ತೀವ್ರ ಕುತೂಹಲ ಕೆರಳಿಸಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಸಂಬಂಧ ನಟ ದರ್ಶನ್ ಮತ್ತವರ ಗೆಳತಿ ನಟಿ ಪವಿತ್ರಾಗೌಡ ಸೇರಿದಂತೆ 17 ಮಂದಿ ಆರೋಪಿಗಳ ವಿರುದ್ಧ ಸುಮಾರು 3991 ಪುಟಗಳ ಆರೋಪ ಪಟ್ಟಿ (ಚಾರ್ಜ್‌ಶೀಟ್) ಅನ್ನು ಬುಧವಾರ (ಸೆ.4) ಕೋರ್ಟ್‌ಗೆ ಸಲ್ಲಿಸಲಾಗಿದೆ.
ಬೆಂಗಳೂರು ನಗರದ 24ನೇ ಎಸಿಎಂಎಂ ನ್ಯಾಯಾಲಯಕ್ಕೆ 231 ಸಾಕ್ಷಿದಾರರನ್ನು ಒಳಗೊಂಡ 3991 ಪುಟಗಳುಳ್ಳ 7 ಸಂಪುಟಗಳ 10 ಕಡತಗಳನ್ನು ಹೊಂದಿದ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿದೆ.
ರೇಣುಕಾಸ್ವಾಮಿ ಕೊಲೆ ಸಂಬಂಧ ಎಫ್ಐಆರ್ ದಾಖಲಿಸುವಾಗ ದರ್ಶನ್ ಎ2 ಆರೋಪಿ ಆಗಿದ್ದರೆ, ಪವಿತ್ರಾ ಗೌಡ ಎ1 ಆರೋಪಿ ಆಗಿದ್ದರು. ಇದನ್ನು ಚಾರ್ಜ್ಶೀಟ್ನಲ್ಲಿ ಬದಲಿಸಬಹುದು ಎಂದು ಊಹಿಸಲಾಗಿತ್ತು. ಆದರೆ ದೋಷಾರೋಪಣಾ ಪಟ್ಟಿಯಲ್ಲಿ ದರ್ಶನ್ ಎ1 ಹಾಗೂ ಪವಿತ್ರಾ ಎ2 ಆಗಲಿದ್ದಾರೆ ಎನ್ನಲಾಗಿತ್ತು.
ಆದರೆ ಇವೆಲ್ಲಾ ಊಹಾಪೋಹಗಳಿಗೆ ತೆರೆ ಎಳೆದ ಎಸಿಪಿ ಚಂದನ್ ಕುಮಾರ್ ಮತ್ತವರ ತನಿಖಾ ತಂಡ ದರ್ಶನ್ ಅವರನ್ನು ಎರಡನೇ ಆರೋಪಿ ಆಗಿ ಉಲ್ಲೇಖ ಮಾಡಿದೆ.ಇದು ನಟ ದರ್ಶನ್ ಅಭಿಮಾನಿಗಳಿಗೆ ಕೊಂಚ ನೆಮ್ಮದಿ ತಂದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಇಲ್ಲಿಯವರೆಗಿನ ತನಿಖೆಯಲ್ಲಿನ ಸಂಗ್ರಹಿಸಿರುವ ಪ್ರತ್ಯಕ್ಷ, ಸಾಧರ್ಭಿಕ, ತಾಂತ್ರಿಕ, ವೈಜ್ಞಾನಿಕ ಹಾಗೂ ಇತರೆ ಸಾಕ್ಷ್ಯಾಧಾರಗಳಿಂದ 17 ಆರೋಪಿತರ ಮಾನ್ಯ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಸುದ್ದಿಗಾರರಿಗೆ ತಿಳಿಸಿದರು.
ಪ್ರಕರಣದಲ್ಲಿ ಮೂರು ಪ್ರತ್ಯಕ್ಷ ಸಾಕ್ಷಿದಾರರು, ನಗರದ ಎಫ್ ಎಸ್ಎಲ್,ಹೈದರಾಬಾದ್ ನ
ಸಿಎಪ್ಎಸ್ಎಲ್ 8 ವರದಿಗಳು,161ಹಾಗೂ 164 ರಲ್ಲಿ 27 164 ಸಿಆರ್‌ಪಿಸಿ ಅಡಿಯಲ್ಲಿನ ಸಾಕ್ಷಿದಾರರು ಸೇರಿ ಹೇಳಿಕೆ 59 ಪಂಚನಾಮೆಗಳು ದೋಷಾರೋಪಣಾ ಪಟ್ಟಿಯಲ್ಲಿ ಸೇರಿವೆ.
ತಹಸಿಲ್ದಾರ್, ವೈದ್ಯರು, ಆರ್‌ಟಿಒ, ಅಭಿಯಂತರರು,ಇತರೆ ಸರ್ಕಾರಿ ಅಧಿಕಾರಿಗಳು ಸೇರಿ 8 ಹಾಗೂ 56 ಪೊಲೀಸರು ಸೇರಿ 231 ಸಾಂದರ್ಭಿಕ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಸಿದ್ದಪಡಿಸಿರುವ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ಹೇಳಿದರು.
ಇನ್ನು ಹೆಚ್ಚಿನ ತನಿಖೆಯನ್ನು ಕೈಗೊಂಡು ಸಂಗ್ರಹವಾಗುವ ಸಾಕ್ಷಾಧಾರಗಳನ್ನು ಕಲಂ- 173(8) ಸಿಆರ್ ಪಿಸಿ ಅಡಿಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿಸಿ ಹಲ್ಲೆ ಮಾಡಿದ್ದು, ಕೊಲೆ ಬಳಿಕ ಕೃತ್ಯ ಮುಚ್ಚಿಹಾಕಲು ಹಣ ನೀಡಿದ್ದು ಆರೋಪಿ ದರ್ಶನ್ ಎನ್ನುವುದು ಚಾರ್ಜ್ಶೀಟ್ನಲ್ಲಿ ಉಲ್ಲೇಖಗೊಂಡಿದೆ.
ದರ್ಶನ್ ಬಟ್ಟೆ ಮತ್ತು ಶೂನಲ್ಲಿ ರೇಣುಕಾಸ್ವಾಮಿ ಅವರ ರಕ್ತ ಇರುವುದು ಪತ್ತೆ ಆಗಿರುವುದರಿಂದ ದರ್ಶನ್ ಹಲ್ಲೆ ಮಾಡಿರುವ ಬಗ್ಗೆ ಮತ್ತು ಕೊಲೆಯಲ್ಲಿ ಭಾಗಿಯಾದ ಬಗ್ಗೆ ಖಚಿತ ಮಾಹಿತಿ ದೊರೆತಂತಾಗಿದೆ.
ಕೊಲೆ ಮಾಡಲು ಮೂಲ ಕಾರಣ ಪವಿತ್ರಾ ಗೌಡ ಅವರಾಗಿರುವುದರಿಂದ ಆಕೆ ಎ1 ಆಗಿದ್ದಾರೆ. ಹಲ್ಲೆ ನಡೆಯುವ ಸ್ಥಳದಲ್ಲಿ ಅವರು ಹಾಜರಿದ್ದರು. ಚಪ್ಪಲಿಯಲ್ಲಿ ಅವರು ಹೊಡೆದಿದ್ದಾರೆ. ಕೃತ್ಯ ನಡೆದ ಸಮಯದಲ್ಲಿ ಪವಿತ್ರ ಗೌಡ ಅಲ್ಲೇ ಇರುವುದಕ್ಕೆ ಸಾಕ್ಷಿ ಸಿಕ್ಕಿದೆ. ಪವಿತ್ರ ಗೌಡ ಮೊಬೈಲ್ ಕೃತ್ಯದ ಸ್ಥಳದಲ್ಲಿ ಆಕ್ಟೀವ್ ಆಗಿರುವುದು ಚಾರ್ಜ್ಶೀಟ್ನಲ್ಲಿ ಪ್ರಸ್ತಾಪಗೊಂಡಿದೆ.
ಈ ಪ್ರಕರಣದ ತನಿಖೆಯು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಗಿರೀಶ್.ಎಸ್ ನೇತೃತ್ವದ ಎಸಿಪಿ ಚಂದನ್ ಕುಮಾರ್.ಎನ್ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಒಳಗೊಂಡ ತನಿಖಾ ತಂಡವು ಕೈಗೊಂಡಿತ್ತು.ಹಗಲಿರುಳು ಶ್ರಮವಹಿಸಿ ವೈಜ್ಞಾನಿಕ ತಾಂತ್ರಿಕ ಸೇರಿದಂತೆ ಎಲ್ಲಾ ಅಯಾಮಗಳಲ್ಲಿ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಆರೋಪಪಟ್ಟಿ ಸಿದ್ಧಪಡಿಸಿದೆ.