ಧಾರ್ಮಿಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ವಿಧಿಸಿರುವ ಮಾನದಂಡವನ್ನೇ ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ನೇತೃತ್ವದ ನಿಯೋಗ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಮನವಿ ಸಲ್ಲಿಸಿದೆ.
ವಿಕಾಸಸೌಧದಲ್ಲಿ ಈ ಕುರಿತು ಸಚಿವರನ್ನು ಭೇಟಿ ಮಾಡಿದ ನಿಯೋಗ, ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಗಳಲ್ಲಿ ಶೇ. 25 ರಷ್ಟು ಆಯಾ ಮತೀಯ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ನೀಡಬೇಕು ಎಂದು ಕೋರಿದೆ.
“ಭಾಷಾ ಮತ್ತು ಮತೀಯ ಅಲ್ಪಸಂಖ್ಯಾತರಿಗೆ ಸಂವಿಧಾನ ದ ಮೂಲಭೂತ ಹಕ್ಕುಗಳನುಸಾರ ಸರಿ ಸಮನಾದ ನ್ಯಾಯ ಒದಗಿಸಬೇಕು. ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ಶಿಕ್ಷಣ ಸಂಸ್ಥೆ ಗಳನ್ನು ಸ್ಥಾಪಿಸಿ ಭಾಷೆ ಮತ್ತು ಧರ್ಮ ಪೋಷಿಸಿ ಬೆಳೆಸಿಕೊಂಡು ಹೋಗಲು ವಿಶೇಷ ಸ್ಥಾನ ಮಾನ ಸಮಾನವಾಗಿ ಕಲ್ಪಿಸಲಾಗಿದೆ. ಧಾರ್ಮಿಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಗಳಿಗೆ ವಿಧಿಸಿರುವ ಷರತ್ತು ಮಾನದಂಡ ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸಿ ಆದೇಶ ಹೊರಡಿಸಬೇಕಿದೆ” ಎಂದು ನಿಯೋಗ ಹೇಳಿತು.
ಈ ಕುರಿತು ಸಾಧಕ -ಬಾಧಕ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಚಿವರು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್ ಹಾಗೂ ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.