ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿ ಜೈಲು ಸೇರಿದ್ದ ಪವಿತ್ರಾ ಗೌಡ ಮಂಗಳವಾರ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿದ್ದಾರೆ.
ಕಳೆದ 6 ತಿಂಗಳ ಹಿಂದೆ ಜೈಲು ಸೇರಿದ್ದ ದರ್ಶನ್ ಗೆಳತಿ ಪವಿತ್ರಾ ಗೌಡ ಮತ್ತು ಇತರರಿಗೆ ಶುಕ್ರವಾರ ಹೈಕೋರ್ಟ್‌ನ ನ್ಯಾ. ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿತ್ತು. ಸೋಮವಾರ ಜಾಮೀನು ಪ್ರಕ್ರಿಯೆಗಳು ಎಲ್ಲ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಪವಿತ್ರಾ ಗೌಡ ಜೊತೆ 14ನೇ ಆರೋಪಿ ಪ್ರದೂಶ್ ಬಿಡುಗಡೆಯಾಗಿದ್ದಾನೆ. ಎಲ್ಲ ಆರೋಪಿಗಳು ತಲಾ 1 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಇಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ನೀಡಬೇಕು ಸೇರಿದಂತೆ ಹಲವು ಷರತ್ತುಗಳನ್ನು ಕೋರ್ಟ್ ವಿಧಿಸಿದೆ.
ಆರೋಪಿಗಳನ್ನು ಬಂಧಿಸಿದ ನಂತರ ಪ್ರಾಸಿಕ್ಯೂಷನ್ ತಕ್ಷಣವೇ ಇವರನ್ನು ಯಾಕೆ ಬಂದಿಸಿದ್ದೇವೆ ಎನ್ನುವುದಕ್ಕೆ ಸರಿಯಾದ ಕಾರಣ ನೀಡಿಲ್ಲ. ಹೀಗಾಗಿ ಕಾನೂನಿನ ಈ ಲೋಪದ ಆಧಾರದಡಿ ಎಲ್ಲರ ಜಾಮೀನು ಅರ್ಜಿಗಳನ್ನು ಪುರಸ್ಕರಿಸಲಾಗುತ್ತಿದೆ ಎಂದು ನ್ಯಾಯಪೀಠ ತನ್ನ 68 ಪುಟಗಳ ತೀರ್ಪಿನಲ್ಲಿ ಹೇಳಿತ್ತು.
ದರ್ಶನ್ ಕೂಡ ರಿಲೀಫ್
ಒಂದೂವರೆ ತಿಂಗಳ ಹಿಂದೆಯೇ ಅನಾರೋಗ್ಯ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದ ನಟ ದರ್ಶನ್ ಪೂರ್ಣ ಪ್ರಮಾಣದ ಜಾಮೀನು ಸಿಕ್ಕಿರುವುದರಿಂದ ದರ್ಶನ್ ಕೂಡ ರಿಲೀಫ್ ಆಗಿದ್ದಾರೆ. ನಿನ್ನೆಯಷ್ಟೇ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿ ಮನೆಗೆ ತೆರಳಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ಪವಿತ್ರಾ ಗೌಡಳನ್ನು ಕರೆದುಕೊಂಡು ಹೋಗಲು ಅವರ ಕುಟುಂಬಸ್ಥರು ಜೈಲಿನ ಬಳಿ ಬಂದಿದ್ದಾರೆ. ಅಪ್ಪ, ಅಮ್ಮ ಹಾಗೂ ಸಹೋದರ ಆಗಮಿಸಿದ್ದಾರೆ. ಇದೇ ಸಂದರ್ಭದಲ್ಲಿ ಪವಿತ್ರಾ ಗೌಡ ಅವರ ತಾಯಿ ಪರಪ್ಪನ ಅಗ್ರಹಾರ ಜೈಲಿನ ಬಳಿ ಇರುವ ಮುನೇಶ್ವರ ದೇಗುಲಕ್ಕೆ ಪೂಜೆ ಸಲ್ಲಿಸಿದರು. ಜೈಲಿಂದ ರಿಲೀಸ್ ಆಗಿ ಆರ್.ಆರ್ ನಗರದ ಮನೆಗೆ ಪವಿತ್ರಾಗೌಡ ತೆರಳಿದ್ದಾರೆ.
ಮಾಜಿ ಪತಿ ಸಂತಸ
ನಟಿ ಪವಿತ್ರಾ ಜಾಮೀನು ಪಡೆದು ಜೈಲಿನಿಂದ ಹೊರ ಬಂದ ವಿಷಯ ತಿಳಿದು ಮಾಜಿ ಪತಿ ಸಂಜಯ್ ಸಿಂಗ್ ಸಂತಸ ವ್ಯಕ್ತ ಪಡಿಸುತ್ತಿದ್ದಾರೆ ಅಲ್ಲದೆ ತಮ್ಮ ಮಗಳಾದ ಖುಷಿಯನ್ನು ಸಂಪರ್ಕ ಮಾಡುವುದಾಗಿಯೂ ಹೇಳಿದ್ದಾರೆ. ಆದರೆ ಈಗಲೂ ಪವಿತ್ರಾ ಗೌಡ ತಪ್ಪು ಮಾಡಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಪವಿತ್ರ ಗೌಡ ಕಾರಣ ಆಗಿರಬಹುದು ಆದರೆ ಆಕೆ ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ.