Homeಕರ್ನಾಟಕರೇಣುಕಾಸ್ವಾಮಿ‌ ಕೊಲೆ ಪ್ರಕರಣ | ಎಸ್‌ಪಿಪಿ ಬದಲಾವಣೆ ವಿಚಾರ ಸರ್ಕಾರದ ಮುಂದಿಲ್ಲ: ಸಚಿವ ಪರಮೇಶ್ವರ್

ರೇಣುಕಾಸ್ವಾಮಿ‌ ಕೊಲೆ ಪ್ರಕರಣ | ಎಸ್‌ಪಿಪಿ ಬದಲಾವಣೆ ವಿಚಾರ ಸರ್ಕಾರದ ಮುಂದಿಲ್ಲ: ಸಚಿವ ಪರಮೇಶ್ವರ್

‌ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸರ್ಕಾರಿ ಅಭಿಯೋಜಕರ ಬದಲಾವಣೆಯ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಹೇಳಿದರು‌.

ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಎಸ್‌ಪಿಪಿ ಬದಲಾವಣೆಯ ಪ್ರಸ್ತಾವನೆ ಸರ್ಕಾರದ ಮುಂದೆ ಇರುವುದು ನನ್ನ ಗಮನಕ್ಕೆ ಬಂದಿಲ್ಲ. ಬದಲಾವಣೆ ಮಾಡಿದರು ಸಹ ಅದರಲ್ಲೇನು ತಪ್ಪಿಲ್ಲ. ಕಾರಣ ಇಟ್ಟುಕೊಂಡೇ ತೀರ್ಮಾನ ತೆಗೆದುಕೊಳ್ಳಲಾಗಿರುತ್ತದೆ” ಎಂದು ಸ್ಪಷ್ಟಪಡಿಸಿದರು.

“ಕಾನೂನು ಸಲಹೆಗಾರರು ಏನೆಲ್ಲ ಸಲಹೆಗಳನ್ನು ನೀಡುತ್ತಾರೋ ಅದರ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಎಲ್ಲರು ‌ಸ್ಟ್ರಿಕ್ಟ್ ಆಗಿಯೇ ಇರಬೇಕಲ್ಲವೇ? ಕಾನೂನು ಬಿಟ್ಟು ಯಾರು ಕೆಲಸ ಮಾಡಲಾಗುವುದಿಲ್ಲ. ಕಾನೂನು ಪ್ರಕಾರವೇ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಕೆಲಸ ಮಾಡಬೇಕು. ಯಾರನ್ನೇ ನೇಮಿಸಿದರು ಸಹ ಕಾನೂನು ಪುಸ್ತಕ ಒಂದೇ ಅಲ್ಲವೇ? ಅದರ ಪ್ರಕಾರವೇ ಕೆಲಸ ಮಾಡಬೇಕಾಗುತ್ತದೆ” ಎಂದರು.

“ರೇಣುಕಾಸ್ವಾಮಿ‌ ಕೊಲೆ ಪ್ರಕರಣವನ್ನು ಸಡಿಲ ಮಾಡುವಂತಹ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ. ಮುಲಾಜಿಲ್ಲದೇ, ಯಾವುದೇ ರೀತಿಯ ಒತ್ತಡಕ್ಕೆ ಒಳಗಾಗದೇ ಪ್ರಕರಣದ ತನಿಖೆ ನಡೆಯುತ್ತಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಅವರನ್ನು ಬದಲಾಯಿಸುವ ಸಂದರ್ಭ ಬಂದರೆ ಕಾರಣ ಇರುತ್ತದೆ. ಇಲ್ಲದೇ ಮಾಡುವುದಿಲ್ಲ‌” ಎಂದು ಹೇಳಿದರು‌.

“ನಟ ದರ್ಶನ್ ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ನಾಪತ್ತೆ ಪ್ರಕರಣವನ್ನು ಪೊಲೀಸರು ಪರಿಶೀಲನೆ ಮಾಡುತ್ತಾರೆ. ಈ ಪ್ರಕರಣವನ್ನು ತನಿಖೆ ಮಾಡಬೇಕಾಗುತ್ತದೆ ಅನ್ನಿಸಿದರೆ ತೀರ್ಮಾನ ಮಾಡುತ್ತಾರೆ‌. ಸರ್ಕಾರದ ಅನುಮತಿ ಬೇಕಾದರೆ ನೀಡಲಾಗುವುದು” ಎಂದು ತಿಳಿಸಿದರು.

“ಶ್ರೀಧರ್ ಎಂಬುವನ ಆತ್ಮಹತ್ಯೆ ಪ್ರಕಣದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ದರ್ಶನ್ ಪ್ರಕರಣಕ್ಕು ಶ್ರೀಧರ್ ಎಂಬುವರ ಆತ್ಮಹತ್ಯೆಗು ಸಂಬಂಧ ಇದ್ದರೆ ತನಿಖೆ ಮಾಡುತ್ತಾರೆ. ಪ್ರತ್ಯೇಕವಾಗಿ ತನಿಖೆ ನಡೆಸಬೇಕು ಅಂತ ಸರ್ಕಾರವನ್ನು ಕೇಳುತ್ತಾರೆ. ಕಾರಣಗಳನ್ನು ಆಧರಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಮರುತನಿಖೆ ನಡೆಸಲು ಅನುಮತಿ ಕೇಳಿದರೆ ನೀಡಲಾಗುವುದು” ಎಂದರು.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿಯವರು ರಸ್ತೆ ತಡೆ, ಸಿಎಂ ಅವರಿಗೆ ಘೇರಾವ್ ಹಾಕಲು ನಿರ್ಧರಿಸಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಇದಕ್ಕೆ ಏನೇನು ಕ್ರಮ ಕೈಗೊಳ್ಳಬೇಕು ತೆಗೆದುಕೊಳ್ಳುತ್ತೇವೆ. ರಸ್ತೆ ತಡೆ ನಡೆಸಲು ಕೆಲವು ಸಲ ಪೊಲೀಸರು ಅರ್ಧ ಗಂಟೆ ಅನುಮತಿ ಕೊಡುತ್ತಾರೆ. ಆ ರೀತಿ ಅನುಮತಿ ಕೊಟ್ಟಿದ್ದರೆ ಸಮಂಜಸವಾಗಿರುತ್ತದೆ. ರಸ್ತೆ ತಡೆ ನಡೆಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅದರ ಹಿನ್ನೆಲೆಯಲ್ಲಿ ಏನೆಲ್ಲ ಕ್ರಮ ತೆಗೆದುಕೊಳ್ಳುತ್ತೇವೆ” ಎಂದರು.

“ಸರ್ಕಾರವು ಪೆಟ್ರೋಲ್, ಡೀಸೆಲ್ ಬೆಲೆ ಏರಿಸಿ ತೀರ್ಮಾನ ಮಾಡಿ, ಈಗಾಗಲೇ ಪ್ರಕಟಣೆ ಹೊರಡಿಸಿದೆ. ಜನ ಹಣ ಪಾವತಿಸುತ್ತಿದ್ದಾರೆ. ರಾಜ್ಯದಲ್ಲಿ ಇಂಧನ ಬೆಲೆ ಕಡಿಮೆ ಇರುವುದರಿಂದ ಪಕ್ಕದ ರಾಜ್ಯದವರು ಸಹ ಇಲ್ಲಿಗೆ ಬಂದು ತೆಗೆದುಕೊಂಡು ಹೋಗುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡುವ ಪ್ರಶ್ನೆ ಬರುವುದಿಲ್ಲ” ಎಂದು ಹೇಳಿದರು‌.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments