮೇಲೆ ನೀಡಬೇಕೇ ವಿನಹ ಜಾತಿ ಪರಿಗಣನೆಯ ಮೇಲೆ ಅಲ್ಲ. ಮುಖ್ಯಮಂತ್ರಿಗಳು ಬೂಟಾಟಿಕೆಯನ್ನಲ್ಲ, ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು” ಎಂದು ಯತ್ನಾಳ್ ಹೇಳಿದ್ದಾರೆ.

ಪ್ರತಿಪಕ್ಷ ನಾಯಕ ಆರ್‌ ಅಶೋಕ್‌ ತಿರುಗೇಟು

ಎಡವಟ್ಟು ಮಾಡೋದು, ಆಮೇಲೆ ಸುಳ್ಳು ಹೇಳೋದು ಇದೇ ಸಿಎಂ ಸಿದ್ದರಾಮಯ್ಯ ಅವರ ದಿನಚರಿ! ಸ್ವಾಮಿ ಮುಖ್ಯಮಂತ್ರಿಗಳೇ, ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಪ್ರಸ್ತಾವನೆಯೇ ಸರ್ಕಾರದ ಮುಂದಿಲ್ಲ ಎಂದು ಸತ್ಯದ ತಲೆಯ ಮೇಲೆ ಹೊಡೆದ ಹಾಗೆ ಸುಳ್ಳು ಹೇಳುತ್ತೀರಲ್ಲಾ, ತಮ್ಮ ಭಂಡತನಕ್ಕೆ ಏನು ಹೇಳೋಣ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ್‌ ಪ್ರಶ್ನಿಸಿದ್ದಾರೆ.

“ಕಾಮಗಾರಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಪ್ರಸ್ತಾವನೆ ಸರ್ಕಾರದ ಮುಂದೆ ಎಂಬ ವರದಿ ಕೆಲ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಮೀಸಲಾತಿ ನೀಡಬೇಕೆಂಬ ಬೇಡಿಕೆ ಬಂದಿರುವುದು ನಿಜ. ಆದರೆ, ಈ ಕುರಿತು ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ” ಮಂಗಳವಾರ ಬೆಳಿಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದರು.

ಸಿದ್ದರಾಮಯ್ಯ ಅವರ ಈ ಸ್ಪಷ್ಟನೆಗೆ ಎಕ್ಸ್‌ ತಾಣದಲ್ಲಿ ಪ್ರತಿಕ್ರಿಯಿಸಿರುವ ಆರ್‌ ಅಶೋಕ್‌ ಅವರು, “ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ 4% ಮೀಸಲಾತಿ ಕೊಡಬೇಕು ಎಂದು ತಮ್ಮ ರಾಜಕೀಯ ಕಾರ್ಯದರ್ಶಿ ನಾಸೀರ್ ಅಹ್ಮದ್, ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಮುಸ್ಲಿಂ ಶಾಸಕರು ಆಗಸ್ಟ್ 24, 2024 ರಂದು ತಮಗೆ ಪತ್ರ ಬರೆಯುತ್ತಾರೆ. ತಾವು ಅದೇ ದಿನವೇ ಈ ಪತ್ರವನ್ನ ಪರಿಶೀಲಿಸಿ ಮಂಡಿಸಿ ಎಂದು ಆರ್ಥಿಕ ಇಲಾಖೆಗೆ ನಿರ್ದೇಶನ ನೀಡಿದ್ದೀರಿ. ಈ ಸಂಬಂಧ ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ತರಲೂ ಸಹ ತಾವು ಅನುಮೋದನೆ ನೀಡಿದ್ದೀರಿ” ಎಂದು ಪತ್ರವನ್ನು ಲಗತ್ತಿಸಿದ್ದಾರೆ.‌

“ಮೀಸಲಾತಿ ಬಗ್ಗೆ ಪತ್ರ ವ್ಯವಹಾರ ನಡೆದಿದ್ದರೂ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವ ಪ್ರಸ್ತಾವನೆಯೇ ಸರ್ಕಾರದ ಮುಂದಿಲ್ಲ ಎಂದು ಹಸಿ ಸುಳ್ಳು ಹೇಳುತ್ತಿರಲ್ಲ, ತಮಗೆ ಕಿಂಚಿತ್ತಾದರೂ ಆತ್ಮಸಾಕ್ಷಿ, ನೈತಿಕತೆ ಅನ್ನುವುದೇ ಇಲ್ಲವೇ? ಸತ್ಯದ ಮೇಲೆ ಪ್ರಮಾಣ ವಚನ ಸ್ವೀಕರಿಸಿ, ಬಾಯಿ ಬಿಟ್ಟರೆ ಬರಿ ಸುಳ್ಳು ಹೇಳುವ ತಮ್ಮನ್ನು ಆ ತಾಯಿ ಚಾಮುಂಡೇಶ್ವರಿ ಮೆಚ್ಚುತ್ತಾಳಾ? ತಮ್ಮನ್ನು ನಂಬಿ ಮತ ಹಾಕಿ ಅಧಿಕಾರ ಕೊಟ್ಟ ಕನ್ನಡಿಗರು ಕ್ಷಮಿಸುತ್ತಾರಾ?” ಎಂದು ಕುಟುಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments